ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ನಡಹಳ್ಳಿ ಗ್ರಾಮದ ಬಳಿ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ ಘಟನೆ ನಡೆದಿದೆ.
ಈ ಘಟನೆಯಿಂದ ನಡಹಳ್ಳಿ, ಹಾರ್ಲೆ, ಹಾರ್ಲೆ ಕೂಡಿಗೆ, ದೊಡ್ಡತಪ್ಪಲು ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಬಂದ್ ಆಗಿದೆ. ತಡೆಗೋಡೆ ನಿರ್ಮಾಣಕ್ಕಾಗಿ ಮಣ್ಣು ಬಗೆಯುತ್ತಿದ್ದ ವೇಳೆ ಏಕಾಏಕಿ ಮೇಲ್ಬಾಗದ ಭೂಮಿ ಕುಸಿದಿದೆ. ರಸ್ತೆ ಮೇಲ್ಬಾಗದಲ್ಲಿ ಕಾಫಿ ತೋಟವಿದ್ದು, ಮಳೆಯಾದ ಸಂದರ್ಭದಲ್ಲಿ ಮತ್ತಷ್ಟು ಭೂಕುಸಿತ ಸಂಭವಿಸುವ ಆತಂಕ ಎದುರಾಗಿದೆ.
ಈ ರಸ್ತೆ ಮೂಲಕ ಪ್ರತಿನಿತ್ಯ ಸಾರಿಗೆ ಬಸ್‌ಗಳು, ಶಾಲಾ ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿರುವುದರಿಂದ, ಶಿರಾಡಿಘಾಟ್ ರಸ್ತೆ ಬಂದ್ ಆದ ಸಂದರ್ಭದಲ್ಲೂ ಈ ಮಾರ್ಗವನ್ನು ವಾಹನಗಳು ಬಳಸುತ್ತವೆ.
ಇದನ್ನೂ ಓದಿದ್ದೀರಾ?ಹಾಸನ | ₹426 ಕೋಟಿ; ಹಾಸನ-ಬೇಲೂರು ಚತುಷ್ಪಥ ರಸ್ತೆ ಅಭಿವೃದ್ಧಿ ಯೋಜನೆ; ಸಂಸದ ಶ್ರೇಯಸ್ ಪಟೇಲ್
This video cannot be played in your browser. Open the video directly
ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ. ಸ್ಥಳಕ್ಕೆ ಪಿಡಬ್ಲ್ಯೂಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೂಕುಸಿತದ ಅಪಾಯದ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆ ಸಂಚಾರವನ್ನು ಸಂಪೂರ್ಣ ಬಂದ್ ಇರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.





