ಹಳ್ಳಿಗಳು ಅಂತಃಕರಣ ಹಾಗೂ ತಾಯ್ತನದ ವಾತ್ಸಲ್ಯ ಕಳೆದುಕೊಂಡು ಬರಡಾಗುತ್ತಿವೆ. ಈ ಕಾಲಘಟ್ಟದ ಹಳ್ಳಿಗರಲ್ಲಿ ಅನಾಥಪ್ರಜ್ಞೆ ಮಡುಗಟ್ಟಿದೆ ಎಂದು ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.
ಹುಲಸೂರಿನ ಎಂಕೆಕೆಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಮಾರೋಪ ಮಾತುಗಳನ್ನಾಡಿದ ಅವರು, ‘ವ್ಯಕ್ತಿ ಬದುಕಿನಲ್ಲಿ, ಹಳ್ಳಿಯ ಸಮುದಾಯಗಳಲ್ಲಿ ಇರುವ
ಸಾವಯವ ಸಂಬಂಧಗಳು ಹಿಂದೆಂದಿಗಿಂತಲೂ ಹೆಚ್ಚು ಕುಸಿದಿವೆ’ ಎಂದರು.
“ವಚನಗಳ, ಗಾಂಧಿ ಮತ್ತು ಅಂಬೇಡ್ಕರ್ ಅವರ ಬರಹ, ಚಿಂತನೆಗಳ ತಾತ್ವಿಕತೆಗೆ ಇಂದಿನ ಯುವ ಸಮುದಾಯ ಹೆಚ್ಚು ಎದುರುಗೊಳ್ಳಬೇಕಿದೆ . ಅವುಗಳ ಗಂಭೀರ ಅನುಸಂಧಾನದಿಂದ ಇಂದಿನ ಹಲವು ಬಿಕ್ಕಟ್ಟುಗಳನ್ನು ದಾಟಬಹುದು. ಪಠ್ಯದ ನಿಕಟ ಓದಿನಿಂದ, ಹೊಸ ಹೊಸ ವಿಮರ್ಶೆ, ಸಂಶೋಧನೆಗಳ ಅನುಸಂಧಾನದಿಂದ ಪ್ರಭುತ್ವದ ನೆಲೆ, ಆರ್ಥಿಕ ಸಂಬಂಧಗಳು, ಸಮಾಜದ ಸಂಕೀರ್ಣತೆಗಳು ಅರಿಯಬಹುದು” ಎಂದರು.
“ಅಭಿವೃದ್ಧಿ ಮತ್ತು ಭೌತಿಕ ಬೆಳವಣಿಗೆಯ ನೆಪದಲ್ಲಿ ಪ್ರಕೃತಿಯ ಮೇಲೆ ಭಯಂಕರ ಹಲ್ಲೆ ಎಸಗಲಾಗುತ್ತಿದೆ. ನೀರು, ನೆಲ, ಕಾಡು ಒಳಗೊಂಡಿದ್ದು ಒಟ್ಟು ಒಂದು ಜೀವಜಾಲದ ವ್ಯವಸ್ಥೆಯಾಗಿದೆ; ಹೊರತು, ಮನುಷ್ಯನ ಭೌತಿಕ ಸಂಗತಿಗಳು, ಅಧಿಕಾರ, ಅಂತಸ್ತುಗಳಷ್ಟೇ ಜಗತ್ತಲ್ಲ” ಎಂದರು.
ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಕಾಂಬಳೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ರಾಷ್ಟ್ರೀಯ ಸೇವಾ ಯೋಜನೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುತ್ತದೆ. ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸಿ, ಆರೋಗ್ಯ ಪ್ರಜ್ಞೆ ಮೂಡಿಸುತ್ತದೆ. ಜ್ಞಾನ ವಿಸ್ತಾರಕ್ಕೆ ದಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ ಹೆಚ್ಚಿಸುತ್ತದೆ’ ಎಂದರು.
ಪತ್ರಕರ್ತ ರಾಜಕುಮಾರ ಹೊನ್ನಾಡೆ ಮಾತನಾಡಿ, ‘ಈ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆದು ಶೈಕ್ಷಣಿಕವಾಗಿ ಮುಂದುವರಿಯಲು ಈ ಕಾಲೇಜು ದಾರಿದೀಪವಾಗಿದೆ. ಮಕ್ಕಳಿಗೆ ಪದವಿ, ಸ್ನಾತಕೋತ್ತರ ಪದವಿಗಳು ಪಡೆದು ಮುಂದೆ ಸಂಶೋಧನಾ ಅಧ್ಯಯನದ ಪ್ರವೇಶಕ್ಕೆ ಈ ಕಾಲೇಜು ಹೆಬ್ಬಾಗಿಲು ಆಗಲಿ’ ಎಂದರು.
ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಡಾ. ಲಕ್ಷ್ಮೀಕಾಂತ ಸಿ. ಪಂಚಾಳ ಅವರು ಪ್ರಾಸ್ತಾವಿಕ ಮಾತನಾಡಿ, ‘ಹೊಸ ತಿಳುವಳಿಕೆಗೆ, ಸಮಾಜದ ಗ್ರಹಿಕೆಗೆ, ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಗೆ , ಸಹಬಾಳ್ವೆಗೆ ಎನ್ನೆಸ್ಸೆಸ್ ತಳಹದಿಯಾಗಿದೆ’ ಎಂದರು.
ಇದನ್ನೂ ಓದಿ: ಬೀದರ್ | ಏ.11ರಂದು ಜಿಲ್ಲೆಗೆ ಸಿಎಂ ಆಗಮನ : ಬೇಡಿಕೆಗೆ ಆಗ್ರಹಿಸಿ ಕಾರಂಜಾ ಸಂತ್ರಸ್ತರ ಪ್ರತಿಭಟನೆ
ಐಕ್ಯುಎಸಿ ಸಂಯೋಜಕ ದಿಲೀಪ್ ಪತಂಗೆ,
ಪುಷ್ಪಾ ಕೋರೆ, ಡಾ.ಮಾರುತಿಕುಮಾರ, ಡಾ.ನಾಗರೆಡ್ಡಿ, ನಾಗಭೂಷಣ ಕೆ, ಶಕೀಲ್ ಅಹ್ಮದ್, ಬಾಬುಸಿಂಗ್, ಶಾಂತಲಿಂಗ ಧಬಾಲೆ, ಹಣಮಂತ ದಾಸೂರೆ, ಡಾ. ರೂಪೇಶ್ ಭೋಸ್ಲೆ, ಸಂಜುಕುಮಾರ ಮೊದಲಾದವರು ಇದ್ದರು. ವೈಷ್ಣವಿ ನಿರೂಪಿಸಿದರು. ಭವಾನಿ ಸ್ವಾಗತಿಸಿದರು. ರೇಣುಕಾ ವಂದಿಸಿದರು.




