ಅಂಬೇಡ್ಕರ್ ದೈತ್ಯ ಓದುಗರಾಗಿದ್ದರು. ಅವರ ಬದುಕು ಪುಸ್ತಕಗಳಿಂದ ಪ್ರೇರಣೆ ಪಡೆದಿತ್ತು. ‘ನನ್ನ ಚಿಂತನೆ, ಹೋರಾಟವನ್ನು ಮುನ್ನಡೆಸಿದ್ದು ಪುಸ್ತಕಗಳು. ನನಗೆ ಅತಿಯಾದ ದುಃಖ, ಸಂಕಟವಾದಾಗ ಪುಸ್ತಕಗಳ ಮೊರೆ ಹೋಗುತ್ತಿದ್ದೆ’ ಎಂದು ಅಂಬೇಡ್ಕರ್ ಅವರು ಹೇಳಿಕೊಂಡಿದ್ದಾರೆ. ಅಂತೆಯೇ ಬರಹಗಾರರ ಬದ್ಧತೆ, ಧ್ವನಿ ಯಾರ ಪರವಾಗಿ ಇರಬೇಕೆಂಬುದು ಅತಿ ಮುಖ್ಯವಾಗಿದೆ ಎಂದು ಡಿಎಸ್ಎಸ್ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ವಿಜಯಪುರದ ಮೇ ಸಾಹಿತ್ಯ ಮೇಳ ಬಳಗ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಗರದ ದರ್ಬಾರ್ ಮೈದಾನದಲ್ಲಿ ಆಯೋಜಿಸಿರುವ, ‘ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳʼಕ್ಕೆ ಚಾಲನೆ ನೀಡಿ ಮಾತನಾಡಿದರು.
“ಪುಸ್ತಕಗಳ ಮೂಲಕವೇ ಇಂದು ನಮ್ಮ ಪರಂಪರೆ, ಚರಿತ್ರೆಯನ್ನು ತಿರುಚುವ ಹುನ್ನಾರ ನಡೆದಿರುವುದು ವಿಷಾದದ ಸಂಗತಿ. ಬರಹಗಾರರ ಬದ್ಧತೆ, ಧ್ವನಿ ಯಾರ ಪರವಾಗಿ ಇರಬೇಕೆಂಬುದು ಅತಿ ಮುಖ್ಯವಾಗಿದೆ” ಎಂದರು.
“ಜಾಗತೀಕರಣಶಾಹಿಗಳು ತಮ್ಮ ಲಾಭಕ್ಕಾಗಿ ಯುದ್ಧವನ್ನು ಸೃಷ್ಟಿಸುವ ಮೂಲಕ ಜಗತ್ತನ್ನು ಅಪಾಯಕ್ಕೆ ದೂಡುತ್ತಿದ್ದಾರೆ. ಬೇಡವಾದ ಯುದ್ಧವನ್ನು ಜನರ ಮೇಲೆ ಹೇರಲಾಗುತ್ತಿದೆ. ಮಕ್ಕಳು, ಮಹಿಳೆಯರ ಮೇಲೆ ಬಾಂಬ್ ದಾಳಿ ಮಾಡಲಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಬಸವಾದಿ ಶರಣರ ಕಾಲದಿಂದಲೂ ಪ್ರಭುತ್ವ ವೈಚಾರಿಕ ಪುಸ್ತಕಗಳ ಬಗ್ಗೆ ದಮನಕಾರಿ ಅನುಸರಿಸಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಹಸಿವುಂಡವನು, ಅಪಮಾನ ಅನುಭವಿಸಿದವನು ಅರಮನೆ ಭಾಷೆಯಲ್ಲಿ ಬರೆಯಲು ಸಾಧ್ಯವಿಲ್ಲವೇ ಎಂಬುದನ್ನು ಸಾಹಿತಿ ಸಿದ್ದಲಿಂಗ ತಮ್ಮ ಬಂಡಾಯ ಸಾಹಿತ್ಯದ ಮೂಲಕ ತೋರಿಸಿದ್ದಾರೆ. ದಲಿತರ ಕಷ್ಟ ಕಾರ್ಪಣ್ಯ ಬಂಡಾಯ ಸಾಹಿತ್ಯದ ಮೂಲಕ ಹೊರ ಬಂದಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?ಗದಗ | ಕೋಮುದ್ವೇಷಿ ಹೇಳಿಕೆ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕ್ರಮಕ್ಕೆ ಬಾಲು ರಾಠೋಡ ಆಗ್ರಹ
ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ ಎಂ ಜಾನಕಿ, ಮುಂಬೈನ ದಲಿತ ಪ್ಯಾಂಥರ್ ಸಂಸ್ಥಾಪಕ ಜಿ ವಿ ಪವಾರ್, ಪುಸ್ತಕ ಮೇಳದ ಆಯೋಜಿಕ ಬಸವರಾಜ ಸುಳಿಬಾವಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ್ ವಾಲೆಕಾರ್, ಪಾಲಿಕೆ ಸದಸ್ಯ ಆರತಿ ಸಹಪೂರ, ಸುರೇಶ ಗೆಜ್ಜೆ, ಸಿದ್ದರಾಮಯ್ಯ ಉಕ್ಕಿನ, ಅನಿಲ ಹೊಸಮನಿ, ಸುರೇಶ ಬಿಜಾಪುರ, ಅಡಿವೆಪ್ಪ ಸಾಲಗಲ್ಲ, ಪ್ರಕಾಶಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ, ಅರುಣ್ ಕುಮಾರ ಇಂಗಳೇ, ಸುಭಾಷ್ ಬೆಳ್ಳುಬ್ಬಿ, ಶ್ರೀನಿವಾಸ ಜಾಲವಾದಿ, ಬಿಬಿ ಹಿರೇಮಠ, ಬಸವರಾಜ ಯಂಕಂಚಿ ಇದ್ದರು.




