₹3.95 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಕಾಮಗಾರಿ ಪೂರ್ಣಗೊಂಡು ಕೇವಲ ಮೂರು ತಿಂಗಳಲ್ಲೇ ಡಾಂಬರ್ ಕಿತ್ತುಹೋಗಿ, ಜಲ್ಲಿಕಲ್ಲುಗಳು ಮೇಲೆದ್ದು ಗುಂಡಿಗಳು ನಿರ್ಮಾಣವಾಗಿರುವ ಘಟನೆ ಗುರುಮಠಕಲ್ ಮತಕ್ಷೇತ್ರದ ಪಾಡಪಲ್ಲಿ ಬಳಿ ನಡೆದಿದೆ. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು, ರಸ್ತೆಯನ್ನು ತಕ್ಷಣ ಮರು ಡಾಂಬರೀಕರಣ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.
ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯ ಯಾದಗಿರಿ ತಾಲೂಕಿನ ಎಸ್‌ಎಚ್-22ರಿಂದ ಪಾಡಪಲ್ಲಿ ಮಾರ್ಗವಾಗಿ ಕೊಂಕಲ್ ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 2024-25ನೇ ಸಾಲಿನ ‘ಕಲ್ಯಾಣ ಪಥ’ ಯೋಜನೆಯಡಿ ₹395.70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಾಮಗಾರಿ ಮಾಹಿತಿ ಫಲಕದ ಪ್ರಕಾರ, ರಸ್ತೆಯ ಐದು ವರ್ಷಗಳ ನಿರ್ವಹಣೆಗೆ ₹32.62 ಲಕ್ಷ ಹಾಗೂ ಆರನೇ ವರ್ಷದಲ್ಲಿ ಮರು ಡಾಂಬರೀಕರಣಕ್ಕೆ ₹50.24 ಲಕ್ಷ ಮೀಸಲಿಡಲಾಗಿದೆ.
ಆದರೆ ಕಾಮಗಾರಿ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ರಸ್ತೆ ಹದಗೆಟ್ಟಿದ್ದು, ಹಲವು ಕಡೆ ಡಾಂಬರ್ ಕಿತ್ತುಹೋಗಿ ಜಲ್ಲಿಕಲ್ಲುಗಳು ಮೇಲೆದ್ದಿವೆ. ಬೃಹತ್ ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಅಪಾಯದ ನಡುವೆ ಸಂಚರಿಸುವಂತಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಗುರುಮಠಕಲ್ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ಆರೋಪಿಸಿದರು.

“ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಗುಣಮಟ್ಟದ ಪರಿಶೀಲನೆ ನಡೆಸಲಾಗಿದೆಯೇ ಎಂಬ ಅನುಮಾನ ಮೂಡಿದೆ. ಕಾಮಗಾರಿ ಪೂರ್ಣಗೊಳ್ಳುವ ಮುನ್ನ ಸಮರ್ಪಕ ಸ್ಥಳ ಪರಿಶೀಲನೆ ಹಾಗೂ ಗುಣಮಟ್ಟ ಪರೀಕ್ಷೆ ನಡೆಸದೆ ಬಿಲ್ ಮಂಜೂರು ಮಾಡಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದರು.
“ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಶರಣಗೌಡ ಕಂದಕೂರು ಅವರು ಅನುದಾನ ತಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದು, ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂಬ ಸೂಚನೆ ನೀಡಿದ್ದಾರೆ. ಆದರೂ ಪಾಡಪಲ್ಲಿ ರಸ್ತೆ ಕೆಲವೇ ತಿಂಗಳಲ್ಲಿ ಹದಗೆಟ್ಟಿರುವುದು ಗಂಭೀರ ವಿಚಾರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು” ಎಂದು ಒತ್ತಾಯಿಸಿದರು.
“ಕಳಪೆ ಕಾಮಗಾರಿ ತನಿಖೆಯಲ್ಲಿ ದೃಢಪಟ್ಟರೆ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಂಡು, ನಿಯಮಾನುಸಾರ ಪರವಾನಗಿ ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸಬೇಕು. ಕಾಮಗಾರಿ ಮೇಲ್ವಿಚಾರಣೆಯಲ್ಲಿ ಲೋಪವಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಇಲಾಖಾ ತನಿಖೆ ನಡೆಸಬೇಕು.
ಗುತ್ತಿಗೆದಾರನ ಹೊಣೆಗಾರಿಕೆಯಡಿ ಗುಣಮಟ್ಟದೊಂದಿಗೆ ರಸ್ತೆಯನ್ನು ತಕ್ಷಣ ಮರು ಡಾಂಬರೀಕರಣ ಮಾಡಿಸಬೇಕು” ಎಂದು ಆಗ್ರಹಿಸಿದರು.
“ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿರುವ ರಸ್ತೆ ಕೆಲವೇ ತಿಂಗಳಲ್ಲಿ ಹಾಳಾಗಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತಕ್ಷಣ ರಸ್ತೆ ದುರಸ್ತಿ ಮಾಡದಿದ್ದರೆ ಸಾರ್ವಜನಿಕರೊಂದಿಗೆ ರಸ್ತೆ ತಡೆದು ಉಗ್ರ ಹೋರಾಟ ನಡೆಸಲಾಗುವುದು” ಎಂದು ನಾಗೇಶ್ ಗದ್ದಿಗಿ ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ 5 ವರ್ಷ ವಯೋಮಿತಿ ಸಡಿಲಿಕೆಗೆ ಆಗ್ರಹ
ಈ ಸಂದರ್ಭದಲ್ಲಿ ಉದಯಕುಮಾರ, ವಿಜಯಕುಮಾರ, ಆನಂದ, ಶ್ರೀನಿವಾಸ ಪಾಡಪಲ್ಲಿ, ಬನ್ನು ಮಡುಗು, ಹನುಮೇಶ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.




