ಯುವ ಪ್ರತಿಭೆಗಳು ನವೋದ್ಯಮಗಳ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರ ಪುತ್ರಿ ಸಾನ್ವಿ ಪಾಟೀಲ ಹಾಗೂ ಅವರ ತಂಡ ಸ್ಥಾಪಿಸಿರುವ ಪ್ರವಾಹ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‌ನ Merakify.ai ಕೃತಕ ಬುದ್ಧಿಮತ್ತೆ (AI) ಆಧಾರಿತ ಆನ್‌ಲೈನ್ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
“ಕೃತಕ ಬುದ್ಧಿಮತ್ತೆ ಆಧಾರಿತ ಇಂತಹ ವೇದಿಕೆಗಳು ಯುವಕರ ಸೃಜನಶೀಲತೆಗೆ ಹೊಸ ಅವಕಾಶಗಳನ್ನು ಕಲ್ಪಿಸುತ್ತವೆ. ಕಥೆಗಾರರು, ಸಿನಿಮಾ ನಿರ್ಮಾಪಕರು, ಲೇಖಕರು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಸೃಜನಶೀಲರಿಗೆ ಈ ತಂತ್ರಜ್ಞಾನ ಅತ್ಯಂತ ಉಪಯುಕ್ತವಾಗಿದ್ದು, ಮನಸ್ಸಿನಲ್ಲಿರುವ ಕಲ್ಪನೆಗಳನ್ನು ಗುಣಮಟ್ಟದ ವಿಡಿಯೋಗಳಾಗಿ ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಹೇಳಿದರು.
“ಶಿಕ್ಷಣ, ಜಾಹೀರಾತು, ಉದ್ಯಮ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ಅಗತ್ಯವಿರುವ ವಿವಿಧ ಮಾದರಿಯ ವಿಡಿಯೋ ವಿಷಯಗಳನ್ನು ಸುಲಭವಾಗಿ ಸೃಷ್ಟಿಸಲು ಈ ವೇದಿಕೆ ನೆರವಾಗಲಿದ್ದು, ಯುವ ಉದ್ಯಮಿಗಳಿಗೆ ಹೊಸ ದಿಕ್ಕನ್ನು ತೋರಿಸಲಿದೆ” ಎಂದು ಸಚಿವರು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, “ಯುವಕರ ಈ ನವೀನ ಪ್ರಯತ್ನ ಶ್ಲಾಘನೀಯವಾಗಿದ್ದು, ಸಂಸ್ಥೆ ಮತ್ತಷ್ಟು ಬೆಳೆಯಲಿ ಹಾಗೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲಿ” ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ Merakify.ai ಮೂಲಕ ಬಂಥನಾಳ ಸಂಗನಬಸವ ಶಿವಯೋಗಿಗಳು, ಶಿಕ್ಷಣ ಪ್ರೇಮಿ ದಿವಂಗತ ಬಿ.ಎಂ. ಪಾಟೀಲ ಹಾಗೂ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಎಂ.ಬಿ. ಪಾಟೀಲ ಅವರ ಜೀವನಾಧಾರಿತ ಎಐ ಕಿರುಚಿತ್ರವನ್ನು ಸಚಿವರು ಬಿಡುಗಡೆ ಮಾಡಿ ವೀಕ್ಷಿಸಿದರು.
ಇದನ್ನೂ ಓದಿದ್ದೀರಾ? ಕನ್ನಡಿಗರ ಉದ್ಯಮಶೀಲತೆ: ಆತ್ಮಾವಲೋಕನದ ಹೊತ್ತು
ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠ-ಶಿವಮೊಗ್ಗ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಸಾಗರ ಸಂಸ್ಥಾನ ಮಠದ ಜಡೆ ಡಾ. ಮಹಾಂತ ಸ್ವಾಮಿಗಳು, ವಿಜಯಪುರ ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು, ಹುಬ್ಬಳ್ಳಿ-ನಿಡೋಣಿ ಎರಡೆತ್ತಿನಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಮಣಕವಾಡ ದೇವ ಮಂದಿರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮಿಗಳು, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಹಮೀದ್ ಮುಶ್ರಿಫ್ ಸೇರಿದಂತೆ ಪ್ರವಾಹ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕಿ ಸಾನ್ವಿ ಪಾಟೀಲ, ಪ್ರದೀಪ ಮಳಜಿ, ವಿಜಯ ಜತ್ತಿ, ಸಮರ್ಥ ದತ್ತರಗಾವಿ, ದತ್ತಾ ಕಂಬಾಗಿ, ಹರೀಶ ಸೇರಿದಂತೆ ಇತರರು ಇದ್ದರು.





