ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸಬಲಾ–ಮಹಿಳಾ ಸಬಲೀಕರಣ ಘಟಕದ ಸಂಯುಕ್ತ ಆಶ್ರಯದಲ್ಲಿ ಬೋಧಕರ ಹೊರತಾದ ಮಹಿಳಾ ಸಿಬ್ಬಂದಿಗಾಗಿ ‘ಸ್ವಾವಲಂಬಿ ಸಬಲಾ’ ಉಪಯುಕ್ತ ಕಾಗದದ ಚೀಲ ಹಾಗೂ ಪ್ಯಾಕೆಟ್ ತಯಾರಿಕಾ ಕಾರ್ಯಾಗಾರ ಶುಕ್ರವಾರ ನಡೆಯಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಿಎಲ್‌ಡಿಇ ಸಂಸ್ಥೆಯ ಎಸ್ ಎಸ್ ಪ್ರೌಢಶಾಲೆ ‘ಎ’ ವಿಭಾಗದ ನಿವೃತ್ತ ಕರಕುಶಲ ಶಿಕ್ಷಕಿ ಸಂಗೀತಾ ನಿಂಬಾಳ ಮಾತನಾಡಿ, ವಿವಿಧ ಗಾತ್ರ ಮತ್ತು ಗುಣಮಟ್ಟದ ಕಾಗದದ ಚೀಲ ಹಾಗೂ ಪ್ಯಾಕೆಟ್‌ಗಳನ್ನು ತಯಾರಿಸುವ ವಿಧಾನವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು. ಆಸ್ಪತ್ರೆ ಹಾಗೂ ಕಾಲೇಜಿನಲ್ಲಿ ಔಷಧ ವಿತರಣೆ ಸೇರಿದಂತೆ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಇವುಗಳ ಉಪಯುಕ್ತತೆಯನ್ನು ವಿವರಿಸಿದ ಅವರು, ಪ್ಲ್ಯಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಕಾಗದದ ಚೀಲಗಳ ಬಳಕೆಯ ಅಗತ್ಯವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಮಹಿಳಾ ಸಬಲೀಕರಣ ಘಟಕವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದ್ದು, “ಇಂತಹ ಕೌಶಲ್ಯಾಧಾರಿತ ತರಬೇತಿಗಳು ಬೋಧಕರ ಹೊರತಾದ ಮಹಿಳಾ ಸಿಬ್ಬಂದಿಗೆ ಹೆಚ್ಚುವರಿ ಆದಾಯದ ಅವಕಾಶ ಕಲ್ಪಿಸುವುದರ ಜತೆಗೆ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲಿವೆ. ಅಲ್ಲದೆ, ಮಹಾವಿದ್ಯಾಲಯವನ್ನು ಪ್ಲ್ಯಾಸ್ಟಿಕ್ ಮುಕ್ತ ಆವರಣವನ್ನಾಗಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಮಹತ್ವದ ಹೆಜ್ಜೆಯಾಗಿದೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಶಿರಸಿ | ಭಾರೀ ಮಳೆಗೆ ನಗರ ಜಲಾವೃತ; ಕೋಟೆಕೆರೆ ಉಕ್ಕಿ ಹರಿದು ಜನಜೀವನ ಅಸ್ತವ್ಯಸ್ತ
ಈ ಸಂದರ್ಭದಲ್ಲಿ ಸಬಲಾ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ಡಾ. ಅಶ್ವಿನಿ ಎ ನಿಂಬಾಳ, ಸದಸ್ಯ ಕಾರ್ಯದರ್ಶಿ ವಿದ್ಯಾಲಕ್ಷ್ಮಿ ಪೂಜಾರಿ, ಡಾ. ಮಲ್ಲಮ್ಮಾ ಬಿರಾದಾರ, ಡಾ. ಕಸ್ತೂರಿ ಪಾಟೀಲ ಹಾಗೂ ಘಟಕದ ಸದಸ್ಯರು ಇದ್ದರು.
ಕಾರ್ಯಾಗಾರದಲ್ಲಿ ಬೋಧಕರ ಹೊರತಾದ ಮಹಿಳಾ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿ, ಮಹಿಳಾ ಸಬಲೀಕರಣದ ಜತೆಗೆ ಪರಿಸರ ಸಂರಕ್ಷಣೆಗೆ ಪೂರಕವಾಗಿರುವ ಕಾಗದದ ಚೀಲ ತಯಾರಿಕೆ ಕುರಿತು ಪ್ರಾಯೋಗಿಕ ತರಬೇತಿ ಪಡೆದುಕೊಂಡರು.




