ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಮಾನಹಾನಿಕರ ಪೋಸ್ಟ್‌ಗಳನ್ನು ಪ್ರಕಟಿಸಿ, ಪತ್ರಿಕಾಗೋಷ್ಠಿಯಲ್ಲಿ ನಿಂದನಾತ್ಮಕ ಹೇಳಿಕೆ ನೀಡಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಸಿದಲಿಂಗಯ್ಯ ಕರುಣಯ್ಯ ಗದ್ದುಗೆ (ಆಂದೋಲಾ ಶ್ರೀ) ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ರಾಮಯ್ಯ ಹಿರೇಮಠ ವಿರುದ್ಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪುರ ಪಟ್ಟಣದ ಲಕ್ಷ್ಮೀಗುಡಿ ಸಮೀಪದ ನಿವಾಸಿ ನಾಗಪ್ಪ ಘತ್ತರಗಿ (38) ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೋಲಿ-ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ಎಪಿಎಂಸಿ ಮಾಜಿ ನಿರ್ದೇಶಕ ಲಚ್ಚಪ್ಪ ಎಸ್. ಜಮಾದಾರ ಅವರ ಕುರಿತು ಸೆ.3 ಮತ್ತು 4ರಂದು ‘ಶಿವಸೇನಾ ಪಕ್ಷ’ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರೈತರ ಪರ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ಲಚ್ಚಪ್ಪ ಎಸ್. ಜಮಾದಾರ ಹಾಗೂ ಜಿಲ್ಲಾಧಿಕಾರಿ ಇರುವ ಛಾಯಾಚಿತ್ರವನ್ನು ಬಳಸಿ ಆಕ್ಷೇಪಾರ್ಹ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಛಾಯಾಚಿತ್ರ ಬಳಸಿ ಮಾನಹಾನಿಕರ ಅರ್ಥ ಬರುವ ರೀತಿಯಲ್ಲಿ ಮತ್ತೊಂದು ಪೋಸ್ಟ್ ಪ್ರಕಟಿಸಲಾಗಿದೆ ಹಾಗೂ ಸಿದ್ದು ಅಲಿಯಾಸ್ ಸಿದ್ರಾಮಯ್ಯ ಹಿರೇಮಠ ಅವರ ಫೇಸ್‌ಬುಕ್ ಖಾತೆಯಲ್ಲೂ ಅವಹೇಳನಕಾರಿ ಪದಗಳು ಮತ್ತು ಚಿತ್ರಗಳನ್ನು ಬಳಸಿ ಪೋಸ್ಟ್‌ಗಳನ್ನು ಹರಿಬಿಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಹಳೆಯ ದ್ವೇಷಕ್ಕೆ ಪಂಪ್ ಆಪರೇಟರ್ ಬಲಿ; ಚಾಕು ಇರಿದು ಬರ್ಬರ ಹತ್ಯೆ
This video cannot be played in your browser. Open the video directly

ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳು ಹಾಗೂ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳಿಂದ ಲಚ್ಚಪ್ಪ ಎಸ್. ಜಮಾದಾರ ಅವರ ಸಾಮಾಜಿಕ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಫಜಲಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





