“ನಾವು ಪ್ರಸ್ತುತ ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ದೇಶದ ಬೆನ್ನೆಲುಬನ್ನು ಮುರಿಯಲು ಮತ್ತು ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಿತ್ತುಕೊಳ್ಳಲು ಸರ್ಕಾರ ಯತ್ನಿಸುತ್ತಿದ್ದು, ಇದನ್ನು ನಾವ್ಯಾರೂ ಸುಮ್ಮನೆ ಸಹಿಸುವುದಿಲ್ಲ” ಎಂದು ಎಐಎಸ್‌ಎಫ್ ನಾಯಕಿ ಆಯಿಷಾ ಘೋಷ್ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ಸಂಘಟನೆಯು ಆಯೋಜಿಸಿದ್ದ ಜನತಾ ನ್ಯಾಯಾಲಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾಷಣದ ಆರಂಭದಲ್ಲೇ ‘ವೋಟ್ ಚೋರ್ ಗದ್ದಿ ಛೋಡ್’ (ಮತ ಕದಿಯುವವರೇ ಅಧಿಕಾರ ಬಿಟ್ಟು ತೊಲಗಿ) ಎಂಬ ಪ್ರಬಲ ಘೋಷಣೆಯೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನರ ಮತಗಳನ್ನು ಕಸಿಯುವ ಹುನ್ನಾರ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹರಿದಾಯ್ದ ಅವರು, “ಜ್ಞಾನೇಶ್ ಅವರೇ, ನಿಮ್ಮ ಹಸಿ ಸುಳ್ಳುಗಳು ಮತ್ತು ನಿಯಮಬಾಹಿರ ನಡವಳಿಕೆಗಳ ವಿರುದ್ಧ ನಾವೀಗ ನಿಮ್ಮನ್ನೇ ಗುರಿಯಾಗಿಸಿ ಬಂದಿದ್ದೇವೆ” ಎಂದರು.
ಹೋರಾಟಗಾರರನ್ನು ಮತ್ತು ಪ್ರತಿಭಟನಾನಿರತರನ್ನು ಬಂಧಿಸಿ, ಅವರ ಮನೋಬಲ ಹಾಗೂ ಹೋರಾಟದ ಕಿಚ್ಚನ್ನು ಕುಗ್ಗಿಸಲು ಆಡಳಿತಾರೂಢ ಸರ್ಕಾರ ನಿರಂತರವಾಗಿ ಯತ್ನಿಸುತ್ತಿದೆ. ಆದರೆ, ಎಷ್ಟೇ ಬಂಧನಗಳು ಎದುರಾದರೂ ನಮ್ಮ ಹೋರಾಟದ ಉತ್ಸಾಹ ಹಾಗೂ ಆತ್ಮಸ್ಥೈರ್ಯವನ್ನು ಹಾಳುಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ಸರ್ವಾಧಿಕಾರಿ ಸರ್ಕಾರದ ವಿರುದ್ಧ ನಾವೆಲ್ಲಾ ಒಂದಾಗಿದ್ದೇವೆ ಮತ್ತು ಬಲವಾದ ಒಗ್ಗಟ್ಟಿನಿಂದ ಹೋರಾಡಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಮುಂದುವರಿದು ಮಾತನಾಡಿದ ಆಯಿಷಾ ಘೋಷ್, ಈ ದೇಶವು ಯಾವುದೇ ವ್ಯಕ್ತಿ ಅಥವಾ ಪಕ್ಷದ ಇಷ್ಟದಂತೆ ನಡೆಯುವುದಿಲ್ಲ, ಬದಲಾಗಿ ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಲಾದ ಮೌಲ್ಯಗಳು ಹಾಗೂ ಆಶಯಗಳ ಪ್ರಕಾರವೇ ನಡೆಯುತ್ತದೆ. ಆದರೆ ಪ್ರಸ್ತುತ ಆಡಳಿತ ನಡೆಸುತ್ತಿರುವವರಿಗೆ ಸಂವಿಧಾನದ ಮೇಲೆ ಯಾವುದೇ ಗೌರವವಿಲ್ಲ ಹಾಗೂ ಸಂವಿಧಾನದ ಹಾದಿಯಲ್ಲಿ ನಡೆಯುವುದು ಅವರಿಗೆ ಬೇಕಿಲ್ಲ ಎಂದು ಕಟುವಾಗಿ ಟೀಕಿಸಿದರು. ನಾವೆಲ್ಲರೂ ಒಗ್ಗೂಡಿ ನಡೆಸುವ ಈ ಹೋರಾಟವು ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ವಿರಾಮ ಪಡೆಯುವುದಿಲ್ಲ ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಒಗ್ಗೂಡಿರುವ ಎಲ್ಲ ಸಂಘಟನೆಗಳಿಗೆ ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದ ಅವರು, ‘ಜೈ ಭೀಮ್’ ಹಾಗೂ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಕ್ರಾಂತಿಕಾರಿ ಘೋಷಣೆಗಳೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು




