3 ಲಕ್ಷ ಟನ್ ಎಲ್‌ಪಿಜಿ ಹೊತ್ತಿರುವ 6 ಹಡಗುಗಳು ಸೇರಿ ಒಟ್ಟು 22 ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ ಎಂದು ಹಡಗು ಸಚಿವಾಲಯವು ಮಂಗಳವಾರ ತಿಳಿಸಿದೆ.
ಸೋಮವಾರ ಮತ್ತು ಮಂಗಳವಾರ, ತಲಾ ಸುಮಾರು 46,500 ಟನ್ ಎಲ್‌ಪಿಜಿ ಹೊತ್ತಿದ್ದ ‘ಶಿವಾಲಿಕ್ ಮತ್ತು ‘ನಂದಾದೇವಿ’ ಎಂಬ ಎರಡು ಹಗಡುಗಳು ಭಾರತವನ್ನು ತಲುಪಿವೆ. ಈ ಎರಡೂ ಹಡಗುಗಳಲ್ಲಿದ್ದ ಎಲ್‌ಪಿಜಿ ಭಾರತ ಅಡುಗೆ ಅನಿಲ ಬವಣೆಯನ್ನು ಕೊಂಚ ತಗ್ಗಿಸಿದೆ. ಆದಾಗ್ಯೂ, ಎಲ್‌ಪಿಜಿ ಬಿಕ್ಕಟ್ಟು ಮುಂದುವರೆದಿದೆ.
ಈ ನಡುವೆ, ಹಾರ್ಮುಜ್ ಜಲಸಂಧಿಯಲ್ಲಿ ಆರು ಎಲ್‌ಪಿಜಿ ಹಡಗುಗಳು, ಒಂದು ಎಲ್‌ಎನ್‌ಜಿ ಟ್ಯಾಂಕರ್, ಕಚ್ಚಾ ತೈಲವಿರುವ ನಾಲ್ಕು ಹಡಗುಗಳು, ರಾಸಾಯನಿಕ ಮತ್ತು ಉತ್ಪನ್ನಗಳನ್ನು ಹೊತ್ತ ಒಂದು ಹಡಗು, ಮೂರು ಕಂಟೈನರ್ ಹಡಗುಗಳು ಹಾಗೂ ಎರಡು ಬಲ್ಕ್ ಕ್ಯಾರಿಯರ್‌ಗಳು ಸೇರಿದಂತೆ ಒಟ್ಟು 22 ಭಾರತೀಯ ಹಡಗುಗಳು ಸಿಲುಕಿವೆ ಎಂದು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ಇನ್ನು, ಭಾರತದಿಂದ ರಫ್ತಾಗಬೇಕಿದ್ದ ಸರಕುಗಳನ್ನು ಹೊತ್ತ ಹಗಡುಗಳೂ ಭಾರತ ಬಂದರುಗಳಲ್ಲಿಯೇ ಉಳಿದಿವೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎಲ್ಲ ಬಂದರುಗಳು ಹಡಗುಗಳ ಸಂಚಾರ ಮತ್ತು ಸರಕು ಕಾರ್ಯಾಚರಣೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿವೆ. ಹೆಚ್ಚುವರಿ ಸಂಗ್ರಹಣಾ ಸ್ಥಳ ಸೇರಿದಂತೆ ಅಗತ್ಯ ಬೆಂಬಲವನ್ನು ನೀಡುತ್ತಿವೆ ಎಂದು ಸಚಿವಾಲಯ ಹೇಳಿದೆ.
This video cannot be played in your browser. Open the video directly
ಈ ಲೇಖನ ಓದಿದ್ದೀರಾ?: LPG ಹೊತ್ತು ಭಾರತಕ್ಕೆ ಬಂದ ‘ಶಿವಾಲಿಕ್’ ಹಡಗು; ತಣಿಯುವುದೇ ಕೊರತೆ-ಆತಂಕ?
ವಿ.ಒ. ಚಿದಂಬರನಾರ್ ಬಂದರು ಸರಕು ವರ್ಗಾವಣೆ ಕಂಟೈನರ್‌ಗಳಿಗಾಗಿ ಸುಮಾರು 90,000 ಚದರ ಮೀಟರ್ ಜಾಗವನ್ನು ಒದಗಿಸಿದೆ. ಜವಾಹರಲಾಲ್ ನೆಹರು ಬಂದರಿನಲ್ಲಿ ಶೀಘ್ರವಾಗಿ ಹಾಳಾಗುವ ವಸ್ತುಗಳಿರುವ ಕಂಟೈನರ್‌ಗಳ ಸಂಖ್ಯೆಯನ್ನು ಸುಮಾರು 2,000 ರಿಂದ 1,000ಕ್ಕೆ ಇಳಿಸಲಾಗಿದೆ ಎಂದು ಸಿನ್ಹಾ ಹೇಳಿದ್ದಾರೆ.
ಕೆಲವು ಕಂಟೈನರ್‌ಗಳು ದೇಶೀಯ ಮಾರುಕಟ್ಟೆಗೆ ಮರಳಿವೆ. ಕೆಲವು ಓಮನ್‌ನ ಸಲಾಹ್ ಮತ್ತು ಯುಎಇಯ ಖೋರ್ ಫಕ್ಕನ್‌ನಂತಹ ಬಂದರುಗಳಿಗೆ ಪ್ರಯಾಣ ಬೆಳೆಸಿವೆ ಎಂದು ಅವರು ವಿವರಿಸಿದ್ದಾರೆ.




