ಗಂಡನ ನಿರಂತರ ಕಿರುಕುಳದಿಂದ ಮನನೊಂದ ನಾಲ್ಕು ತಿಂಗಳ ಗರ್ಭಿಣಿಯೊಬ್ಬರು ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ತಾಲೂಕಿನ ಔರಾದ್ (ಬಿ) ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಶೃತಿ ಗೋಪಾಲಸಿಂಗ್ ತಿವಾರಿ (24) ಎಂದು ಗುರುತಿಸಲಾಗಿದೆ.
ಶೃತಿ ಹಾಗೂ ಗೋಪಾಲಸಿಂಗ್ ಇಬ್ಬರೂ ಎರಡು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಗೋಪಾಲ್ ಕುಡಿತ, ಜೂಜಾಟ ಸೇರಿದಂತೆ ದುಶ್ಚಟಗಳಿಗೆ ಒಳಗಾಗಿದ್ದಾನೆ ಎನ್ನಲಾಗಿದೆ. ದುಶ್ಚಟಗಳ ಕಾರಣ ಸುಮಾರು ₹3 ಲಕ್ಷ ಸಾಲ ಮಾಡಿಕೊಂಡಿದ್ದ ಆತ, ಸಾಲ ತೀರಿಸಲು ವಾಸದ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದನು ಎಂದು ತಿಳಿದುಬಂದಿದೆ.
ಮನೆಯನ್ನು ಮಾರಾಟ ಮಾಡಲು ಪತ್ನಿ ಶೃತಿ ಸಹಿ ಹಾಕಲು ನಿರಾಕರಿಸಿದ್ದರಿಂದ ಗೋಪಾಲ್ ಆಕೆಯ ಮೇಲೆ ಹಲ್ಲೆ ನಡೆಸಿ, ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕಿರುಕುಳದಿಂದ ಬೇಸತ್ತ ಶೃತಿ ಕಳೆದ 15 ದಿನಗಳ ಹಿಂದೆ ತವರು ಮನೆಗೆ ಬಂದಿದ್ದರು. ಬುಧವಾರ ಮತ್ತೆ ತವರು ಮನೆಗೆ ಬಂದ ಗೋಪಾಲ್ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಶೃತಿ ರಾತ್ರಿ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಜಯಾ ವೈನ್ಸ್ ಪರವಾನಗಿ ರದ್ದುಪಡಿಸಲು ಆಗ್ರಹ ದಲಿತ ಸೇನೆ ಧರಣಿ
ಘಟನೆ ಕುರಿತು ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಗೋಪಾಲಸಿಂಗ್ ತಿವಾರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.





