ಮತದಾರರ ಹಕ್ಕುಗಳು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲಿನ ಬೆದರಿಕೆಗಳನ್ನು ಖಂಡಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ದೆಹಲಿಯಲ್ಲಿ ವಿನೂತನ ಪ್ರತಿಭಟನೆ ನಡೆಸಿದೆ. ತಮ್ಮನ್ನು ತಾವು ‘ಜೀವಂತ ಶವಗಳು’ ಎಂದು ಬಿಂಬಿಸಿಕೊಂಡು ಮತದ ಹಕ್ಕು ಕಳೆದುಕೊಂಡ ನಾಗರಿಕರನ್ನು ಪ್ರತಿಬಿಂಬಿಸಿ ಪ್ರತಿಭಟಿಸಿದ್ದಾರೆ.
ಪ್ರತಿಭಟನೆ ವೇಳೆ, ವಿದ್ಯಾರ್ಥಿಗಳು ಬಿಳಿ ಬಟ್ಟೆ ಹೊದ್ದು ರಸ್ತೆಯಲ್ಲಿ ಮಲಗುವ ಮೂಲಕ ಮತಗಳ ಕಳವು ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಸಾಂಕೇತಿಕವಾಗಿ ಖಂಡಿಸಿದ್ದಾರೆ. “ಮತ ಕಳವು ಸಹಿಸುವುದಿಲ್ಲ, ಸಾರ್ವಜನಿಕರ ಧ್ವನಿಯನ್ನು ಹತ್ತಿಕ್ಕಲು ಬಿಡುವುದಿಲ್ಲ” ಎಂದು ಘೋಷಣೆ ಕೂಗಿದ್ದಾರೆ.
ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳಾದ ಮತದಾನದ ಹಕ್ಕನ್ನು ಕಸಿದುಕೊಂಡಾಗ ಪ್ರಜಾಪ್ರಭುತ್ವಕ್ಕೆ ಯಾವುದೇ ಅರ್ಥವಿರುವುದಿಲ್ಲ, ಆದ್ದರಿಂದ ಚುನಾವಣಾ ಆಯೋಗವು ತನ್ನ ಕೃತ್ಯಕ್ಕೆ ಹೊಣೆಹೊರಬೇಕು” ಎಂದು ಎನ್‌ಎಸ್‌ಯುಐ ನಾಯಕ ವಿನೋದ್ ಜಖರ್ ಒತ್ತಾಯಿಸಿದ್ದಾರೆ.
ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆಯನ್ನು ದೆಹಲಿ ಪೊಲೀಸರು ತಡೆದು, ವಿನೋದ್ ಜಖರ್ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ್ದಾರೆ.
ಪೊಲೀಸರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ ಎನ್‌ಎಸ್‌ಯುಐ ಮಾಧ್ಯಮ ಉಸ್ತುವಾರಿ ರವಿ ಹನುಮಾನ್ ಪಾಂಡೆ, “ಚುನಾವಣಾ ಪ್ರಕ್ರಿಯೆಯ ಕುರಿತು ಪ್ರಶ್ನೆ ಎತ್ತಿದ ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



