ಸಂವಿಧಾನದ ಕುರಿತು ಅಧ್ಯಯನ ಮಾಡದೆ ವಿವೇಚನಾರಹಿತ ಹಾಗೂ ಅತಿರೇಕದ ಹೇಳಿಕೆ ನೀಡಿರುವ ಕನೇರಿ ಸ್ವಾಮೀಜಿ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಮೇಲೆ ನಂಬಿಕೆ ಹೊಂದಿರುವವರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಹೀಗಾಗಿ ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಶಾಸಕ ರಾಜು ಆಲಗೂರ ಎಚ್ಚರಿಕೆ ನೀಡಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದ ಪ್ರಸ್ತಾವನೆಯಿಂದ ಹಿಡಿದು ಯಾವುದೇ ಭಾಗದಲ್ಲಿಯೂ ಮನುಸ್ಮೃತಿಯ ಅಂಶಗಳಿಲ್ಲ. ಸಂವಿಧಾನದ ಆಶಯ ಹಾಗೂ ಅದರ ಮೂಲತತ್ವಗಳನ್ನು ಅರಿಯದೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಹೇಳಿಕೆ ನೀಡಿರುವುದು ಖಂಡನೀಯ ಎಂದರು.ಭಾರತದ ಸಂವಿಧಾನವು ಜಾತಿ, ಧರ್ಮ, ವರ್ಗಗಳ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಮಹತ್ವದ ಆಶಯಗಳನ್ನು ಒಳಗೊಂಡಿದೆ. ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಪ್ರತಿಯೊಬ್ಬರಿಗೂ ಗೌರವಯುತ ಬದುಕಿನ ಹಕ್ಕು ಕಲ್ಪಿಸಿರುವ ಪವಿತ್ರ ಸಂವಿಧಾನದ ಬಗ್ಗೆ ಸ್ವಾಮೀಜಿಯೊಬ್ಬರು ಅಗೌರವದಿಂದ ಮಾತನಾಡುವುದು ಸರಿಯಲ್ಲ.
ಇಂತಹ ಹೇಳಿಕೆಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಯ್ಯರ್ ಅವರು ‘ಆರ್ಗನೈಸರ್’ ಪತ್ರಿಕೆಯ ಮೂಲಕ ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಉಲ್ಲೇಖಿಸಿದ ರಾಜು ಆಲಗೂರ, ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಸಮಾನತೆಯ ಸ್ಥಾನಮಾನ ನೀಡುವ ಆಶಯಗಳಿಲ್ಲ. ಆದರೆ ಭಾರತದ ಸಂವಿಧಾನ ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಗೌರವಯುತ ಬದುಕಿನ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.ಕನೇರಿ ಸ್ವಾಮೀಜಿ ಆರ್‌ಎಸ್‌ಎಸ್‌ನ ಗುಲಾಮರಂತೆ ವರ್ತಿಸುತ್ತಿದ್ದಾರೆ.
ಒಬ್ಬ ಸ್ವಾಮೀಜಿ ಸಾರ್ವಜನಿಕವಾಗಿ ಅನಾಗರಿಕ ಭಾಷೆ ಬಳಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಧಾರ್ಮಿಕ ಸ್ಥಾನದಲ್ಲಿರುವವರು ಸಮಾಜದಲ್ಲಿ ಸಾಮರಸ್ಯ ಮತ್ತು ಸಮಾನತೆಯ ಸಂದೇಶ ಸಾರಬೇಕೇ ಹೊರತು, ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಬಾರದು ಎಂದರು.
ಕನೇರಿ ಸ್ವಾಮೀಜಿ ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ, ಅಂಬೇಡ್ಕರ್, ಸಂವಿಧಾನ ಹಾಗೂ ರಾಷ್ಟ್ರದ ಹಿತಾಸಕ್ತಿ ಬಯಸುವ ಎಲ್ಲ ಪ್ರಗತಿಪರ ಶಕ್ತಿಗಳನ್ನು ಒಗ್ಗೂಡಿಸಿ ನವೆಂಬರ್ 26ರಂದು ವಿಜಯಪುರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜು ಆಲಗೂರ ಎಚ್ಚರಿಕೆ ನೀಡಿದರು.




