ತಮಿಳುನಾಡಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಶಾಸಕರಿಗೆ ಬರೋಬ್ಬರಿ ₹35 ಕೋಟಿ ಲಂಚದ ಆಮಿಷವೊಡ್ಡಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಅವರ ಸಹೋದರ ಆರ್.ವಿ. ಅಶೋಕ್ ಕುಮಾರ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ 3ರಂದು ನ್ಯಾಯಮೂರ್ತಿ ಸಿ. ಕುಮಾರಪ್ಪನ್ ಅವರ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬರಲಿದೆ.
ಊತಂಗರೈ ಕ್ಷೇತ್ರದ ಟಿವಿಕೆ ಶಾಸಕ ಎನ್. ಇಳಯರಾಜಾ ಅವರು ನೀಡಿದ ದೂರಿನ ಆಧಾರದ ಮೇಲೆ ಜೂನ್ 30ರಂದು ಚೆನ್ನೈನ ಟ್ರಿಪ್ಲಿಕೇನ್ ಪೊಲೀಸರು ಅಶೋಕ್ ಕುಮಾರ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಐಪಿಡಿಎಸ್ ಎಂಬ ಸಂಸ್ಥೆಯ ‘ತಿರುನಾವುಕರಸು’ ಎಂಬಾತ ಜೂನ್ 26ರಂದು ಶಾಸಕರಿಗೆ ಕರೆ ಮಾಡಿ, ಪ್ರಮುಖ ಪಕ್ಷವೊಂದರಿಂದ ಭಾರಿ ಆಫರ್ ಇದೆ ಎಂದು ಹೇಳಿ ಮುಖಾಮುಖಿ ಭೇಟಿಗೆ ಒತ್ತಾಯಿಸಿದ್ದನು. ಭೇಟಿಗೆ ಶಾಸಕರು ನಿರಾಕರಿಸಿದ್ದರು.
ಬಳಿಕ ವಾಟ್ಸಾಪ್ ಮೂಲಕ ಕರೆ ಮಾಡಿದ ಆತ, ‘ಟಿವಿಕೆ ನೇತೃತ್ವದ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ’ ಎಂದು ಹೇಳಿದ್ದರು. ಅಲ್ಲದೆ, ತಮಿಳುನಾಡು ವಿಧಾನಸಭೆ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಯೋಜನೆಯಿದ್ದು, ಆ ವೇಳೆ ಟಿವಿಕೆ ವಿಪ್ ವಿರುದ್ಧ ಮತ ಚಲಾಯಿಸಿದರೆ ₹35 ಕೋಟಿ ನೀಡುವುದಾಗಿ ಆಮಿಷವೊಡ್ಡಿದ್ದರು. ಒಪ್ಪಿದರೆ ನರೇಶ್, ಕೃಷ್ಣನ್ ಮತ್ತು ಅಶೋಕ್ ಕುಮಾರ್ ಭೇಟಿಯಾಗಲಿದ್ದಾರೆ ಎಂದಿದ್ದರು.
ಶಾಸಕರು ಈ ಒಪ್ಪಂದವನ್ನು ಸಾರಾಸಗಟಾಗಿ ತಿರಸ್ಕರಿಸಿದಾಗ, ಕರೆ ಮಾಡಿದಾತ ಶಾಸಕರಿಗೆ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದನು. ಈ ಬಗ್ಗೆ ವಾಟ್ಸಾಪ್ ಕರೆ ದಾಖಲೆಗಳ ಸಮೇತ ಶಾಸಕರು ಜೂನ್ 29ರಂದು ದೂರು ನೀಡಿದ್ದರು. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಈ ಆರೋಪಗಳನ್ನು ಬಲವಾಗಿ ತಳ್ಳಿಹಾಕಿರುವ ಅಶೋಕ್ ಕುಮಾರ್, ಕರೆ ಮಾಡಿದಾತ ಕೇವಲ ತಮ್ಮ ಹೆಸರನ್ನು ಉಲ್ಲೇಖಿಸಿದ ಕಾರಣಕ್ಕೆ ಎಫ್‌ಐಆರ್‌ನಲ್ಲಿ ತಮ್ಮನ್ನು ಸೇರಿಸಲಾಗಿದೆ ಎಂದು ವಾದಿಸಿದ್ದಾರೆ. ಶಾಸಕರ ಜೊತೆ ತಾವು ಯಾವುದೇ ನೇರ ಸಂಪರ್ಕ ಹೊಂದಿಲ್ಲ. ಮುಂಬರುವ ಕರೂರು ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ರಾಜಕೀಯ ದುರುದ್ದೇಶದಿಂದ ಈ ದೂರು ದಾಖಲಿಸಲಾಗಿದೆ ಎಂದು ತಮ್ಮ ಜಾಮೀನು ಅರ್ಜಿಯಲ್ಲಿ ಅಶೋಕ್ ಕುಮಾರ್ ವಿವರಿಸಿದ್ದಾರೆ.




