2027ಕ್ಕೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಎದುರಾಗುತ್ತಿದೆ. ಈ ಹೊತ್ತಿನಲ್ಲಿ ಎದ್ದು ಬಂದಿರುವ ರಾಮಮಂದಿರ ದೇಣಿಗೆ ಹಗರಣ, ಸರ್ಕಾರವನ್ನೇ ಉರುಳಿಸಿಬಿಡುವ ಸಾಧ್ಯತೆ ಇದೆ. ಸಾವಿರಾರು ಕೋಟಿ ಕದ್ದಿರುವ ಅನುಮಾನಿಗಳು ದಟ್ಟವಾಗುತ್ತಿವೆ.
ಅಯೋಧ್ಯೆಯ ಶ್ರೀರಾಮಮಂದಿರ ದೇಣಿಗೆ ಹಗರಣ- ಸುರುಳಿ ಸುರುಳಿಯಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತಿದೆ. ಭಕ್ತರು ನೀಡಿದ ಕೋಟ್ಯಂತರ ರೂಪಾಯಿಗಳನ್ನು, ಆಭರಣಗಳನ್ನು ಕೊಳ್ಳೆಹೊಡೆಯಲಾಗಿದೆ. ಈ ಪ್ರಕರಣ ರಾಜಕೀಯವಾಗಿ ಸಂಘಪರಿವಾರಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ದಟ್ಟವಾಗುತ್ತಿದೆ.
2027ನೇ ಇಸವಿಯಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಎದುರಾಗುತ್ತಿದ್ದು, ಈ ಹೊತ್ತಿನಲ್ಲಿ ತೆರೆದುಕೊಂಡಿರುವ ಹುಂಡಿ ಸ್ಕ್ಯಾಮ್, ಸರ್ಕಾರವನ್ನೇ ಬೀಳಿಸುವಷ್ಟು ಬೃಹದಾಕಾರವಾಗಿದೆ. ರಾಮ ಜನ್ಮಭೂಮಿ ವಿಚಾರವನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡು ಮೇಲೆದ್ದುಬಂದ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಇದು ಅಗ್ನಿಪರೀಕ್ಷೆಯ ಕಾಲ. ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ನಾಯಕ ಯೋಗಿ ಆದಿತ್ಯನಾಥ್ ಉತ್ತರಿಸಲಾಗದೆ ತತ್ತರಿಸಿದ್ದಾರೆ. ಪ್ರಶ್ನಿಸುವವರನ್ನು ಭಾವನಾತ್ಮಕವಾಗಿ ಎದುರಿಸುವುದೂ ಕಷ್ಟಕರವಾಗಿದೆ. ರಾಜ್ಯ ಸರ್ಕಾರದ ಕಣ್ಣಳತೆಯಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಹೇಗೆ ನಡೆದರೂ ಗುಮಾನಿಗಳು ಮರೆಯಾಗುವುದಿಲ್ಲ. ತಿಮಿಂಗಿಲಗಳನ್ನು ಬಿಟ್ಟು ಸಣ್ಣ ಮೀನುಗಳನ್ನು ಹಿಡಿಯುತ್ತಿರುವ ಎಸ್‌ಐಟಿ ಬಗ್ಗೆ ಆಕ್ಷೇಪಗಳು ಬಂದಿವೆ. ಚುನಾವಣೆ ಎದುರಲ್ಲಿ ಇಟ್ಟುಕೊಂಡು ಸರ್ಕಸ್ ಮಾಡುವುದಕ್ಕೆ ಯೋಗಿ ಸಿದ್ದವಿಲ್ಲ, ಹೀಗಾಗಿಯೇ ಪ್ರಕರಣವನ್ನು ಕೇಂದ್ರ ಸರ್ಕಾರದ ಕಡೆಗೆ ಎಸೆದು, ಸಿಬಿಐ ಮೂಲಕ ತನಿಖೆ ನಡೆಸುತ್ತೇವೆ ಎಂದು ಹೇಳಿಬಿಟ್ಟರೆ ಪಾರಾಗಬಹುದು ಎಂಬ ಲೆಕ್ಕಾಚಾರದಲ್ಲಿ ಯೋಗಿ ಇದ್ದಾರೆಯೇ ಎಂಬ ಚರ್ಚೆಗಳೂ ನಡೆಯುತ್ತಿವೆ. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರವೇ ಆಗಿರುವುದರಿಂದ ಯಾವುದೇ ನಿರ್ಧಾರ ತೆಗೆದುಕೊಂಡರೂ ಯೋಗಿ ತಲೆದಂಡ ಖಚಿತ ಎನ್ನುತ್ತಾರೆ ವಿಶ್ಲೇಷಕರು. ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಧ್ಯಕ್ಷ ಅಲೋಕ್ ಕುಮಾರ್ ಅವರಿಗೆ ಸಿಬಿಐ ತನಿಖೆ ಇಷ್ಟವಿಲ್ಲ. ಈ ಪ್ರಕರಣವನ್ನು ರಾಜ್ಯದ ಪೊಲೀಸರೇ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆಂಬ ವಿಶ್ವಾಸ ಅವರದ್ದು!
‘ರಾಮಮಂದಿರ ದೇಣಿಗೆ ಕಳವು’ ಹೊರಗಿಟ್ಟಿದ್ದೇನು?
ಸಂಘಪರಿವಾರ ಹೇಳುತ್ತಿದ್ದ ನೈತಿಕತೆಗೆ ಸವಾಲಾಗಿರುವ ಪ್ರಕರಣವಾಗಿಯೂ ಇದು ಹೊಮ್ಮಿದೆ. ಪ್ರತಿಪಕ್ಷಗಳಷ್ಟೇ ಅಲ್ಲದೆ, ಭಕ್ತರಿಗೆ ಉತ್ತರ ಕೊಡಬೇಕಾಗಿದ್ದವರು ಬೆನ್ನು ತಿರುಗಿಸಿ ಓಡಿಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಜೂನ್ 25, 2026ರಂದು ಪೊಲೀಸರು ಎಫ್‌ಐಆರ್ ದಾಖಲಿಸಿ, ದೇಣಿಗೆ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾದ 8 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ಚಾಲಕ ‘ಟಿನ್ನು ಯಾದವ್’ ಸೇರಿದ್ದಾನೆ. ಇವನ ಬಳಿ ದೇಣಿಗೆ ಪೆಟ್ಟಿಗೆಯ ಕೀಲಿ ಕೈ ಇರುತ್ತಿತ್ತು ಎಂದು ಆರೋಪಿಸಲಾಗಿದೆ. ಲವ್ ಕುಶ್ ಮಿಶ್ರಾ, ಅನುಕಲ್ಪ್ ಮಿಶ್ರಾ, ಅವಿನಾಶ್ ಶುಕ್ಲಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ ಮತ್ತು ಸುಭಾಷ್ ಶ್ರೀವಾಸ್ತವ ಎಂಬವರು ಬಂಧನಕ್ಕೆ ಒಳಗಾಗಿದ್ದಾರೆ. ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ನಂಬಿಕೆ ದ್ರೋಹದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರಿಂದ ಸುಮಾರು 79.85 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ದೇಣಿಗೆ ಸಂಗ್ರಹ ಮತ್ತು ಅದರ ಲೆಕ್ಕಪತ್ರ ನಿರ್ವಹಣೆಯಲ್ಲಿನ ಲೋಪದೋಷಗಳ ಬಗ್ಗೆ ಎಸ್ಐಟಿ ತನಿಖೆ ಮುಂದುವರಿಸಿದೆ. ಈ ಪ್ರಕರಣದ ಬಳಿಕ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸದಸ್ಯ ಅನಿಲ್ ಮಿಶ್ರಾ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಆದರೆ ಇದು ಕೇವಲ 80 ಲಕ್ಷ ರೂಪಾಯಿಗಳ ಹಗರಣವಲ್ಲ. ಸಮಾಜವಾದಿ ಪಕ್ಷದ ರಾಮ್‌ಗೋಪಾಲ್ ಯಾದವ್, “ಇದು 20,000 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಭಾರಿ ಹಗರಣ” ಎಂದು ದೂರಿದ್ದಾರೆ. ದೇಣಿಗೆಯಾಗಿ ಬಂದ ಚಿನ್ನ, ಬೆಳ್ಳಿ, ವಜ್ರಗಳು ಮತ್ತು ನಗದಿನ ಸರಿಯಾದ ಲೆಕ್ಕಪತ್ರ ಇಲ್ಲದಿರುವುದೇ ಈ ಅಂದಾಜಿಗೆ ಕಾರಣವಾಗಿದೆ. ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು, “200 ಕೋಟಿ ರೂ.ಗಳ ಕಳ್ಳತನದ ಆರೋಪಗಳಿದ್ದರೂ, ಸರ್ಕಾರ ಕೇವಲ 80 ಲಕ್ಷ ರೂ.ಗಳನ್ನು ಮಾತ್ರ ವಶಪಡಿಸಿಕೊಂಡಿದೆ ಮತ್ತು ಮುಖ್ಯ ಆರೋಪಿಗಳನ್ನು ಬಂಧಿಸದೆ ಸಣ್ಣ ಸಿಬ್ಬಂದಿಗಳನ್ನು ಮಾತ್ರ ಬಲೆಗೆ ಬೀಳಿಸಿದೆ” ಎಂದು ಟೀಕಿಸಿದ್ದಾರೆ.
ರಾಮಮಂದಿರ ದೇಣಿಗೆ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರವು ಕೇವಲ ಎಂಟು ಮಂದಿಯನ್ನು ಬಂಧಿಸುವ ಮೂಲಕ, ಇದೊಂದು ಸಣ್ಣ ಅಕ್ರಮ ಎಂದು ಸೀಮಿತಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ, ಈ ಪ್ರಕರಣದ ಆಳವನ್ನು ಗಮನಿಸಿದರೆ, ಇದು ಕೇವಲ ಸಣ್ಣದೊಂದು ‘ಬಿಲ’ವಲ್ಲ, ಬದಲಾಗಿ ಒಂದು ಬೃಹತ್ ‘ಸುರಂಗ’ದ ಹಾದಿಯಂತೆ ಕಾಣುತ್ತಿದೆ. ಈ ಅಕ್ರಮದ ಜಾಲವು ಸರ್ಕಾರಿ ಕಚೇರಿಗಳು ಮತ್ತು ಪ್ರಭಾವಿ ಸಚಿವರ ನಿವಾಸಗಳವರೆಗೂ ಹಬ್ಬುತ್ತಿರುವುದನ್ನು ತನಿಖೆ ಸೂಚಿಸುತ್ತಿದೆ. ಈ ದ್ರೋಹದ ಕೆಲಸದಲ್ಲಿ ರಾಜಕೀಯ ನಾಯಕರು ಮತ್ತು ಧಾರ್ಮಿಕ ಮುಖಂಡರು ಸಮನಾಗಿ ಭಾಗಿಯಾಗಿರುವುದು ಸ್ಪಷ್ಟವಾಗುತ್ತಿದೆ.
ಸಾಂಸ್ಥಿಕ ರಚನೆಯ ದೋಷಗಳು
ಭಕ್ತರು ಕೊಟ್ಟ ದೇಣಿಗೆಯ ಕಳವು ಹಾಗೂ ದುರ್ಬಳಕೆ ಆರೋಪವನ್ನು ಕೇವಲ ಒಂದು ಬಿಡಿ ಘಟನೆಯಾಗಿ ನೋಡಲು ಸಾಧ್ಯವೂ ಇಲ್ಲ. ದಶಕಗಳ ರಾಜಕೀಯ ವಿಕಾಸ, ಸಾಂಸ್ಥಿಕ ಬದಲಾವಣೆ ಮತ್ತು ಪ್ರಸ್ತುತ ಆಡಳಿತದಲ್ಲಿ ವ್ಯಾಪಕವಾಗಿರುವ ವ್ಯವಸ್ಥಿತ ಹೊಣೆಗಾರಿಕೆಯ ಕೊರತೆಯ ಹಿನ್ನೆಲೆಯಲ್ಲಿಯೂ ಈ ಪ್ರಕರಣವನ್ನು ನೋಡಬೇಕಾಗುತ್ತದೆ.
2019ರ ನವೆಂಬರ್ ನಲ್ಲಿ ಸುಪ್ರೀಂಕೋರ್ಟ್ ಅಯೋಧ್ಯೆ ಪ್ರಕರಣದ ತೀರ್ಪು ನೀಡಿತು. ಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರವು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಸ್ಥಾಪಿಸಿತು. ಮಂದಿರದ ನಿರ್ಮಾಣ ಮತ್ತು ನಂತರದ ನಿರ್ವಹಣೆಯ ಜವಾಬ್ದಾರಿಯನ್ನು ಈ ಟ್ರಸ್ಟ್ ವಹಿಸಿಕೊಂಡಿತು. ಆರಂಭದಿಂದಲೂ, ಇದು ಯಾವುದೇ ಪ್ರಜಾಸತ್ತಾತ್ಮಕ ಮೇಲ್ವಿಚಾರಣೆಯಿಲ್ಲದ ಒಂದು ಅಧಿಕಾರಶಾಹಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಾ ಬಂದಿತು.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಕೇಂದ್ರ ಸರ್ಕಾರದ ನಾಮನಿರ್ದೇಶಿತರ ನಡುವೆ ಅಧಿಕಾರ ಹಂಚಿಕೆಯಾಗಿರುವಂತೆ ಈ ಟ್ರಸ್ಟ್ ರೂಪಿಸಲಾಯಿತು. ಧರ್ಮ ಮತ್ತು ಆಡಳಿತದ ನಡುವಿನ ವ್ಯತ್ಯಾಸವನ್ನು ಅಳಿಸಿಹಾಕುವುದರ ಜೊತೆಗೆ, ಅಪಾರದರ್ಶಕ ಆರ್ಥಿಕ ಅಕ್ರಮಗಳಿಗೆ ಟ್ರಸ್ಟ್ ದಾರಿ ಮಾಡಿಕೊಟ್ಟಿತು. ರಾಮ ಜನ್ಮಭೂಮಿ ಚಳವಳಿಯ ಸಂದರ್ಭದಲ್ಲಿ ತಳಮಟ್ಟದಲ್ಲಿ ಸೃಷ್ಟಿಯಾಗಿದ್ದ ಆಸ್ತಿಕರ ಒಕ್ಕೂಟಕ್ಕೆ ವ್ಯತಿರಿಕ್ತವಾಗಿ ಈ ಟ್ರಸ್ಟ್ ಬೆಳೆಯಿತು. ಮಂದಿರವನ್ನು ನಿಯಂತ್ರಿಸುವ ಈ ಸಂಘಟನಾತ್ಮಕ ಘಟಕದ ಸುತ್ತ ಮೊದಲಿನಿಂದಲೂ ತಕರಾರುಗಳು ಇದ್ದವು.
ಉನ್ನತ ರಾಜಕೀಯ ನಾಯಕರು ಮತ್ತು ಧಾರ್ಮಿಕ ಆಡಳಿತಗಾರರ ಗುಂಪು ಸಾಂಪ್ರದಾಯಿಕ ಗಡಿಗಳನ್ನು ಅಳಿಸಿ ಹಾಕಿದರು. ಹೀಗಾಗಿ ಒಂದು ಮಟ್ಟಿಗಿನ ಧಾರ್ಮಿಕ-ರಾಜಕೀಯ ನಂಟು ಸೃಷ್ಟಿಯಾಯಿತು. ದಶಕಗಳ ಕಾಲ ನಡೆದ ಚಳವಳಿಯ ಆಧ್ಯಾತ್ಮಿಕ ಆದರ್ಶಕ್ಕೆ ಬದಲಿಯಾಗಿ ರಿಯಲ್ ಎಸ್ಟೇಟ್ ಊಹಾಪೋಹಗಳು, ಹರಿದುಬಂದ ಬಂಡವಾಳದ ದೊಡ್ಡ ಮಟ್ಟದ ದುರ್ಬಳಕೆ ಮತ್ತು ಅವ್ಯವಹಾರಗಳು ಮುನ್ನೆಲೆಗೆ ಬಂದವು. ಈಗ ಆರೋಪಿಗಳಾಗಿರುವವರು ಸಣ್ಣ ಕುಳಗಳಷ್ಟೇ. ಆದರೆ ಇದರ ಹಿಂದೆ ದೊಡ್ಡ ಜಾಲವೇ ಹಬ್ಬಿದೆ.
ಚಳವಳಿಯಿಂದ ಹಗರಣದವರೆಗೆ..
1980ರ ದಶಕದ ಮಧ್ಯಭಾಗದಲ್ಲಿ ರಾಮಮಂದಿರ ಚಳವಳಿ ಪ್ರಾರಂಭವಾದಾಗ, ಆರ್‌ಎಸ್‌ಎಸ್ ಸೈದ್ಧಾಂತಿಕ ವೇದಿಕೆಯನ್ನು ಒದಗಿಸಿತು; ವಿಎಚ್‌ಪಿ ಹೋರಾಟದ ಮುಂಚೂಣಿಯಲ್ಲಿ ನಿಂತಿತು. 1984ರಲ್ಲಿ ಮಹಂತ್ ಅವೈದ್ಯನಾಥ್ ಅವರ ನೇತೃತ್ವದಲ್ಲಿ ‘ಶ್ರೀ ರಾಮ ಜನ್ಮಭೂಮಿ ಮುಕ್ತಿ ಯಜ್ಞ ಸಮಿತಿ’ಯನ್ನು ಸ್ಥಾಪಿಸಲಾಯಿತು. ಚಳವಳಿಗೆ ಜನರನ್ನು ಸೇರಿಸುವ ಮತ್ತು ಸಂಪನ್ಮೂಲಗಳನ್ನು ಸಂಗ್ರಹಿಸುವ ಕೆಲಸವನ್ನು ಈ ಸಮಿತಿಯೇ ಮಾಡಿತು.
ವಿಎಚ್‌ಪಿಯ ನಿಯಂತ್ರಣದಲ್ಲಿದ್ದ ಈ ಚಳವಳಿಯು, ಪ್ರಾದೇಶಿಕ ಪ್ರಚಾರಕರು, ಸಾಧುಗಳು ಮತ್ತು ಕರಸೇವಕರ ವಿಕೇಂದ್ರೀಕೃತ ಜಾಲವಾಗಿತ್ತು. ಹಿಂದುತ್ವ ಸಿದ್ಧಾಂತ, ಬೀದಿ ಹೋರಾಟಗಳು ಮತ್ತು ಸಾಮೂಹಿಕ ಚಳವಳಿಯ ಉತ್ಸಾಹ ಇದರೊಟ್ಟಿಗಿದ್ದವು. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಹೊಸ ಟ್ರಸ್ಟ್ ಸ್ಥಾಪನೆಯಾಗಬೇಕಾಯಿತು. 2020ರ ಆರಂಭದಲ್ಲಿ ಟ್ರಸ್ಟ್ ಸ್ಥಾಪನೆಯಾದ ನಂತರ, ಚಳವಳಿಯ ಮುಂಚೂಣಿಯಲ್ಲಿದ್ದ ಈ ಸಂಘಟನೆಗಳೆಲ್ಲವೂ ಅಪ್ರಸ್ತುತವಾದವು. ಮುಕ್ತಿ ಯಜ್ಞ ಸಮಿತಿಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು, ಆದರೂ ಆರ್‌ಎಸ್‌ಎಸ್ ರೀತಿಯಲ್ಲಿ ಇದು ‘ನೋಂದಾಯಿತ’ ಆಗದಿರುವ ಸಂಸ್ಥೆಯಾದ್ದರಿಂದ ಅದರ ವಿಸರ್ಜನೆಯನ್ನು ಅಧಿಕೃತವಾಗಿ ಘೋಷಿಸಲಿಲ್ಲ.
ಈ ಲೇಖನ ಓದಿದ್ದೀರಾ?: 20 ವರ್ಷ ಗೆಲ್ಲಿಸಿದವರನ್ನೇ ಬಾಂಗ್ಲಾದೇಶಿಗರು ಎಂದರಾ ಎಚ್‌ಡಿಕೆ?
‘ರಾಮ ಜನ್ಮಭೂಮಿ ನ್ಯಾಸ’ ಮಾತ್ರ ಚಳವಳಿಯ ಭಾಗವಾಗಿದ್ದ ಏಕೈಕ ನೋಂದಾಯಿತ ಸಂಸ್ಥೆಯಾಗಿತ್ತು. ಅದರ ಪಾತ್ರ ಭಿನ್ನವಾಗಿತ್ತು. ಕಾರ್ಯಕರ್ತರ ನೇತೃತ್ವದ ಅನೌಪಚಾರಿಕ ಸಮಿತಿಗಳಿಗಿಂತ ಭಿನ್ನವಾಗಿ, ನ್ಯಾಸವನ್ನು ಅಧಿಕೃತವಾಗಿ ಕಾನೂನುಬದ್ಧಗೊಳಿಸಲಾಗಿತ್ತು. ಭೂಮಿ ಸ್ವಾಧೀನ ಮತ್ತು ಮಂದಿರ ನಿರ್ಮಾಣಕ್ಕಾಗಿ ನ್ಯಾಸವನ್ನು ಸ್ಥಾಪಿಸಲಾಗಿತ್ತು. 1985ರ ನಂತರ ಅದು ಸಾಕಷ್ಟು ದೇಣಿಗೆ ಸಂಗ್ರಹಿಸಿತ್ತು.
1980 ಮತ್ತು 90ರ ದಶಕದಲ್ಲಿ ವಿವಾದಿತ ಸ್ಥಳದ ಸಮೀಪವಿರುವ ಹಲವು ದೊಡ್ಡ ಜಾಗಗಳನ್ನು ಅದು ಖರೀದಿಸಿತ್ತು. ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ‘ರಾಮ ಕಥಾ ಪಾರ್ಕ್’ಗಾಗಿ 42 ಎಕರೆ ಜಾಗವನ್ನು ಗುತ್ತಿಗೆಗೂ ನೀಡಿತ್ತು. ಆದರೆ, 1992ರ ಡಿಸೆಂಬರ್‌ನಲ್ಲಿ ಬಾಬರಿ ಮಸೀದಿ ಧ್ವಂಸವಾದ ನಂತರ, ಕೇಂದ್ರ ಸರ್ಕಾರವು ‘ಅಕ್ವಿಸಿಷನ್ ಆಫ್ ಸರ್ಟೈನ್ ಏರಿಯಾ ಅಟ್ ಅಯೋಧ್ಯೆ ಆಕ್ಟ್, 1993’ ಜಾರಿಗೆ ತಂದು, ನ್ಯಾಸದ ಒಡೆತನದ ಭೂಮಿಯನ್ನೂ ಒಳಗೊಂಡಂತೆ ಮಸೀದಿಯ ಸುತ್ತಮುತ್ತಲಿನ 67.7 ಎಕರೆ ಜಾಗವನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡಿತು. 2019ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಎಲ್ಲಾ ಭೂಮಿಯನ್ನು ಸರ್ಕಾರ ರಚಿಸಿದ ಹೊಸ ಟ್ರಸ್ಟ್‌ಗೆ ಹಸ್ತಾಂತರಿಸಿದ್ದರಿಂದ, ನ್ಯಾಸವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಕಳೆದುಕೊಂಡಿತು. ಅದರ ದೀರ್ಘಕಾಲದ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ ದಾಸ್ ನಾಯಕತ್ವವನ್ನು ಹೊಸ ತೀರ್ಥಕ್ಷೇತ್ರ ಟ್ರಸ್ಟ್‌ನ ನಾಯಕತ್ವದಲ್ಲಿ ವಿಲೀನಗೊಳಿಸಲಾಯಿತು.
ರಾಮ ಜನ್ಮಭೂಮಿ ಆಂದೋಲನದ ಮುಂಚೂಣಿಯಲ್ಲಿದ್ದವರು, ಯಾವುದೇ ಕೇಂದ್ರಿಕೃತ ಲೆಕ್ಕಪತ್ರ ಅಥವಾ ಪಾರದರ್ಶಕ ಆಡಿಟ್ ಇಲ್ಲದೆ ಕೋಟಿಗಟ್ಟಲೆ ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪಗಳು 1980ರ ದಶಕದಿಂದಲೂ ಇದ್ದವು. ಈ ಟೀಕೆಗಳ ನಡುವೆಯೂ ಈ ವಿಲೀನ ನಡೆಯಿತು. ಇದರ ಜೊತೆಗೆ ವಿಎಚ್‌ಪಿ ಮತ್ತು ಅದರ ಅಂಗಸಂಸ್ಥೆಗಳು ತಮ್ಮ ಚಾರಿಟಬಲ್ ಸ್ಥಾನಮಾನ, ತೆರಿಗೆ ವಿನಾಯಿತಿ ಸಂಬಂಧ ಪ್ರಶ್ನೆಗಳನ್ನು ಎದುರಿಸುತ್ತಿದ್ದವು. ವಿದೇಶಿ ದೇಣಿಗೆಗಳ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಾ ಇದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ.
ಹೊಸ ಟ್ರಸ್ಟ್ ಹೇಗಿತ್ತು?
ಹೊಸ ಟ್ರಸ್ಟ್ ಅನ್ನು ಒಂದು ಅಧಿಕಾರಶಾಹಿ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಇದು ಪ್ರಧಾನಿ ಕಚೇರಿಯೊಂದಿಗೆ ತೀವ್ರವಾಗಿ ಹೊಂದಿಕೊಂಡಿದ್ದಲ್ಲದೆ, ರಚನಾತ್ಮಕವಾಗಿ ಪಿಎಂ ಕಚೇರಿಯನ್ನು ಪ್ರತಿಬಿಂಬಿಸುತ್ತಿತ್ತು. ಈ ಟ್ರಸ್ಟ್‌ನ ರಚನೆಯಿಂದಾಗಿ, ಒಂದು ‘ಜನಾಂದೋಲನ’ವು ಸರ್ಕಾರ ಮತ್ತು ಸಂಘ ಪರಿವಾರದ ನಿಯಂತ್ರಣದ ಯೋಜನೆಯಾಗಿ ಬದಲಾಯಿತು. ವಿಎಚ್‌ಪಿಯ ಸಂಘಟನಾ ನಿಷ್ಠಾವಂತರನ್ನು ಅಪಾರ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರವಿರುವ ಹುದ್ದೆಗಳಿಗೆ ಏರಿಸಲಾಯಿತು. ಬೀದಿ ಮಟ್ಟದ ಸಂಘಟಕರಾಗಿದ್ದವರು, ಈಗ ಸಾವಿರಾರು ಕೋಟಿ ರೂಪಾಯಿಗಳ ಕಾರ್ಪೊರೇಟ್ ಆಸ್ತಿಯನ್ನು ನಿಭಾಯಿಸುವ ಮಟ್ಟಕ್ಕೆ ಹೋದರು. ಈ ಹಿಂದೆ ಎಂದೂ ಅನುಭವವಿಲ್ಲದ ಮತ್ತು ತರಬೇತಿ ಪಡೆಯದ ಕೆಲಸಗಳನ್ನು ಇವರಿಗೆ ನೀಡಲಾಯಿತು.
ವಿಎಚ್‌ಪಿ-ಮುಕ್ತಿ ಯಜ್ಞ ಸಮಿತಿಯ ನೇತೃತ್ವದ ಕಾರ್ಯಕ್ರಮಗಳು (ಅಂದರೆ ಶಿಲಾ ಪೂಜೆ, ಯಾತ್ರೆಗಳು, 1989ರ ಶಿಲಾನ್ಯಾಸ, 1990 ಮತ್ತು 1992ರ ಕರಸೇವೆ) ಕೇವಲ ಒಂದು ‘ಉದ್ದೇಶ’ದ ಪರವಾಗಿ ಸಾಮೂಹಿಕ ಭಾವನೆಯನ್ನಷ್ಟೇ ಸೃಷ್ಟಿಸಿರಲಿಲ್ಲ, ಬದಲಾಗಿ ಒಂದು ಪವಿತ್ರ ಸ್ಥಳದ ಮೇಲೆ ಮಾಲೀಕತ್ವದ ಭಾವನೆಯನ್ನು ಮೂಡಿಸಿಬಿಟ್ಟಿದ್ದವು. ಆದರೆ ಜನರ ನಂಬಿಕೆಗಳನ್ನು ಉಳಿಸಿಕೊಳ್ಳದೆ ಮೋಸ ಮಾಡಿರುವುದು ಅಕ್ಷಮ್ಯ ಅಪರಾಧವಾಗಿ ಹೊಮ್ಮಿದೆ. ಸಾರ್ವಜನಿಕ ಅಸಮಾಧಾನ ಎಷ್ಟಿದೆಯೆಂದರೆ, ಈ ಹಿಂದೆ ವಿಎಚ್‌ಪಿ ನೇತೃತ್ವದ ಸಂಘಟನೆಗಳ ವಿರುದ್ಧದ ಯಾವುದೇ ಆರೋಪವನ್ನು ‘ಧಾರ್ಮಿಕ ನಂಬಿಕೆಗೆ ಎದುರಾದ ಪ್ರಶ್ನೆ’ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈ ಬಾರಿ, ಟೀಕಾಕಾರರನ್ನು ‘ಹಿಂದೂ ವಿರೋಧಿ’ (ಅಥವಾ ದೇಶವಿರೋಧಿ) ಎಂದು ಕರೆಯುವ ನೈತಿಕತೆಯನ್ನು ಇವರು ಕಳೆದುಕೊಂಡಿದ್ದಾರೆ.
ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದ್ದ ಧಾರ್ಮಿಕ ಮತ್ತು ಭಾವನಾತ್ಮಕ ಗುರಾಣಿಗಳು ಹಿಂದಿನಂತೆ ಈಗ ಕೆಲಸ ಮಾಡುತ್ತಿಲ್ಲ ಎಂದು ಸರ್ಕಾರ ಮತ್ತು ಟ್ರಸ್ಟ್ ಅರಿತುಕೊಂಡಿದೆ. ಬಿಜೆಪಿ ಮತ್ತು ಸಂಘಪರಿವಾರ ಬೋಧಿಸುತ್ತಿದ್ದ ನೈತಿಕತೆಯು ಈಗ ಅವುಗಳಿಗೆ ತಿರುಗುಬಾಣವಾಗಿ ಬದಲಾಗಿದೆ. ಜನರು ನಂಬಿಕೆ ದ್ರೋಹದ ವಿರುದ್ಧ ಸಿಡಿದೆದ್ದಿದ್ದಾರೆ. ಆಧ್ಯಾತ್ಮಿಕ ಸ್ವರೂಪಿ ರಾಮನನ್ನು ರಾಜಕೀಯ ಸ್ವರೂಪಿಯನ್ನಾಗಿ ಬದಲಿಸಿದ್ದು ಇದೇ ಸಂಘಪರಿವಾರ. ಈಗ ರಾಮಮಂದಿರದ ‘ಸ್ಥಾಪನೆ’ಯ ಉನ್ನತ ಮಟ್ಟದಲ್ಲಿರುವವರು “ದೇಣಿಗೆ ಕಳ್ಳತನ” ನಡೆಸಿದ್ದಾರೆ ಎಂಬ ವಿಷಯವು ಸಾಮಾನ್ಯ ಭಕ್ತರ ಭಾವನಾತ್ಮಕ ಸಂಬಂಧಕ್ಕೆ ಏಟು ಕೊಟ್ಟಿದೆ. ಸ್ವಾತಂತ್ರ್ಯಾನಂತರದ ಭಾರತದ ಅತ್ಯಂತ ಯಶಸ್ವಿ ಜನಾಂದೋಲನವನ್ನು ಹುಟ್ಟುಹಾಕಿದ ಮೂಲ ಬೆಂಬಲಿಗರನ್ನೇ ಕಳೆದುಕೊಳ್ಳುವ ಅಪಾಯವನ್ನು ಬಿಜೆಪಿ ಎದುರಿಸುತ್ತಿದೆ. ಆರ್ಥಿಕ ಹಗರಣಗಳಲ್ಲಿ ಮುಳುಗಿರುವ ಯಾವುದೇ ಕಾರ್ಪೊರೇಟ್ ಸಂಸ್ಥೆಯಂತೆ ಈ ಟ್ರಸ್ಟ್ ಜನರಿಗೆ ಕಾಣಲಾರಂಭಿಸಿದರೆ, ಬಿಜೆಪಿ ಚುನಾವಣೆಯಲ್ಲೂ ಸೋಲು ಅನುಭವಿಸಬಹುದು.
ಸಂಘ ಪರಿವಾರ ಮತ್ತು ಕೇಂದ್ರ ಸರ್ಕಾರವು ಈ ಸಂಕಷ್ಟದಲ್ಲಿರಲು ಕಾರಣವೇನು? ಬೀದಿ ಹೋರಾಟಗಳ ಸಂಘಟನಾ ನಿಷ್ಠಾವಂತರನ್ನು ಯಾವುದೇ ಪರಿಶೀಲನೆ ಅಥವಾ ವೃತ್ತಿಪರ ಪರಿಣತಿಯಿಲ್ಲದೆ ಕಾರ್ಪೊರೇಟ್ ಮಟ್ಟದ ಆಡಳಿತಾತ್ಮಕ ಸಾಮ್ರಾಜ್ಯಗಳ ಮುಖ್ಯಸ್ಥರನ್ನಾಗಿ ಮಾಡಿದ್ದೇ ದೊಡ್ಡ ಪ್ರಮಾದವಾಗಿ ಪರಿಣಮಿಸಿದೆ. ನ್ಯಾಯಯುತ ತನಿಖೆ ನಡೆದರೆ, ಈ ‘ಹಗರಣದ ಸುಳಿವು’ ಎಲ್ಲಿಗೆ ಹೋಗುತ್ತದೆ ಎಂದು ಹೇಳಲಾಗದು. ಇದು ಕೇವಲ ಒಂದು ತಾಂತ್ರಿಕ ತಪ್ಪು ಮಾತ್ರವಲ್ಲ, ಒಂದು ದುಷ್ಟ, ಸುಸಜ್ಜಿತ ಲೂಟಿಯೆಂದೂ ಸಾಬೀತಾಗಬಹುದು.
“ಸಂಘ ಪರಿವಾರದ ಉನ್ನತ ಮಟ್ಟದಲ್ಲಿರುವ ಪ್ರಚಾರಕರು ನೈತಿಕ ಶುದ್ಧತೆಯನ್ನು ಹೊಂದಿದ್ದಾರೆ, ಅದಕ್ಕೆ ಯಾವುದೇ ಔಪಚಾರಿಕ ಮೇಲ್ವಿಚಾರಣೆಯ ಅಗತ್ಯವಿಲ್ಲ” ಎಂಬ ಪ್ರತಿಪಾದನೆಗಳನ್ನು ಈ ಪ್ರಕರಣ ಸುಳ್ಳು ಮಾಡಿದೆ. ಖಂಡಿತವಾಗಿಯೂ, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಪ್ರಚಾರವು ಈ ಹಗರಣದ ಸುತ್ತವೇ ಸುತ್ತುತ್ತದೆ. ಬಿಜೆಪಿಯನ್ನು ಪ್ರಶ್ನಿಸಬೇಕಾದದ್ದು ನ್ಯಾಯಯುತ ನಡೆಯೂ ಆಗಿದೆ.
ಆರ್‌ಎಸ್‌ಎಸ್ ತನ್ನ ಶತಮಾನೋತ್ಸವವನ್ನು ಹೊಸ ರಚನೆ ಮತ್ತು ಭವಿಷ್ಯದ ಯೋಜನೆಗಳೊಂದಿಗೆ ಆಚರಿಸಲು ಉದ್ದೇಶಿಸಿತ್ತು. ದುರಾದೃಷ್ಟವಶಾತ್ ಗಾಂಧಿ ಹತ್ಯೆಯ ಸಂದರ್ಭದಲ್ಲಿ ಆರ್‌ಎಸ್‌ಎಸ್ ಎದುರಿಸಿದ ಬಿಕ್ಕಟ್ಟಿಗೆ ಸಮನಾದ ಸವಾಲನ್ನು ಈ ಹೊತ್ತು ಆರ್‌ಎಸ್‌ಎಸ್ ಎದುರಿಸಬೇಕಾಗಿ ಬಂದಿದೆ.
ಮಾಹಿತಿ ಕೃಪೆ: ದಿ ವೈರ್



