ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಹಾಗೂ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಸೋಮವಾರ ಚಾಲನೆ ನೀಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಪತ್ರಕರ್ತರು ರಾಜಕಾರಣಿಗಳಿಗೆ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಾರೆ. ಅದೇ ರೀತಿ ಕ್ರೀಡಾಕೂಟದಲ್ಲಿಯೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾಸ್ಫೂರ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತರು ಪ್ರತಿನಿತ್ಯ ಸುದ್ದಿಗಳ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ವೃತ್ತಿಯ ಜತೆಗೆ ಕ್ರೀಡಾಕೂಟಗಳಲ್ಲಿಯೂ ಪಾಲ್ಗೊಳ್ಳುವುದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಪತ್ರಕರ್ತರು ವೃತ್ತಿಪರ ಕ್ರೀಡಾಪಟುಗಳಿಗೂ ಕಡಿಮೆಯಿಲ್ಲದಂತೆ ಕ್ರಿಕೆಟ್ ಆಡುತ್ತಿರುವುದನ್ನು ಗಮನಿಸಿದ್ದೇನೆ. ಅವರ ಕ್ರೀಡಾ ಉತ್ಸಾಹ ಮೆಚ್ಚುವಂತಿದೆ ಎಂದರು.
ರಾಜ್ಯದ 23 ಜಿಲ್ಲೆಗಳಿಂದ 24 ತಂಡಗಳು ಪಾಲ್ಗೊಂಡಿರುವುದು ಹಬ್ಬದ ವಾತಾವರಣ ಸೃಷ್ಟಿಸಿದ್ದು, ಭಾವನಾತ್ಮಕ ಸಂತಸವನ್ನು ಮೂಡಿಸಿದೆ. ಹಿಂದೆ ಮನೆಗೆ ನೆಂಟರು ಬಂದಾಗ ಅವರಿಗೆ ಊಟೋಪಚಾರ ಮಾಡಿ ಸಂತಸಪಡುವ ಸಂಪ್ರದಾಯವಿತ್ತು. ಅದೇ ರೀತಿಯಲ್ಲಿ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಕೊಡಗಿಗೆ ಆಗಮಿಸಿ ಹಬ್ಬದಂತೆ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ. ಇಂತಹ ರಾಜ್ಯಮಟ್ಟದ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಸಂಘಟಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲು-ಗೆಲುವು ಸಹಜ. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿದ್ದು, ಯಾರೂ ಕ್ರೀಡಾ ಶಿಸ್ತಿನ ಲಕ್ಷ್ಮಣರೇಖೆ ದಾಟಬಾರದು ಎಂದು ಹೇಳಿದರು.
ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜಿಸುವಲ್ಲಿ ಹಲವರ ಪರಿಶ್ರಮವಿದೆ. ಇಂತಹ ಕ್ರೀಡಾ ಉತ್ಸವದ ಮೌಲ್ಯವನ್ನು ಹಣದಲ್ಲಿ ಅಳೆಯಲು ಸಾಧ್ಯವಿಲ್ಲ. ಕ್ರೀಡಾಕೂಟ ಯಶಸ್ವಿಯಾಗಲು ಪ್ರಾಯೋಜಕರ ಸಹಕಾರವೂ ಅತ್ಯಂತ ಮುಖ್ಯವಾಗಿದೆ. ಮುಂದಿನ ಬಾರಿ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜಿಸಲಾಗುವುದು ಎಂದು ಪ್ರಕಟಿಸಿದರು.
ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ಕ್ಷೇತ್ರ ನಾಲ್ಕನೇ ಅಂಗವಾಗಿ ಮಹತ್ವದ ಪಾತ್ರ ವಹಿಸುತ್ತಿದೆ. ಪತ್ರಕರ್ತರು ಕ್ರಿಕೆಟ್ ಮಾತ್ರವಲ್ಲದೆ ಇತರ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಪತ್ರಕರ್ತರು ಕೊಡಗಿನ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಅವುಗಳ ವೈಶಿಷ್ಟ್ಯ ಕುರಿತು ವಿಶೇಷ ಲೇಖನಗಳನ್ನು ಬರೆಯಬೇಕು ಎಂದು ಸಲಹೆ ನೀಡಿದರು.

ಹೈಕೋರ್ಟ್ ಹಿರಿಯ ವಕೀಲ ಚಂದ್ರಮೌಳಿ ಮಾತನಾಡಿ, ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಹೆಸರು ಗಳಿಸಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಪತ್ರಕರ್ತರು ಕೊಡಗಿನ ಆತಿಥ್ಯ ಹಾಗೂ ಇಲ್ಲಿನ ವಿಶೇಷ ಅನುಭವಗಳನ್ನು ನೆನಪಿನಲ್ಲಿ ಉಳಿಸಿಕೊಂಡು ತೆರಳಬೇಕು ಎಂದರು.
ಸಂಘದ ರಾಜ್ಯ ನಿರ್ದೇಶಕ ಎನ್. ರವಿಕುಮಾರ್ ಟೆಲಕ್ಸ್ ಮಾತನಾಡಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ 12 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಸದಸ್ಯತ್ವ ಹೊಂದಿದ್ದು, ಕ್ರೀಡೆ, ಸಾಂಸ್ಕೃತಿಕ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಕಬ್ಬು ಬೆಳೆಗಾರರ ಬದುಕಿಗೆ ಸಿಹಿಯಾಗದ ಕಬ್ಬಿನ ಬೆಲೆ!
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ರಾಜ್ಯದ 23 ಜಿಲ್ಲೆಗಳಿಂದ 24 ತಂಡಗಳು ಭಾಗವಹಿಸಿರುವುದು ವಿಶೇಷ. ಸಂಘದಿಂದ ಸಭೆ, ಸಮಾರಂಭ ಹಾಗೂ ಸಮಾವೇಶಗಳನ್ನು ಆಯೋಜಿಸುವುದು ಸಾಮಾನ್ಯವಾದರೂ, ಕ್ರೀಡಾಕೂಟ ಸಂಘಟಿಸುವುದು ವಿಭಿನ್ನ ಪ್ರಯತ್ನವಾಗಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪತ್ರಕರ್ತರು ಭೇಟಿ ನೀಡುವುದರ ಜತೆಗೆ ಪರಸ್ಪರ ಬಾಂಧವ್ಯ ಬೆಳೆಸಿಕೊಳ್ಳಲು ಈ ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ ಎಂದರು.
ಈ ವಿಶೇಷ ವರದಿ ಓದಿದ್ದೀರಾ? ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ
ಕಾರ್ಯಕ್ರಮದಲ್ಲಿ ರಿಪಬ್ಲಿಕ್ ನೆಟ್‌ವರ್ಕ್ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಬಿ. ಭಾರತೀಶ್, ಸಂಘದ ರಾಜ್ಯ ನಿರ್ದೇಶಕಿ ಬಿ.ಆರ್. ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಬಿ.ಸಿ. ಲೋಕೇಶ್, ಉಪಾಧ್ಯಕ್ಷ ಮತ್ತಿಕರೆ ಜಯರಾಮ್, ಕಾರ್ಯದರ್ಶಿಗಳಾದ ಸೋಮಶೇಖರ ಕೆರೆಗೋಡು, ಪುಂಡಲೀಕ ಬಿ. ಬಾಳೋಜಿ, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ, ಭವಾನಿಸಿಂಗ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಕ್ರೀಡಾ ಸಮಿತಿ ಸಂಚಾಲಕ ಸಂತೋಷ್ ರೈ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ತಹಶೀಲ್ದಾರ್ ಶ್ರೀಧರ್ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.




