ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಖರ್ದೌನ್‌ಕಲಾ ಗ್ರಾಮದಲ್ಲಿರುವ ಬಾವಿಯೊಂದರಲ್ಲಿ 13 ಜಿಂಕೆಗಳ ಮೃತದೇಹಗಳು ಪತ್ತೆಯಾಗಿವೆ. ಬೀದಿನಾಯಿಯೊಂದರಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಜಿಂಕೆಗಳು ಬಾವಿಗೆ ಬಿದ್ದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಜಿಂಕೆಗಳನ್ನು ಅಟ್ಟಿಸಿಕೊಂಡು ಹೋಗಿದ್ದ ಒಂದು ನಾಯಿಯೂ ಸಹ ಬಾವಿಯಲ್ಲಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಕಳೆದ ಭಾನುವಾರ ರೈತರೊಬ್ಬರ ಕುಟುಂಬಸ್ಥರು ತಮ್ಮ ಹೊಲಕ್ಕೆ ಕೀಟನಾಶಕ ಸಿಂಪಡಿಸಲು ಹೋಗಿದ್ದಾಗ ತೀವ್ರವಾದ ದುರ್ವಾಸನೆ ಬಂದಿದೆ. ಅನುಮಾನಗೊಂಡು ಬಾವಿಯೊಳಗೆ ಇಣುಕಿ ನೋಡಿದಾಗ ಜಿಂಕೆಗಳ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ. ರೈತನ ಕುಟುಂಬಸ್ಥರು ತಕ್ಷಣವೇ ಗ್ರಾಮದ ಮುಖಂಡರಿಗೆ ಮಾಹಿತಿ ನೀಡಿದ್ದು, ನಂತರ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದೆ ಎಂದು ವರದಿಯಾಗಿದೆ.
“ಪ್ರಾಥಮಿಕ ತನಿಖೆಯ ಪ್ರಕಾರ, ಈ ಘಟನೆಯು ಒಂದು ಅಥವಾ ಎರಡು ದಿನಗಳ ಮುಂಚಿತವಾಗಿ ನಡೆದಿರಬಹುದು. ಜಿಂಕೆಗಳ ಹಿಂಡು ವೇಗವಾಗಿ ಓಡಿ ಬರುವಾಗ ತೆರೆದ ಬಾವಿಯ ಬಳಿ ಬಂದಿದೆ. ಬಾವಿಯ ಸುತ್ತ ನಿರ್ಮಿಸಲಾಗಿದ್ದ ರಕ್ಷಣಾತ್ಮಕ ತಡೆಗೋಡೆಯ ಒಂದು ಭಾಗ ಮುರಿದಿದ್ದರಿಂದ, ಪ್ರಾಣಿಗಳು ನೇರವಾಗಿ ಬಾವಿಗೆ ಬಿದ್ದಿವೆ. ಜಿಂಕೆಗಳನ್ನು ಅಟ್ಟಿಸಿಕೊಂಡು ಬಂದ ಬೀದಿನಾಯಿಯೂ ಬಾವಿಗೆ ಬಿದ್ದಿದೆ” ಎಂದು ವನ್ಯಜೀವಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಶಿಕ್ಷಕರಿಗೆ SIR ಕರ್ತವ್ಯವೋ, ಮಕ್ಕಳ ಪಾಠವೋ- ಬಗೆಹರಿಯದ ಗೊಂದಲ
ಘಟನಾ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆ ಪ್ರದೇಶವನ್ನು ಸೀಲ್ ಮಾಡಿ, ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಅಧಿಕಾರಿಗಳು ಆರಂಭದಲ್ಲಿ ಈ ವಿಷಯವನ್ನು ಸಾರ್ವಜನಿಕವಾಗಿ ಮುಚ್ಚಿಡಲು ಯತ್ನಿಸಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಲಾಪಿಪಲ್-ಶುಜಾಲ್ಪುರ್ ಭಾಗದಲ್ಲಿ ಜಿಂಕೆಗಳ ಸಂಖ್ಯೆ ಹೆಚ್ಚಾಗಿದ್ದು, ಅವುಗಳು ಆಹಾರ ಹುಡುಕುತ್ತಾ ಪದೇ ಪದೇ ಕೃಷಿ ಭೂಮಿಗೆ ನುಗ್ಗುತ್ತಿರುತ್ತವೆ. ಪರಿಣಾಮ, ಬೆಳೆ ಹಾನಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ, ಸುಮಾರು ಎರಡು ತಿಂಗಳ ಹಿಂದೆಯಷ್ಟೇ ಅರಣ್ಯ ಇಲಾಖೆಯು ‘ಬೋಮಾ ಕ್ಯಾಪ್ಚರ್’ ಪದ್ಧತಿಯ ಮೂಲಕ ಸುಮಾರು 800 ಜಿಂಕೆಗಳನ್ನು ಬೇರೆ ಅಭಯಾರಣ್ಯಗಳಿಗೆ ಸ್ಥಳಾಂತರಿಸಿತ್ತು.



