15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಬೇಕು ಹಾಗೂ 4 ಸಾವಿರ ಹೈಸ್ಕೂಲ್ ಶಿಕ್ಷಕರ ನೇಮಕಾತಿಯಲ್ಲಿ ಗಣಿತ ಸೇರಿದಂತೆ ವಿಷಯವಾರು ಶಿಕ್ಷಕರ ಹುದ್ದೆಗಳನ್ನು ಸೇರಿಸಬೇಕು ಎಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ (ಜೆಎಎಸ್‌ಸಿ) ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವುದನ್ನು ಸ್ವಾಗತಿಸಿದ ಸಂಘಟನೆಗಳು, ಹಲವು ವರ್ಷಗಳ ಹೋರಾಟದ ಫಲವಾಗಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಸರ್ಕಾರ ತನ್ನದೇ ಆದೇಶದಂತೆ ವಯೋಮಿತಿ ಸಡಿಲಿಕೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವು 2026ರ ಜನವರಿ 29ರಂದು ಹೊರಡಿಸಿರುವ ಆದೇಶದಂತೆ, 2027ರ ಡಿಸೆಂಬರ್ 31ರವರೆಗೆ ರಾಜ್ಯ ಸರ್ಕಾರದ ಎಲ್ಲ ನೇರ ನೇಮಕಾತಿಗಳಲ್ಲಿ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಆದರೆ 15 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಈ ಸಡಿಲಿಕೆಯನ್ನು ಪರಿಗಣಿಸದಿರುವುದು ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಅನೇಕ ಅಭ್ಯರ್ಥಿಗಳು ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಕೆಲವರು ಕೆಲವೇ ದಿನಗಳು ಅಥವಾ ತಿಂಗಳುಗಳ ಅಂತರದಲ್ಲಿ ವಯೋಮಿತಿ ಮೀರುವಂತಾಗಿದೆ. ಹೀಗಾಗಿ ಸರ್ಕಾರದ ಆದೇಶದಂತೆ ಶಿಕ್ಷಕರ ನೇಮಕಾತಿಯಲ್ಲೂ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಆಗ್ರಹಿಸಿದರು.
ಅದೇ ರೀತಿ, ಸುಮಾರು 11 ವರ್ಷಗಳ ಬಳಿಕ 4 ಸಾವಿರಕ್ಕೂ ಹೆಚ್ಚು ಹೈಸ್ಕೂಲ್ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಆದರೆ ಗಣಿತ, ಹಿಂದಿ, ಉರ್ದು ಸೇರಿದಂತೆ ವಿವಿಧ ವಿಷಯಗಳ ಶಿಕ್ಷಕರ ಹುದ್ದೆಗಳನ್ನು ಸೇರಿಸದಿರುವುದರಿಂದ ಬಿಎಡ್ ಪೂರ್ಣಗೊಳಿಸಿ ನೇಮಕಾತಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಆದ್ದರಿಂದ ವಿಷಯವಾರು ಶಿಕ್ಷಕರ ಹುದ್ದೆಗಳನ್ನು ನೇಮಕಾತಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಮೂಢನಂಬಿಕೆ ತೊರೆದು ಮಾನವೀಯತೆಯಿಂದ ಬಸವ ಪಂಚಮಿ ಆಚರಿಸಿ: ಕರೆ
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಚನ್ನಬಸವ ಜಾನೇಕಲ್, ಲಕ್ಷ್ಮೀ ರೆಡ್ಡಿ, ವೆಂಕಟಯ್ಯ, ಸಾಹೇಬ್, ಅಬ್ದುಲ್ ಪಟೇಲ್ ಸೇರಿದಂತೆ ಹಲವರು ಇದ್ದರು.




