‘ಸಮಸ್ತ’ ಆ್ಯಪ್‌ನಲ್ಲಿ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಸೇರಿದಂತೆ ಆರೋಗ್ಯ ಕ್ಷೇತ್ರದ ಹೊರಗಿನ ಹೆಚ್ಚುವರಿ ಕೆಲಸಗಳಿಗೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸುವುದನ್ನು ಕೈಬಿಡಬೇಕು ಹಾಗೂ ಬಾಕಿ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮೈಸೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.
‘ಸಮಸ್ತ’ ಆ್ಯಪ್ ಬಳಕೆಗೆ ಸೂಕ್ತ ತರಬೇತಿ ಹಾಗೂ ಅಗತ್ಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸದೆ ಕೆಲಸದ ಒತ್ತಡ ಹೇರಲಾಗುತ್ತಿದೆ. ಇಲಾಖೆಯಿಂದ ಮೊಬೈಲ್ ಅಥವಾ ಟ್ಯಾಬ್ಲೆಟ್ ನೀಡದೆ, ಸ್ವಂತ ಮೊಬೈಲ್‌ನಲ್ಲಿ ಆ್ಯಪ್ ಬಳಸಿ ದಿನವಿಡೀ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಇದರಿಂದ ಮೊಬೈಲ್ ಮೆಮೊರಿ, ಗೌಪ್ಯತೆ ಹಾಗೂ ಸಾಧನದ ಬಾಳಿಕೆಗೆ ಸಮಸ್ಯೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆ್ಯಪ್‌ನಲ್ಲಿ ಮಾಹಿತಿ ಸೇವ್ ಆಗದಿರುವುದು, ಸಿಂಕ್ರನೈಜೇಷನ್ ವಿಫಲವಾಗುವುದು, ದಾಖಲೆಗಳು ಕಣ್ಮರೆಯಾಗುವುದು, ಡುಪ್ಲಿಕೇಟ್ ಎಂಟ್ರಿ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ನಿರಂತರವಾಗಿ ಎದುರಾಗುತ್ತಿವೆ. ಆ್ಯಪ್‌ನಲ್ಲಿ ತೋರಿಸುವ ದಾಖಲೆಗಳು ಹಾಗೂ ಭೌತಿಕ ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬರುತ್ತಿದ್ದು, ಈ ಸಮಸ್ಯೆಗಳನ್ನು ಪರಿಹರಿಸದೆ ‘ಸಮಸ್ತ’ ಆ್ಯಪ್‌ನ್ನು ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನಕ್ಕೆ ಲಿಂಕ್ ಮಾಡುವುದನ್ನು ಒಪ್ಪುವುದಿಲ್ಲ ಎಂದು ಸಂಘದ ಮುಖಂಡರು ಸ್ಪಷ್ಟಪಡಿಸಿದರು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಹಾಗೂ ತರಬೇತಿಗೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿರುವುದಕ್ಕೂ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಇದು ಆಶಾ ಕಾರ್ಯಕರ್ತೆಯರ ಮೂಲ ಆರೋಗ್ಯ ಸೇವಾ ಕರ್ತವ್ಯದ ವ್ಯಾಪ್ತಿಗೆ ಬರುವುದಿಲ್ಲ. ಆರೋಗ್ಯ ಕ್ಷೇತ್ರದ ಹೊರಗಿನ ಹೆಚ್ಚುವರಿ ಜವಾಬ್ದಾರಿಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಆಗಸ್ಟ್ 12ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹಧನ ನೀಡುವವರೆಗೆ ಆಶಾ ಕಾರ್ಯಕರ್ತೆಯರ ಮೇಲೆ ಯಾವುದೇ ಒತ್ತಡ ಹೇರಬಾರದು ಎಂಬ ಸೂಚನೆ ನೀಡಿದ್ದರೂ, ಕ್ಷೇತ್ರಮಟ್ಟದ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಸಂಘ ಆರೋಪಿಸಿತು.
ಕಳೆದ ಒಂದು ವರ್ಷದಿಂದ ಗೌರವಧನ ಮತ್ತು ಪ್ರೋತ್ಸಾಹಧನ ನಿಗದಿತ ಅವಧಿಯಲ್ಲಿ ಪಾವತಿಯಾಗದೆ ಆಶಾ ಕಾರ್ಯಕರ್ತೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹಧನ ಹಾಗೂ ಗೌರವಧನ ಸೇರಿ ಮಾಸಿಕ ₹15 ಸಾವಿರ ನೀಡಬೇಕು. ಜಿಲ್ಲೆಯಾದ್ಯಂತ ಬಾಕಿ ಇರುವ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಯಿತು.
ಆಶಾ ಕಾರ್ಯಕರ್ತೆಯರಿಗೆ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ಒದಗಿಸಿ, ‘ಸಮಸ್ತ’ ಆ್ಯಪ್‌ನ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು. ಎನ್‌ಎಚ್‌ಎಂ ಮಾರ್ಗಸೂಚಿಗೆ ವಿರುದ್ಧವಾಗಿ ‘ನಿಕ್ಷಯ್’ ಆ್ಯಪ್ ಕೆಲಸಕ್ಕೆ ಒತ್ತಡ ಹೇರಬಾರದು. ಆರ್‌ಸಿಎಚ್ ಪೋರ್ಟಲ್ ಮೂಲಕ ಕೇಂದ್ರದ ಪ್ರೋತ್ಸಾಹಧನ ಪೂರ್ಣ ಪ್ರಮಾಣದಲ್ಲಿ ಬಾರದಿರುವ ಸಮಸ್ಯೆ ಪರಿಹರಿಸಬೇಕು ಹಾಗೂ ಟಿಬಿ, ಟಿಬಿಐ, ಎನ್‌ಸಿಡಿ ಸೇರಿದಂತೆ ವಿವಿಧ ಕಾಂಪೋನೆಂಟ್‌ಗಳ ಹಲವು ವರ್ಷಗಳಿಂದ ಬಾಕಿಯಿರುವ ಹಣವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.
ಹತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಅಥವಾ ಕೆಲಸ ತೊರೆದ ಆಶಾ ಕಾರ್ಯಕರ್ತೆಯರಿಗೆ ನಿಯಮಾನುಸಾರ ಬಾಕಿಯಿರುವ ಇಡಿಗಂಟು ಪಾವತಿಸಬೇಕು. ಜಿಪಿಎಸ್ ಲೊಕೇಶನ್ ಹಾಕುವಂತೆ ಒತ್ತಡ ಹೇರಬಾರದು. ಪ್ರತಿ ತಿಂಗಳು ಕ್ರೈಮ್ ಮತ್ತು ರಿಲೀಸ್ ಕಾಪಿ ನೀಡಬೇಕು. ಪಾಸ್‌ಬುಕ್‌ನಲ್ಲಿ ಪಾವತಿಯಾಗಿರುವ ಪ್ರೋತ್ಸಾಹಧನ ಯಾವ ತಿಂಗಳಿನದ್ದು ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಕಳೆದ ಒಂದು ವರ್ಷದ ಗೌರವಧನ ಹಾಗೂ ಪ್ರೋತ್ಸಾಹಧನ ಪಾವತಿಯ ಸಂಪೂರ್ಣ ವಿವರಗಳ ಸಾಫ್ಟ್ ಕಾಪಿಯನ್ನು ಸಂಘಕ್ಕೆ ನೀಡಬೇಕು ಎಂದು ಆಗ್ರಹಿಸಲಾಯಿತು.
‘ಸಮಸ್ತ’ ಆ್ಯಪ್‌ನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಗೃಹಲಕ್ಷ್ಮಿ ಯೋಜನೆಯ ಹೆಚ್ಚುವರಿ ಕೆಲಸದ ಹೇರಿಕೆ ಸೇರಿದಂತೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವವರೆಗೆ ಅನಧಿಕೃತ ಹೆಚ್ಚುವರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಎಚ್ಚರಿಕೆ ನೀಡಿದರು.
ಈ ವಿಶೇಷ ವರದಿ ಓದಿದ್ದೀರಾ? ‘SIR’ Form-7: ಕೊಡಗಿನ ಬ್ಯಾಡಗೊಟ್ಟದಲ್ಲಿ 64 ಮತದಾರರ ಹೆಸರು ಅಳಿಸಲು ಯತ್ನ; ಐವರ ವಿರುದ್ಧ FIR
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಗೌರವಾಧ್ಯಕ್ಷೆ ಸಂಧ್ಯಾ ಪಿ.ಎಸ್., ಮೈಸೂರು ನಗರ ಅಧ್ಯಕ್ಷೆ ಸೀಮಾ ಜಿ.ಎಸ್. ಹಾಗೂ ಜಿಲ್ಲಾಧ್ಯಕ್ಷೆ ಭಾಗ್ಯಮ್ಮ ವಹಿಸಿದ್ದರು. ವಿವಿಧ ತಾಲೂಕುಗಳ ಮುಖಂಡರಾದ ಮಣಿಲಾ, ಹೇಮಾ, ಶುಭಮಂಗಳ, ಪವಿತ್ರ, ಸುಧಾ, ಮಂಗಳಮ್ಮ, ಕೋಮಲ, ಸುನೀತಾ, ಶೀಲಾ, ಸಿದ್ದಮ್ಮ, ಗಿರಿಜಮ್ಮ, ರೇಣುಕಾ, ಮಂಜುಳಾ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಇದ್ದರು.




