ಬಿಹಾರದ ನಳಂದ ಜಿಲ್ಲೆಯ ಶೀತಲಾ ಮಾತಾ ದೇವಾಲಯದಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಉಂಟಾದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಂದಿ ಮಹಿಳೆಯರು ಮೃತಪಟ್ಟು, ಹಲವರು ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಪೂಜೆಗಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯದಲ್ಲಿ ಜಮಾಯಿಸಿದ ಪರಿಣಾಮ ವಿಪರೀತ ನೂಕುನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು, ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಕೈಗೊಂಡರು. ದೇವಾಲಯದ ಆವರಣದೊಳಗೆ ಅಪಾರ ಸಂಖ್ಯೆಯ ಭಕ್ತರು ಸೇರಿರುವ ದೃಶ್ಯಗಳು ವಿಡಿಯೊಗಳಲ್ಲಿ ಕಂಡುಬಂದಿವೆ.
ಈ ದುರಂತದ ಕುರಿತು ಸಮಗ್ರ ತನಿಖೆ ನಡೆಸುವಂತೆ ಬಿಹಾರ ಸರ್ಕಾರವು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಲು ಮತ್ತು ದೇವಾಲಯದಲ್ಲಿ ಆದಷ್ಟು ಬೇಗ ಸಹಜ ಸ್ಥಿತಿ ಮರುಸ್ಥಾಪಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಇದೊಂದು ‘ಅತ್ಯಂತ ಹೃದಯವಿದ್ರಾವಕ’ ಘಟನೆ ಎಂದು ಹೇಳಿದ್ದಾರೆ.
“ನಳಂದಾದ ಮಾತಾ ಶೀತಲಾ ದೇವಾಲಯದಲ್ಲಿ ನಡೆದ ಕಾಲ್ತುಳಿತ ದುರಂತವು ಅತ್ಯಂತ ಹೃದಯವಿದ್ರಾವಕವಾಗಿದೆ. ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಹಾಗೂ ಗಾಯಗೊಂಡ ಭಕ್ತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಸಂತ್ರಸ್ತ ಕುಟುಂಬಗಳಿಗೆ ಸರ್ಕಾರವು ಸಾಧ್ಯವಿರುವ ಎಲ್ಲ ನೆರವು ಮತ್ತು ಪರಿಹಾರವನ್ನು ಒದಗಿಸುತ್ತಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? IPL ಅಂಗಳದಲ್ಲಿ ‘ಆರ್‌ಸಿಬಿ’ ಅತಿದೊಡ್ಡ ಬ್ರ್ಯಾಂಡ್ ಆಗಿ ಬೆಳೆದದ್ದೇ ಒಂದು ವಿಸ್ಮಯ
ರಾಷ್ಟ್ರಪತಿಗಳ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದ ಅಧಿಕಾರಿಗಳು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬಿಹಾರದ ನಳಂದಾದಲ್ಲಿದ್ದು, ದುರಂತ ನಡೆದ ಶೀತಲಾ ಮಾತಾ ದೇವಾಲಯದಿಂದ ಕೂಗಳತೆ ದೂರದಲ್ಲಿರುವ ಐತಿಹಾಸಿಕ ನಳಂದಾ ವಿಶ್ವವಿದ್ಯಾಲಯದ ಪಳೆಯುಳಿಕೆಗಳ ವೀಕ್ಷಣೆಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ, ದುರಂತ ಸಂಭವಿಸಿದ ವೇಳೆ ನಳಂದಾದ ಹಿರಿಯ ಆಡಳಿತಾಧಿಕಾರಿಗಳು ರಾಷ್ಟ್ರಪತಿಗಳ ಭೇಟಿಯ ಸಿದ್ಧತೆಯಲ್ಲಿ ನಿರತರಾಗಿದ್ದರು ಎನ್ನಲಾಗಿದೆ.
ಕಳೆದ ವರ್ಷ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಏಕಾದಶಿಯಂದು ಉಂಟಾದ ನೂಕುನುಗ್ಗಲು ಹಾಗೂ ಕಾಲ್ತುಳಿತದಲ್ಲಿ 9 ಭಕ್ತರು ಮೃತಪಟ್ಟು, 13 ಮಂದಿ ಗಾಯಗೊಂಡಿದ್ದರು.




