ಕ್ವಿಟ್ ಇಂಡಿಯಾ ಚಳುವಳಿಯ ನೆನಪಾರ್ಥ ಸಂಯುಕ್ತ ಹೋರಾಟ ಕರ್ನಾಟಕ (ಎಸ್‌ಕೆಎಂ) ಹಾಗೂ ಜಂಟಿ ಕಾರ್ಮಿಕ ಸಂಘಟನೆ (ಜೆಸಿಟಿಯು) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಜೈಲ್ ಭರೋ ಚಳುವಳಿಯ ಅಂಗವಾಗಿ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಗಳ ಮುಖಂಡರು, ‘ಕಾರ್ಮಿಕರನ್ನು ಹೊಸ ಗುಲಾಮಗಿರಿಯತ್ತ ತಳ್ಳುತ್ತಿರುವ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ವಿಬಿ-ಗ್ರಾಮ್ ಜಿ ಕಾಯ್ದೆ ಸೇರಿದಂತೆ ಕಾರ್ಮಿಕರು ಹಾಗೂ ಗ್ರಾಮೀಣ ಜನರ ಹಕ್ಕುಗಳಿಗೆ ಧಕ್ಕೆ ತರುವ ನೀತಿಗಳನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.
‘ದೇಶದ 140 ಕೋಟಿಗೂ ಅಧಿಕ ಜನಸಂಖ್ಯೆಯಲ್ಲಿ ಬಹುಪಾಲು ಜನರಿಗೆ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗದಂತಹ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ದೊರೆತಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ. ಆದರೆ, ಸಾರ್ವಜನಿಕ ಸಂಪನ್ಮೂಲಗಳನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುವ ಮೂಲಕ ಜನಸಾಮಾನ್ಯರ ಹಿತ ಕಡೆಗಣಿಸಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಜಿಯೋ, ಏರ್‌ಟೆಲ್ ಸೇರಿದಂತೆ ಖಾಸಗಿ ಕಂಪನಿಗಳು ಟೆಲಿಕಾಂ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಆದಾಯ ಗಳಿಸುತ್ತಿವೆ. ದೇಶದ ಜನಸಾಮಾನ್ಯರಿಂದ ಸಂಗ್ರಹವಾಗುವ ಸಂಪತ್ತು ಕೆಲವೇ ಕಾರ್ಪೊರೇಟ್ ಕಂಪನಿಗಳ ಕೈ ಸೇರುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಮುಖಂಡರು ಒತ್ತಾಯಿಸಿದರು.
ಈ ಭಾಗದ ಸಮಗ್ರ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಮೂಲಕ ನಿರೀಕ್ಷಿತ ಮಟ್ಟದ ಅನುದಾನ ಹಾಗೂ ಯೋಜನೆಗಳು ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಾದೇಶಿಕ ಅಸಮಾನತೆ ನಿವಾರಿಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
‘ಕಾರ್ಮಿಕರಿಗೆ 8 ಗಂಟೆಗಳ ಕೆಲಸದ ಹಕ್ಕು ಖಾತರಿಪಡಿಸಬೇಕು. ಕನಿಷ್ಠ ವೇತನ ₹36 ಸಾವಿರ ನಿಗದಿಪಡಿಸಿ ಜಾರಿಗೊಳಿಸಬೇಕು. ಹೊರಗುತ್ತಿಗೆ ಹಾಗೂ ಒಳಗುತ್ತಿಗೆ ಪದ್ಧತಿ ರದ್ದುಪಡಿಸಿ ಕಾರ್ಮಿಕರನ್ನು ಖಾಯಂಗೊಳಿಸಬೇಕು. ನರೇಗಾ ಯೋಜನೆಯಡಿ 200 ದಿನಗಳ ಕೆಲಸ ಹಾಗೂ ದಿನಕ್ಕೆ ₹600 ಕೂಲಿ ನೀಡಬೇಕು’ ಎಂದು ಒತ್ತಾಯಿಸಿದರು.
‘ರೈತರ ಸಮಸ್ಯೆಗಳ ಕುರಿತು ಮಾತನಾಡಿದ ಮುಖಂಡರು, ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸಿ ಬೆಳೆಗಳಿಗೆ ಖಾತರಿಯ ಬೆಂಬಲ ಬೆಲೆ ನೀಡಬೇಕು. ರೈತರ ಸಾಲಮನ್ನಾ ಮಾಡಿ ಆತ್ಮಹತ್ಯೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
‘ಮುಂದಿನ ತಿಂಗಳು 17ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಂದರ್ಭದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ರೈತರು, ಕಾರ್ಮಿಕರು, ಕೃಷಿ ಕೂಲಿಕಾರರು, ವಿದ್ಯಾರ್ಥಿಗಳು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮುಖಂಡರು ಕರೆ ನೀಡಿದರು.
‘ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಶಹಾಪುರದಲ್ಲಿ ನಗರ ಸಂಚಾರ ಪೊಲೀಸ್ ಠಾಣೆ ಹಾಗೂ ಸಹಾಯಕ ಆಯುಕ್ತರ ಕಚೇರಿಯನ್ನು ಕೂಡಲೇ ಆರಂಭಿಸಬೇಕು’ ಎಂಬ ಬೇಡಿಕೆಗಳನ್ನೂ ಮುಂದಿಟ್ಟರು.
ಇದನ್ನು ಓದಿದ್ದೀರಾ? ಕಲಬುರಗಿ | ಭೂಮಾನಂದ ಕೊಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಬಿಎಸ್‌ಪಿ ಆಗ್ರಹ
ಈ ಸಂದರ್ಭದಲ್ಲಿ ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಚನ್ನಪ್ಪ ಆನೇಗುಂದಿ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್, ಎಐಎಡಬ್ಲ್ಯೂಯು ಜಿಲ್ಲಾಧ್ಯಕ್ಷ ದಾವಲಸಾಬ ನದಾಫ್, ಭೀಮರಾಯ ಪೂಜಾರಿ, ಭೀಮರೆಡ್ಡಿ, ಎಐಯುಟಿಯುಸಿ ಜಿಲ್ಲಾ ಕಾರ್ಮಿಕ ಮುಖಂಡರಾದ ಬಿ. ಉಮಾದೇವಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




