ರಾಜ್ಯ ಸರ್ಕಾರ ರೈತರ ಬೆಳೆನಷ್ಟಕ್ಕೆ ಕೇವಲ ₹2,500 ಪರಿಹಾರ ಘೋಷಿಸಿರುವುದು ರೈತರ ಸಂಕಷ್ಟದ ನಡುವೆ ಹಾಸ್ಯಾಸ್ಪದವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಭೀಮರಾಯ ಎಲ್ಹೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು ‘ಬರ, ಬೆಳೆನಷ್ಟ, ಸಾಲದ ಹೊರೆ ಹಾಗೂ ಜೀವನೋಪಾಯದ ಸಂಕಷ್ಟದಿಂದ ರೈತರು ಕಂಗಾಲಾಗಿರುವ ಸಂದರ್ಭದಲ್ಲಿ ₹2,500 ಪರಿಹಾರ ನೀಡುವುದು ನ್ಯಾಯ ಒದಗಿಸುವ ಬದಲು ರೈತರ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ’ ಎಂದು ಅವರು ಹೇಳಿದ್ದಾರೆ.
‘ಸರ್ಕಾರ ₹2,500 ಪರಿಹಾರವನ್ನು ಯಾವ ಮಾನದಂಡದ ಆಧಾರದ ಮೇಲೆ ನಿಗದಿಪಡಿಸಿದೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು. ರೈತರಿಗೆ ಎಕರೆಗಟ್ಟಲೆ ಬೆಳೆನಷ್ಟವಾಗಿರುವಾಗ ಅಲ್ಪ ಮೊತ್ತದ ಪರಿಹಾರ ಘೋಷಿಸಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ’ ಎಂದು ಆರೋಪಿಸಿದ್ದಾರೆ.
‘ಅಲ್ಪ ಹಾಗೂ ಅಸಮರ್ಪಕ ಪರಿಹಾರವನ್ನು ಸರ್ಕಾರ ತಕ್ಷಣ ಹಿಂಪಡೆದು, ಪ್ರತಿ ಎಕರೆಗೆ ಕನಿಷ್ಠ ₹20 ಸಾವಿರದಿಂದ ₹25 ಸಾವಿರದವರೆಗೆ ಪರಿಹಾರ ನೀಡಬೇಕು. ರೈತರ ನಷ್ಟಕ್ಕೆ ಅನುಗುಣವಾಗಿ ನ್ಯಾಯಸಮ್ಮತ ಪರಿಹಾರ ಪ್ಯಾಕೇಜ್ ಘೋಷಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ’ ಎಂದು ಒತ್ತಾಯಿಸಿದ್ದಾರೆ.
This video cannot be played in your browser. Open the video directly
ಇದನ್ನು ಓದಿದ್ದೀರಾ? ಕಲಬುರಗಿ | ವರದಕ್ಷಿಣೆ ಕಿರುಕುಳ ಆರೋಪ; ಮಹಿಳೆ ಅನುಮಾನಾಸ್ಪದ ಸಾವು!
‘ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ರೈತಪರ ನಿರ್ಧಾರ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.





