ವಿಬಿ-ಜಿ ರಾಮ್‌ಜಿ ಯೋಜನೆ ಅನುಷ್ಠಾನದಲ್ಲಿರುವ ಗೊಂದಲಗಳನ್ನು ಪರಿಹರಿಸಿ, ಸ್ಪಷ್ಟ ಮಾರ್ಗಸೂಚಿ ಹಾಗೂ ಅಧಿಕೃತ ಆದೇಶವನ್ನು ಒಂದು ವಾರದೊಳಗೆ ಹೊರಡಿಸುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಗ್ರೇಡ್-ಬಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ವಿಜಯಪುರ ಜಿಲ್ಲೆಯ ನಿಯೋಗವು, ಬೆಂಗಳೂರಿನಲ್ಲಿ ಸಚಿವ ಈಶ್ವರ ಖಂಡ್ರೆ ಹಾಗೂ ಇಲಾಖೆಯ ಆಯುಕ್ತೆ ದಿವ್ಯಪ್ರಭು ಅವರನ್ನು ಸೋಮವಾರ ಭೇಟಿ ಮಾಡಿ, ಪಿಡಿಒಗಳ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದೆ.
“ವಿಬಿ-ಜಿ ರಾಮ್‌ಜಿ ಯೋಜನೆಯ ಅನುಷ್ಠಾನದಲ್ಲಿ ಸ್ಪಷ್ಟತೆ ಇಲ್ಲದೆ ನಿಯಮಬಾಹಿರ ಒತ್ತಡ ಹೇರಲಾಗುತ್ತಿದ್ದು, ಇದನ್ನು ವಿರೋಧಿಸಿ ರಾಜ್ಯದಾದ್ಯಂತ ಅಸಹಕಾರ ಚಳವಳಿ ನಡೆಸಲಾಗುವುದು” ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ನಡಗೇರಿ ಸಚಿವರ ಗಮನಕ್ಕೆ ತಂದರು.
ಪಿಡಿಒಗಳ ಅಹವಾಲುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ, “ಅಧಿಕೃತ ಆದೇಶವನ್ನು ಒಂದು ವಾರದೊಳಗೆ ಹೊರಡಿಸುವುದಾಗಿ, ಬಾಕಿ ಇರುವ ಕ್ರಿಯಾ ಯೋಜನೆಗಳಿಗೆ ತಕ್ಷಣ ಅನುಮೋದನೆ ನೀಡಿ, ಶೀಘ್ರವಾಗಿ ಕಾಮಗಾರಿಗಳನ್ನು ಆರಂಭಿಸಲು ಅಗತ್ಯ ನಿರ್ದೇಶನ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ನಿಯೋಗದಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ನಡಗೇರಿ, ನಿರ್ದೇಶಕಿ ರಾಜೇಶ್ವರಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಇದ್ದರು.




