ರಾಜ್ಯದ ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಹಾಗೂ ಯುವ ಆಟಗಾರರ ಕ್ರೀಡಾ ಸಾಮರ್ಥ್ಯ ಅನಾವರಣಗೊಳಿಸುವ ಉದ್ದೇಶದಿಂದ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್-2026ಕ್ಕೆ ಅದ್ಧೂರಿ ಚಾಲನೆ ದೊರೆತಿದೆ.
ನಗರದ ಕನಕದಾಸನಗರದಲ್ಲಿರುವ ಹೆಲ್ತ್ ಸಿಟಿ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನ.1ರಿಂದ ಆರಂಭವಾಗಿರುವ ಏಳು ದಿನಗಳ ರಾಜ್ಯಮಟ್ಟದ ಪಂದ್ಯಾವಳಿ ನ.7ರವರೆಗೆ ನಡೆಯಲಿದೆ.
ಮೈಸೂರು ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿರುವ ಈ ಬೃಹತ್ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 1,120ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಲವು ಆಟಗಾರರು ಕಣಕ್ಕಿಳಿದಿರುವುದು ಪಂದ್ಯಾವಳಿಯ ವಿಶೇಷತೆಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಅತಿ ದೊಡ್ಡ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಇದೂ ಒಂದಾಗಿದ್ದು, ವಿವಿಧ ವಯೋಮಾನದ ಹಾಗೂ ಸ್ಪರ್ಧಾ ವಿಭಾಗಗಳ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ಕಲ್ಪಿಸಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಆಟಗಾರರ ಭಾಗವಹಿಸುವಿಕೆಯಿಂದ ಪಂದ್ಯಾವಳಿಗೆ ಕ್ರೀಡಾಸ್ಫೂರ್ತಿಯ ಮೆರುಗು ಬಂದಿದೆ.
ಈ ವಿಶೇಷ ವರದಿ ಓದಿದ್ದೀರಾ? ಕಬ್ಬು ಬೆಳೆಗಾರರ ಬದುಕಿಗೆ ಸಿಹಿಯಾಗದ ಕಬ್ಬಿನ ಬೆಲೆ!
ಮೈಸೂರು ಭಾಗದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯ ಬೆಳವಣಿಗೆ, ಪ್ರಚಾರ ಹಾಗೂ ಪ್ರತಿಭಾನ್ವಿತ ಆಟಗಾರರಿಗೆ ಪ್ರೋತ್ಸಾಹ ನೀಡುವಲ್ಲಿ ಮೈಸೂರು ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ. ಸಂಸ್ಥೆಯ ಅಧ್ಯಕ್ಷರಾಗಿ ಅರ್ಜುನ್ ರಂಗ ಹಾಗೂ ಗೌರವ ಕಾರ್ಯದರ್ಶಿಯಾಗಿ ಎಸ್.ಜಿ. ಪ್ರಭು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ರಾಜ್ಯಮಟ್ಟದ ಚಾಂಪಿಯನ್‌ಷಿಪ್‌ನ ಸಂಘಟನಾ ಕಾರ್ಯದರ್ಶಿಯ ಜವಾಬ್ದಾರಿಯನ್ನೂ ಎಸ್.ಜಿ. ಪ್ರಭು ನಿರ್ವಹಿಸುತ್ತಿದ್ದಾರೆ.
ಈ ವಿಶೇಷ ವರದಿ ಓದಿದ್ದೀರಾ?ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ
ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಬ್ಯಾಡ್ಮಿಂಟನ್ ವಿಭಾಗದ ಅಧ್ಯಕ್ಷ ಗುರುಪ್ರಸಾದ್ ಡಿ., ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಹಾಗೂ ಅಂತಾರಾಷ್ಟ್ರೀಯ ಆಟಗಾರ ಅರವಿಂದ್ ಭಟ್, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಹಾಗೂ ಸಂಘಟನಾ ಕಾರ್ಯದರ್ಶಿ ಎಸ್.ಜಿ. ಪ್ರಭು ಇದ್ದರು.




