ಮಾನವ ಇತಿಹಾಸದಲ್ಲಿಯೇ ಭೂಮಿಯಿಂದ ಅತಿ ದೂರದವರೆಗೆ, ಅಂದರೆ 4,06,778 ಕಿಲೋಮೀಟರ್ಗಳಷ್ಟು ದೂರ ಕ್ರಮಿಸಿದ್ದ ನಾಸಾದ ‘ಆರ್ಟೆಮಿಸ್-2’ (Artemis II) ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಭೂಮಿಗೆ ಮರಳಿದೆ. 10 ದಿನಗಳ ಐತಿಹಾಸಿಕ ಚಂದ್ರಯಾನವನ್ನು ಮುಗಿಸಿದ ನಾಲ್ವರು ಗಗನಯಾತ್ರಿಗಳು ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಇದರೊಂದಿಗೆ 21ನೇ ಶತಮಾನದ ಮೊದಲ ಮಾನವಸಹಿತ ಚಂದ್ರಯಾನ ಯೋಜನೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಅಮೆರಿಕದ ಕಾಲಮಾನದ ಪ್ರಕಾರ (ಏಪ್ರಿಲ್ 11ರ ರಾತ್ರಿ 8.07 ), ಓರಿಯನ್ ನೌಕೆಯು ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಗಂಟೆಗೆ 40,000 ಕಿ.ಮೀ.ಗೂ ಹೆಚ್ಚು ಅಗಾಧ ವೇಗದಲ್ಲಿ ಚಲಿಸುತ್ತಿತ್ತು. ಈ ವೇಳೆ ವಾತಾವರಣದ ಘರ್ಷಣೆಯಿಂದ ಉಂಟಾದ ಅತಿರೇಕದ ಉಷ್ಣತೆಯನ್ನು ನೌಕೆಯ ಅತ್ಯಾಧುನಿಕ ‘ಹೀಟ್ ಶೀಲ್ಡ್’ (ಶಾಖ ಕವಚ) ಯಶಸ್ವಿಯಾಗಿ ತಡೆದುಕೊಂಡಿತು.
ಸಾಗರಕ್ಕೆ ಅಪ್ಪಳಿಸುವ ಮುನ್ನ ನೌಕೆಯಲ್ಲಿದ್ದ 11 ಧುಮುಕುಕೊಡೆಗಳ (Parachutes) ವ್ಯವಸ್ಥೆಯು ಹಂತ-ಹಂತವಾಗಿ ತೆರೆದುಕೊಂಡು, ನೌಕೆಯ ವೇಗವನ್ನು ಗಂಟೆಗೆ 300 ಮೈಲಿನಿಂದ ಕೇವಲ 20 ಮೈಲಿಗೆ ತಗ್ಗಿಸುವ ಮೂಲಕ ಗಗನಯಾತ್ರಿಗಳ ಅತ್ಯಂತ ಸುರಕ್ಷಿತ ಲ್ಯಾಂಡಿಂಗ್ ಅನ್ನು ಖಚಿತಪಡಿಸಿತು.
ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್
ಈ ಐತಿಹಾಸಿಕ ಯಾನದಲ್ಲಿ ಕಮಾಂಡರ್ ರೀಡ್ ವೈಸ್ಮನ್ , ಪೈಲಟ್ ವಿಕ್ಟರ್ ಗ್ಲೋವರ್ ಹಾಗೂ ಮಿಷನ್ ತಜ್ಞರಾದ ಕ್ರಿಸ್ಟಿನಾ ಕೋಕ್ ಮತ್ತು ಜೆರೆಮಿ ಹ್ಯಾನ್ಸೆನ್ ಭಾಗಿಯಾಗಿದ್ದರು. ನೌಕೆಯು ಪೆಸಿಫಿಕ್ ಮಹಾಸಾಗರದಲ್ಲಿ ಇಳಿಯುತ್ತಿದ್ದಂತೆಯೇ ನಾಸಾ ಮತ್ತು ಅಮೆರಿಕದ ನೌಕಾಪಡೆಯ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಹೊರತಂದವು. ಈ ಹೈ-ರಿಸ್ಕ್ ಕಾರ್ಯಾಚರಣೆ ಯಶಸ್ವಿಯಾದ ಬಳಿಕ ಗಗನಯಾತ್ರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಅಪೊಲೊ ಕಾರ್ಯಕ್ರಮದ ಬಳಿಕ, ಅಂದರೆ ಐದು ದಶಕಗಳ ಸುದೀರ್ಘಾವಧಿಯ ನಂತರ ಮನುಷ್ಯನನ್ನು ಚಂದ್ರನ ಸನಿಹಕ್ಕೆ ಕೊಂಡೊಯ್ದ ಮೊದಲ ಯೋಜನೆ ಇದಾಗಿದೆ. ಈ ಮಿಷನ್ನಲ್ಲಿ ಗಗನಯಾತ್ರಿಗಳ ಲೈಫ್-ಸಪೋರ್ಟ್ ಸಿಸ್ಟಮ್ಗಳು ಮತ್ತು ನ್ಯಾವಿಗೇಶನ್ಗೆ ಸಂಬಂಧಿಸಿದಂತೆ ಸಂಗ್ರಹಿಸಲಾದ ಡೇಟಾ ಭವಿಷ್ಯದ ಬಾಹ್ಯಾಕಾಶ ಅನ್ವೇಷಣೆಗಳಿಗೆ ಪ್ರಮುಖ ಮೈಲಿಗಲ್ಲಾಗಲಿದೆ. ಇದು ಮುಂಬರುವ ‘ಆರ್ಟೆಮಿಸ್-3’ ಯೋಜನೆಯಲ್ಲಿ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲು, ಅಲ್ಲಿ ಮಾನವನ ಭವಿಷ್ಯದ ಹೆಜ್ಜೆಗಳನ್ನು ಮೂಡಿಸಲು ಮತ್ತು ಮುಂದಿನ ದಿನಗಳಲ್ಲಿ ಮಂಗಳ ಗ್ರಹದ ಅನ್ವೇಷಣೆಗೆ ಭದ್ರ ಬುನಾದಿ ಹಾಕಿಕೊಟ್ಟಿದೆ.




