ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸರ್ಕಾರಿ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಖಾಯಂ ಶಿಕ್ಷಕರನ್ನು ನೇಮಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.26ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಸರ್ಕಾರಿ ಶಾಲಾ ಅಭಿವೃದ್ಧಿ ವೇದಿಕೆ ಸಂಚಾಲಕಿ ವಿದ್ಯಾ ಪಾಟೀಲ್ ತಿಳಿಸಿದ್ದಾರೆ.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ 62,420 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿವೆ. 01 ತರಗತಿಯಿಂದ 05 ತರಗತಿಯವರೆಗೆ 5 ರಿಂದ 8 ನೇ ತರಗತಿವರೆಗೆ 3 ಕಿಮೀ ಅಂತರದಲ್ಲಿ ನೆರೆಹೊರೆ ಶಾಲೆಗಳಿರಬೇಕೆಂದು ನಿಯಮವಿದೆ. ಕಳೆದ 17 ವರ್ಷಗಳಿಂದ ಶಿಕ್ಷಣ ಹಕ್ಕು ಕಾಯ್ದೆ ಪೂರ್ಣ ಪ್ರಮಾಣದ ಜಾರಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಸುಳ್ಳು ಭರವಸೆಗಳನ್ನು ನೀಡುತ್ತಲೇ ಬಂದಿವೆ ಎಂದರು.
ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಶೇ.13 ಅಂಕಗಳ ಕಡಿಮೆ ಮಾಡಲು ನಿರ್ದೇಶನ ನಿಡಿರುವ ಸರ್ಕಾರ ಖಾಯಂ ಶಿಕ್ಷಕರನ್ನು ನೀಡದೇ ಫಲಿತಾಂಶ ಹೆಚ್ಚಿಸುವ ಹುನ್ನಾರ ನಡೆಸುತ್ತಿದೆ. 2024 ರಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕನ್ನಡ ಓದಲು, ಬರೆಯಲು ಬಾರದೇ ಇರುವ ಸಮೀಕ್ಷೆ ಬಹಿರಂಗವಾಗಿದೆ. ಶಾಲೆಗಳಲ್ಲಿ ಶಿಕ್ಷಕರು ಇಲ್ಲದೇ ಇರುವದರಿಂದಲೇ ಕಲಿಕೆಯ ಮೇಲೆ ಪರಿಣಾಮವಾಗುತ್ತಿದೆ. ಕೂಡಲೇ ಕೆಪಿಸಿ, ಮ್ಯಾಗ್ನೇಟ್ ಶಾಲೆಗಳನ್ನು ನಿಲ್ಲಿಸಬೇಕು, ಆರ್‌ಟಿಈ ಜಾರಿ ಕುರಿತು ಶ್ವೇತಪತ್ರ ಹೊರಡಿಸಲು ಆಗ್ರಹಿಸಿ ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯ ಎಲ್ಲಾ ಜಿಲ್ಲೆಗಳಿಂದ ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು.
ಮುಖಂಡ ಸೈಯದ್ ಹಫೀಜುಲ್ಲಾ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷವನ್ನು ‘ಜಿರೋ ಶೈಕ್ಷಣಿಕ ವರ್ಷ’ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ಶಾಲಾ ಅವಧಿಯಲ್ಲಿಯೇ ಎಸ್‌ಐಆರ್ ಕಾರ್ಯ ನಡೆಯುತ್ತಿರುವುದರಿಂದ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಮಕ್ಕಳ ಮೌಲ್ಯಮಾಪನ ನಡೆಸಿದರೆ ಅವರ ಕಲಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಸಕ್ತ ವರ್ಷವನ್ನು ‘ಜಿರೋ ಶೈಕ್ಷಣಿಕ ವರ್ಷ’ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | SIR : ನೈಜ ಮತದಾರರನ್ನೇ ಗುರಿಯಾಗಿಸಿ ಫಾರ್ಮ್-7 ಸಲ್ಲಿಕೆ, ಎಸ್‌ಐಟಿ ತನಿಖೆಗೆ ಆಗ್ರಹ
ಈ ಸಂದರ್ಬದಲ್ಲಿ ಮಹಾಂತೇಶ ಬಾಗಲಕೋಟೆ, ಮಲ್ಲೇಶ ಚಿತ್ರದುರ್ಗ, ಶೈಲಾಜ್ ವಿಜಯನಗರ, ಸ್ವಪ್ಮದೀಪಾ ಬೀದರ,ಬಸವರಾಜ ಗಬ್ಬೂರು ಸೇರಿದಂತೆ ಅನೇಕರಿದ್ದರು.




