ಡಾ. ಬಾಬು ಜಗಜೀವನ ರಾಂ ಅವರು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿ, ಕೃಷಿ ಪದ್ಧತಿಗಳಲ್ಲಿ ಅಧುನಿಕತೆ ಬಳಸಿ ಕೃಷಿ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಿ ದೇಶದ ಆಹಾರ ಭದ್ರತೆಗೆ ನಾಂದಿ ಹಾಡಿದ ಮಹಾನ್ ಚಿಂತಕರು ಹಾಗೂ ಹಸಿರು ಕ್ರಾಂತಿಯ ಹರಿಕಾರರಾಗಿದ್ದರು ಎಂದು ನಾಗಠಾಣ ಶಾಸಕ ವಿಠಲ ಕಟಕದೊಂಡ ಹೇಳಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಕೆ ಸಹಯೋಗದಲ್ಲಿ ಶ್ರೀ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ 119ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಇಂತಹ ಮಹನೀಯರನ್ನು ನಾವು ಪ್ರತಿನಿತ್ಯ ನೆನೆಪಿಸಿಕೊಳ್ಳಬೇಕು. ಅಂದಾಗ ಅವರ ಚಿಂತನೆಗಳು ಸಾಕಾರಗೊಳ್ಳುತ್ತವೆ. ಶೋಷಿತರ ಸಮಸ್ಯೆಗಳ, ಅನ್ಯಾಯಗಳ ವಿರುದ್ಧ ಹಾಗೂ ಸಮ ಸಮಾಜಕ್ಕಾಗಿ ಹೋರಾಡಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಂ ಅವರು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ ಸ್ಮರಿಸಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಅಧ್ಯಕ್ಷತೆ ವಹಿಸಿ, ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಬದುಕೇ ಆದರ್ಶವಾಗಿದೆ ಎಂದರು.
ಹಿಂದೆ ನಮ್ಮ ದೇಶಕ್ಕೆ ಆಹಾರ ಭದ್ರತೆ ಇರಲಿಲ್ಲ. ಅಂತಹ ಸಮಯದಲ್ಲಿ ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳುವ ಸಮಸ್ಯೆ ಎದುರಾಗಿತ್ತು. ಆಗ ಡಾ. ಬಾಬು ಜಗಜೀವನರಾಂ ಅವರು ದೇಶಕ್ಕೆ ಆಹಾರ ಭದ್ರತೆಗೆ ಅಡಿಪಾಯ ಹಾಕಿದರು. ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಿದ್ದರೂ, ಅವುಗಳಿಗೆ ಬೆಂಬಲ ಬೆಲೆ ನೀಡುವುದರ ಮೂಲಕ ದೇಶವನ್ನು ಗಂಡಾಂತರದಿಂದ ಪಾರು ಮಾಡಿದ ಹೆಮ್ಮೆಯ ನಾಯಕರೆನಿಸಿಕೊಂಡ ಮಹಾನ್ ನಾಯಕ ಎಂದು ಬಣ್ಣಿಸಿದರು.
ಕಷ್ಟ ಕೋಟಲೆಯಲ್ಲಿ ಡಾ. ಬಾಬು ಜಗಜೀವನರಾಂ ಅವರು ರಾಷ್ಟ್ರವನ್ನು ಮುನ್ನಡೆಸಿದ ಮುತ್ಸದ್ಧಿ. ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತರುವುದರ ಮೂಲಕ ಪ್ರತಿಯೊಬ್ಬರಿಗೂ ಗೌರವ, ಸಮಾನತೆ ತಂದು ಕೊಟ್ಟ ಮಹಾನ್ ದಾರ್ಶನಿಕರು ಎಂದು ಕೊಂಡಾಡಿದರು.
ಪ್ರೊ. ಲಕ್ಷ್ಮೀದೇವಿ ಡಾ. ಬಾಬು ಜಗಜೀವನರಾಮ್ ಅವರು ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿ, ಡಾ. ಜಗಜೀವನರಾಂ ಅವರು ಪ್ರಬುದ್ಧ ರಾಜನೀತಿಜ್ಞ ಆಗಿದ್ದರು. ಜೊತೆಗೆ ಅವರು ಬದುಕು ಆದರ್ಶ. ಅವರ ಜೀವನವೇ ನಮಗೆಲ್ಲ ದಾರಿದೀಪವಾಗಿದೆ. ಕಾರ್ಮಿಕ, ಕೃಷಿ, ಆಹಾರ, ರಕ್ಷಣಾ ಇಲಾಖೆ, ರೈಲ್ವೆ ಸಚಿವರಾಗಿ ಡಾ.ಬಾಬು ಜಗಜೀವನರಾಮ್ ಅವರು ಅತ್ಯುತ್ತಮ ಕೆಲಸ ಮಾಡಿದ್ದು, ಇದು ಮಾದರಿಯಾಗಿದೆ. ನಮಗೆ ಕಾಯ್ದೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ ನಾವು ಅವುಗಳನ್ನು ದುರುಪಯೋಗ ಮಾಡಿಕೊಳ್ಳದೇ, ಒಳ್ಳೆಯತನಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಶೋಷಿತರು, ಹಿಂದುಳಿದವರು ಭವಿಷ್ಯದ ಭರವಸೆ ಇಟ್ಟುಕೊಂಡು ಬದುಕಬೇಕು. ಮಾನವೀಯತೆ ನಮ್ಮನ್ನು ಬದುಕಿಸುತ್ತದೆ. ಡಾ.ಬಾಬು ಜಗಜೀವನ ರಾಮ್ ಅವರು ಈ ದೇಶದ ಆಹಾರ ಸಚಿವರಾಗಿ, ಭಾರತದ ಜನತೆಗೆ ಹಸಿರು ಕ್ರಾಂತಿ ಯೋಜನೆ ಜಾರಿಗೊಳಿಸುವ ಮೂಲಕ ಈ ದೇಶದ ಜನತೆ ಹಸಿವಿನಿಂದ ಬಳಲದಂತೆ ನೋಡಿಕೊಂಡ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಇದನ್ನೂ ಓದಿ: ವಿಜಯಪುರ | ಮೇ.8ರಂದು ಬೃಹತ್ ರೈತ ಜನ ಜಾಗೃತಿ ಸಮಾವೇಶ; 15 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆ
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಸಮಾಜ ಮುಖಂಡರಾದ
ಅಡಿವೆಪ್ಪ ಸಾಲಗಲ್, ಭೀಮರಾಯ ಜಿಗಜಿಣಗಿ ,ಶ್ರೀನಿವಾಸ ಶಹಾಪೂರ, ಪರಶುರಾಮ ರೋಣಿಹಾಳ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಇತರರು ಇದ್ದರು.




