ವಿಜಯಪುರದಿಂದ ಬೆಂಗಳೂರು ಮತ್ತು ಮುಂಬೈಗೆ ಹೆಚ್ಚುವರಿ ರೈಲು ಸೇವೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವ ಮೂಲಕ ಸಂಸದ ರಮೇಶ ಜಿಗಜಿಣಗಿ ತಮ್ಮ ಶಕ್ತಿ ಪ್ರದರ್ಶಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಸುನಿಲ್ ಗೌಡ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, “ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳು ಜಗತ್ತಿಗೆ ಮಾದರಿಯಾಗಿವೆ. ಅವುಗಳನ್ನು ಬಿಜೆಪಿ ಆಡಳಿತದಲ್ಲಿರುವ ಸರ್ಕಾರಗಳು ನಕಲು ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸಂಸದರು ರಾಜ್ಯದ ಯೋಜನೆಗಳ ಬಗ್ಗೆ ಪದೇ ಪದೇ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಪ್ರಚಾರಕ್ಕಾಗಿ ಹೇಳಿಕೆಗಳನ್ನು ನೀಡುವ ಬದಲು ವಿಜಯಪುರಕ್ಕೆ ವಂದೇ ಭಾರತ ರೈಲು ಸೇವೆಯನ್ನು ಪ್ರಾರಂಭಿಸಲು ಕೇಂದ್ರದ ಮೇಲೆ ಒತ್ತಡ ತರಬೇಕು” ಎಂದು ಒತ್ತಾಯಿಸಿದ್ದಾರೆ.
“ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ ದಿನೇ ದಿನೇ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಗಳು ಹೆಚ್ಚಾಗುತ್ತಿವೆ. ಇದು ಜನಸಾಮಾನ್ಯರಿಗೆ ದೊಡ್ಡ ಹೊರೆಯಾಗುತ್ತಿದೆ. ಪ್ರತಿನಿತ್ಯ ವಿಜಯಪುರ ಜಿಲ್ಲೆಯಿಂದ ಹತ್ತಾರು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಬೆಂಗಳೂರು ಮತ್ತು ಮುಂಬೈಗೆ ಸಂಚರಿಸುತ್ತಿವೆ. ಈ ಸಂದರ್ಭದಲ್ಲಿ ವಿಜಯಪುರದಿಂದ ಹೆಚ್ಚುವರಿ ರೈಲುಗಳನ್ನು ಓಡಿಸಬೇಕು. ರೈಲುಗಳು ವಿದ್ಯುತ್ ಶಕ್ತಿಯ ಮೇಲೆ ಸಂಚರಿಸುತ್ತವೆ. ಇದರಿಂದ ಜನತೆಗೆ ಅನುಕೂಲವಾಗುವುದಲ್ಲದೆ ಪರಿಸರಕ್ಕೂ ಪೂರಕವಾಗುತ್ತದೆ. ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸುವುದರಿಂದ ತೈಲ ಬಳಕೆಯೂ ಕಡಿಮೆಯಾಗುತ್ತದೆ. ಏಳು ಬಾರಿ ಸಂಸದರಾಗಿರುವ ರಮೇಶ ಜಿಗಜಿಣಗಿ ಕೇಂದ್ರದಲ್ಲಿ ತಮಗಿರುವ ವರ್ಚಸ್ಸನ್ನು ಬಳಸಿ ರೈಲುಗಳ ಸಂಖ್ಯೆ ಹೆಚ್ಚಿಸಬೇಕು” ಎಂದು ಆಗ್ರಹಿಸಿದ್ದಾರೆ.
“ನಾನು ಕಳೆದ ಮೂರು ವರ್ಷಗಳಿಂದ ಸತತವಾಗಿ ಪ್ರಧಾನಿ, ರೈಲ್ವೆ ಸಚಿವರು ಮತ್ತು ಹೆದ್ದಾರಿ ಸಚಿವರಿಗೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು, ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ಉನ್ನತೀಕರಿಸಬೇಕು ಹಾಗೂ ವಿಜಯಪುರದಿಂದ ಬೆಂಗಳೂರಿಗೆ ಸಂಚರಿಸುವ ರೈಲುಗಳ ಸಂಚಾರದ ಅವಧಿಯನ್ನು ಕಡಿಮೆ ಮಾಡಬೇಕು ಎಂದು ಪತ್ರ ಬರೆದು ಗಮನ ಸೆಳೆದಿದ್ದೇನೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ಸಂಸದರು ತಮ್ಮ ಪ್ರಭಾವವನ್ನು ಬಳಸಿ ಕೇಂದ್ರದಿಂದ ಬರಬೇಕಾದ ಯೋಜನೆಗಳನ್ನು ಜಿಲ್ಲೆಯ ಜನರಿಗೆ ತಲುಪಿಸುವ ಕೆಲಸ ಮಾಡಬೇಕು” ಎಂದು ಅವರು ಮನವಿ ಮಾಡಿದ್ದಾರೆ.
ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳು ಸಹ ಅವುಗಳನ್ನು ಜಾರಿಗೊಳಿಸುತ್ತಿವೆ. ಇದನ್ನು ಸಂಸದರು ತಿಳಿಯಬೇಕು. ಮಾತಿಗಿಂತ ಕೆಲಸಗಳೇ ಜನಮಾನಸದಲ್ಲಿ ಉಳಿಯುತ್ತವೆ. ಹೀಗಾಗಿ ವಂದೇ ಭಾರತ ರೈಲು ಸೇವೆ ಮತ್ತು ಹೆಚ್ಚುವರಿ ರೈಲುಗಳ ಸಂಚಾರ ಪ್ರಾರಂಭಿಸಲು ಸಂಸದರು ಕ್ರಮ ಕೈಗೊಂಡರೆ ಬಸವನಾಡಿನ ಇತಿಹಾಸದಲ್ಲಿ ಅವರ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ” ಎಂದು ವಿಧಾನ ಪರಿಷತ್ ಶಾಸಕ ಸುನಿಲ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.




