ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
”ಮಲೆನಾಡು ಸ್ವರ್ಗದ ಬಾಗಿಲು” ಎನ್ನುವ ಮಾತಿದೆ. ಹೌದು ಅದು ಸ್ವರ್ಗವೇ ಸರಿ. ಪಶ್ಚಿಮಘಟ್ಟದ ಕಾಡುಗಳು, ಹೊಳೆ-ತೊರೆಗಳು, ಕಣಿವೆ ಇಳಿಜಾರುಗಳು ಜೊತೆಗೆ ಪೂರಕ ಸೌಂದರ್ಯವೆಂಬಂತೆ ಕಾಫಿ ತೋಟಗಳಿವೆ. ಸ್ವರ್ಗವನ್ನು ಸ್ವರ್ಗವಾಗಿಯೇ ಉಳಿಸಿಕೊಳ್ಳಬೇಕೆಂದರೆ ಅದರ ಹಿಂದಿನ ಪರಿಶ್ರಮ ಬಹಳ ದೊಡ್ಡದಿದೆ, ಅದರಲ್ಲೂ ಮಲೆನಾಡಿನ ಮಹಿಳೆಯರ ಪಾತ್ರ ಬಹಳ ಹಿರಿದಾಗಿದೆ. ಹಾಸನ ಜಿಲ್ಲೆಯ ಪಶ್ಚಿಮ ಘಟ್ಟಗಳು ಕಾಫಿ ಬೆಳೆಗೆ ಅಗತ್ಯ ತಂಪಾದ ಹವಾಮಾನ, ಸಾವಯವ ಅಂಶ, ಮಳೆ ಮತ್ತು ಫಲವತ್ತಾದ ಭೂಮಿಯನ್ನು ಹೊಂದಿದೆ. ಜಿಲ್ಲೆಯಲ್ಲಿ ಕಾಫಿ ಬೆಳೆ ತನ್ನದೇ ಆದ ಮಹತ್ವ ಪಡೆದಿದೆ. ಜಿಲ್ಲೆಯ ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲೂಕುಗಳು ಕಾಫಿ ಬೆಳೆಯ ತಾಣವಾಗಿವೆ. ಇದರಲ್ಲಿ ಸಣ್ಣ ಬೆಳೆಗಾರರು, ದೊಡ್ಡ ಬೆಳೆಗಾರರು, ಚಿಕ್ಕ ಪುಟ್ಟ ತೋಟಗಳಲ್ಲಿ ಕೆಲಸ ಮಾಡುವವರು, ಕಾರ್ಮಿಕ ವರ್ಗದವರು, ಕಾಫಿ ಉದ್ಯಮಿಗಳು ಇವರೆಲ್ಲರ ದುಡಿಮೆಯಲ್ಲಿ ಹೆಚ್ಚಿನ ಸಂಖ್ಯೆ ಮತ್ತು ಶ್ರಮ ಮಹಿಳೆಯರದ್ದೆ ಆಗಿರುತ್ತದೆ. ಕಾಫಿ ಉದ್ಯಮ ಹೊಸ ದಿಕ್ಕಿನಲ್ಲಿ ಸಾಗುತ್ತಿರುವಾಗಲೇ ಜಿಲ್ಲೆಯ ಮಹಿಳೆಯರು ಕಾಫಿ ಬ್ರಾಂಡ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಮಾದರಿ ಪ್ರಯೋಗಗಳ ಮೂಲಕ ಹೆಸರಾಗಿದ್ದಾರೆ.
ನವ್ಯ ಕಾರ್ಗೋಡ್‌ರವರು ಮೂಲತಃ ಕೃಷಿ ಕುಟುಂಬದವರು. ಅಜ್ಜಿ ಸುಶೀಲಮ್ಮನವರ ಗಟ್ಟಿತನ, ತೋಟ ಮನೆಯ ಜವಾಬ್ದಾರಿ, ಕೃಷಿಯ ಜೊತೆಗೆ ಹೈನುಗಾರಿಕೆ, ರೇಷ್ಮೆ ಸಾಕಾಣಿಕೆ, ಎರೆಹುಳು ಗೊಬ್ಬರ ತಯಾರಿಕೆ, ಇತರೆ ಉಪಕಸುಬುಗಳಿಂದ ಕುಟುಂಬ ನಿರ್ವಹಿಸುವ ರೀತಿಗೆ ಬಾಲ್ಯದಲ್ಲಿಯೇ ಪ್ರಭಾವಕ್ಕೆ ಒಳಗಾಗಿದ್ದರು. ತಂದೆ ಸುರೇಂದ್ರರವರು ನೈಸರ್ಗಿಕ ಕೃಷಿಕರಾಗಿದ್ದರು. ಅವರ ಕಾಲಾನಂತರ ಪಿತ್ರಾರ್ಜಿತವಾಗಿ ಬಂದ 20 ಎಕರೆ ತೋಟವನ್ನು ತಮ್ಮ ತಾಯಿ ರಾಜೇಶ್ವರಿಯವರ ಆಶಯದಂತೆ ಅಭಿವೃದ್ಧಿಪಡಿಸಬೇಕೆಂದು ಸಂಕಲ್ಪ ತೊಟ್ಟಾಗ ಅನೇಕರು ”ಚೆನ್ನಾಗಿ ಓದಿಕೊಂಡಿದ್ದಿಯಾ ಯಾವುದಾದರೂ ಒಳ್ಳೆ ನೌಕರಿ ಹಿಡಿಯಬಾರದಾ..? ಬೇಸಾಯ ಮನೆ ಮಂದಿ ಎಲ್ಲಾ ಸಾಯ ಎನ್ನುವಂತೆ ಗದ್ದೆ-ತೋಟದಿಂದ ಏನು ಸಿಗುತ್ತೆ” ಎಂದು ಮೊದಲಿಸಿದವರೇ ಹೆಚ್ಚು. ಎಂಬಿಎ ಫೈನಾನ್ಸ್ ಪದವೀಧರೆಯಾದ ನವ್ಯರವರಿಗೆ ಅನೇಕ ಕಂಪನಿಗಳಿಂದ ಉದ್ಯೋಗಾವಕಾಶ ಒದಗಿ ಬಂದಿತ್ತು. ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡುವ ಬದಲು ನಾನೇ ನಾಲ್ಕಾರು ಜನರಿಗೆ ಉದ್ಯೋಗ ಒದಗಿಸಬೇಕು ಎಂದು ಗಟ್ಟಿ ನಿರ್ಧಾರ ಮಾಡಿದರು. ಇವರಿಗೆ ಬೆನ್ನೆಲುಬಾಗಿ ನಿಂತವರು ತಾಯಿ ರಾಜೇಶ್ವರಿ. ಇವರ ಮಾರ್ಗದರ್ಶನ ಸಹಕಾರದೊಂದಿಗೆ ನೈಸರ್ಗಿಕ ಕೃಷಿಯತ್ತ ಹೆಜ್ಜೆ ಇಟ್ಟರು.
ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ.
ಆಲೂರು ತಾಲೂಕಿನ ಮಗ್ಗೆ ಗ್ರಾಮದಲ್ಲಿ, ನವ್ಯ ಕಾರ್ಗೋಡ್‌ರವರ ‘ಜೀವಂತಿಕ ನ್ಯಾಚುರಲ್ ಫಾರಂ’ನಲ್ಲಿ ಅರೇಬಿಕ ರೋಬೋಸ್ಟಾ ಕಾಫಿ ಗಿಡಗಳು ಜೀವಂತಿಕೆಯಿಂದ ನಳನಳಿಸುತ್ತಿವೆ. ಜೀವನದ ಪಾಠ ಹೇಳುತ್ತಿವೆ. ತಾತನ ಕಾಲದಿಂದಲೂ ತೋಟದಲ್ಲಿಯೇ ಇದ್ದ ಕೆರೆಯ ನೀರಿನ ಬಳಕೆಯಿಂದ, ನೈಸರ್ಗಿಕ ಗೊಬ್ಬರ, ನೈಸರ್ಗಿಕ ಕಳೆನಾಶಕ, ನೈಸರ್ಗಿಕ ಕೀಟನಾಶಕ ಹೀಗೆ ನೈಸರ್ಗಿಕವಾಗಿ ತೋಟವನ್ನು ಸಮೃದ್ಧಗೊಳಿಸಲಾಗಿದೆ. ಕಾಫಿ ಮಾತ್ರವಲ್ಲದೆ ತೋಟದಲ್ಲಿ ಮೆಣಸು, ಏಲಕ್ಕಿ, ಅಡಿಕೆ, ಬಾಳೆ, ವಿವಿಧ ಬಗೆಯ ಹಣ್ಣಿನ ಗಿಡಗಳು ಇವೆ. ಪ್ರತಿದಿನ ತೋಟದಲ್ಲಿ ಮೂರರಿಂದ ನಾಲ್ಕು ಮಹಿಳೆಯರು ಕೆಲಸ ಮಾಡುತ್ತಾರೆ. ಚಿಗುರು ಕಸಿ, ಹಣ್ಣು ಕೊಯ್ಲು… ಇಂತಹ ಋತುಮಾನದಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಜಾಸ್ತಿ ಇರುತ್ತದೆ. ಬೇರೆ ಬೇರೆ ಭಾಗದಿಂದ ತೋಟ ವೀಕ್ಷಣೆಗೆ ಬಂದವರಿಗೆ ವಿದ್ಯಾರ್ಥಿಗಳಿಗೆ ನವ್ಯ ಮಾಹಿತಿ ನೀಡುತ್ತಿದ್ದಾರೆ. ಅಜ್ಜಿಯ ಪ್ರೇರಣೆ ತಾಯಿಯ ಮಾರ್ಗದರ್ಶನ ಅಲ್ಲದೆ ಇವರ ಸುತ್ತಲೂ ಇರುವ ಕಾರ್ಮಿಕ ವರ್ಗ ಕೂಡ ಮಹಿಳೆಯರೇ. ಅವರಲ್ಲಿಯೂ ಹೊಸ ಆಲೋಚನೆಗಳಿಗೆ ಹೊಸ ಚಿಂತನೆಗಳಿಗೆ ದಾರಿ ಮಾಡಿ ಕೊಟ್ಟಿದ್ದಾರೆ.

ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸದೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಕಷ್ಟಪಟ್ಟು ಬೆಳೆದ ಕಾಫಿ ಮತ್ತು ಕಾಫಿ ಉತ್ಪನ್ನಗಳನ್ನು ಯಾವುದೇ ದಳ್ಳಾಳಿಗೆ ನೀಡುವ ಬದಲು ನಮ್ಮದೇ ಸ್ವಂತ ಬ್ರಾಂಡ್‌ನಲ್ಲಿ ಗ್ರಾಹಕರಿಗೆ ತಲುಪಿಸಬೇಕು ಎನ್ನುವ ಮಹಾದಾಸೆಯಂತೆ ನವ್ಯ ಮತ್ತು ಅವರ ತಾಯಿ ರಾಜೇಶ್ವರಿಯವರು ಕಾಫಿಬೆಳೆಯನ್ನು ಮೌಲ್ಯವರ್ಧನೆ ಮಾಡಿ ಗ್ರಾಹಕರಿಗೆ ತಲುಪಿಸಬೇಕೆಂದು ತಮ್ಮ ಊರಿನ ಹೆಸರಿನಲ್ಲಿ ‘ಕಾರ್ಗೋಡ್ಸ್ ವೈಲ್ಡ್ ಫಾರೆಸ್ಟ್’ ಎನ್ನುವ ಬ್ರಾಂಡ್ ಮೂಲಕ ಕಳೆದ ನಾಲ್ಕು ವರ್ಷದಿಂದ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡಿದ್ದಾರೆ. ನವ್ಯ ಎಂಬಿಎ ಫೈನಾನ್ಸ್ ಆದ್ದರಿಂದ ಹಣಕಾಸು ಮತ್ತು ವ್ಯವಹಾರ ಜ್ಞಾನ ಚೆನ್ನಾಗಿಯೇ ಇದೆ. ತಮ್ಮದೇ ಆದ ವೆಬ್‌ಸೈಟ್ ಹೊಂದಿದ್ದಾರೆ. ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಪ್ರಚಾರ ಕೂಡ ಫೇಸ್ಬುಕ್, ಇನ್ಸ್ಟಾಗ್ರಾಮ್‌ನಲ್ಲಿ ನಡೆಯುತ್ತದೆ. ವೆಬ್‌ಸೈಟ್, ವಾಟ್ಸಾಪ್‌ನಲ್ಲಿ ಆರ್ಡರ್ ಮಾಡಿದರೆ, ಗ್ರಾಹಕರಿಗೆ ಶೀಘ್ರ ತಲುಪುವಂತೆ ಕೊರಿಯರ್ ಮಾಡಲಾಗುತ್ತದೆ. ವರ್ಷಕ್ಕೆ ಸುಮಾರು 600 ಕೆಜಿ ಮಾರಾಟವಾಗುತ್ತದೆ. ಆದಾಯ ಚೆನ್ನಾಗಿಯೇ ಇದೆ. ತಮ್ಮದೇ ಸ್ವಂತ ಕಾಫಿ ಆದ್ದರಿಂದ ಬಂಡವಾಳ ಹೆಚ್ಚೇನಿಲ್ಲ. ರೋಸ್ಟಿಂಗ್ ಹೊರಗಡೆ ಮಾಡಲಾಗುತ್ತದೆ. ಪ್ಯಾಕಿಂಗ್ ಎಲ್ಲಾ ಕುಟುಂಬದೊಂದಿಗೆ ಮನೆಯಲ್ಲಿಯೇ ಆಗುತ್ತದೆ. ಇದಕ್ಕೆ ಅವರ ಪತಿ ಸಂತೋಷ್‌ರವರ ಪ್ರೋತ್ಸಾಹ ಮತ್ತು ಸಹಕಾರವಿದೆ. ಮಕ್ಕಳು ಸಾನ್ವಿ ಮತ್ತು ಸಮೃದ್ಧಿ, ತಾಯಿ ರಾಜೇಶ್ವರಿ ಸದಾ ಜೊತೆಗಿರುತ್ತಾರೆ ಎಂದು ನವ್ಯ ತಿಳಿಸುತ್ತಾರೆ.
ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
ನೈಸರ್ಗಿಕವಾದ ರುಚಿಯಾದ ಈ ಬ್ರಾಂಡ್ ಕಾಫಿಪುಡಿಗೆ ರಾಜ್ಯ ಮಾತ್ರವಲ್ಲ, ದೇಶದ ನಾನಾ ಭಾಗಗಳಿಂದ ಸಾಕಷ್ಟು ಬೇಡಿಕೆ ಇದೆ. ಉದ್ಯಮದಲ್ಲೂ ಹೆಸರು ಮಾಡಬಹುದೆನ್ನುವುದನ್ನು, ನೈಸರ್ಗಿಕ ಕಾಫಿ ಬೆಳೆಗಾರರಾಗಿ ಸಾಧಿಸಬಹುದೆನ್ನುವುದನ್ನು ನವ್ಯ ಮತ್ತು ತಾಯಿ ರಾಜೇಶ್ವರಿಯವರು ತೋರಿಸಿದ್ದಾರೆ. ಮುಂದಿನ ಪೀಳಿಗೆಗೆ ಪ್ರಕೃತಿಯೊಂದಿಗೆ ಬೆರೆಯುವ ಅವಕಾಶವನ್ನು ಕಲ್ಪಿಸಬೇಕು, ನೈಸರ್ಗಿಕ ಕೃಷಿ ಮುಂದುವರಿಯಬೇಕು ಎನ್ನುವುದು ಇವರ ಮಹಾದಾಸೆ. ಜಿಲ್ಲೆಗೆ ‘ಕಾರ್ಗೋಡ್ಸ್ ವೈಲ್ಡ್ ಫಾರೆಸ್ಟ್’ ಎನ್ನುವ ಉತ್ತಮ ಕಾಫಿ ಬ್ರಾಂಡ್ ಕೊಡುಗೆಯಾಗಿ ನೀಡಿರುವ, ನೈಸರ್ಗಿಕ ಕಾಫಿ ಬೆಳೆಗಾರರಾದ ನವ್ಯ ಕಾರ್ಗೋಡ್ ಹಾಗೂ ಅವರ ತಾಯಿ ರಾಜೇಶ್ವರಿ ಕೆಲಸ ಮೆಚ್ಚುವಂಥದ್ದು.
ಹಾಗೇ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಾ ಕಾರ್ಮಿಕ ಮಹಿಳೆಯರನ್ನೆಲ್ಲ ಒಗ್ಗೂಡಿಸಿ ರಂಗ ತರಬೇತಿ ನೀಡಿ ನಟಿಯರನ್ನಾಗಿಸಿದ ಕೀರ್ತಿ ರಾಧೆ ರಕ್ಷಿದಿಯವರಿಗೆ ಸಲ್ಲುತ್ತದೆ. ರಂಗಕರ್ಮಿ ಮತ್ತು ಲೇಖಕರಾದ ಪ್ರಸಾದ್ ರಕ್ಷಿದಿಯವರ ಪತ್ನಿ ಶ್ರೀಮತಿ ರಾಧೆ ರಕ್ಷಿದಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಾ ಬಂದಿರುವವರು. ಪ್ರಸಾದ್ ರಕ್ಷಿದಿಯವರಿಗೆ ಏನೆಲ್ಲಾ ಪ್ರಶಸ್ತಿ ಸನ್ಮಾನಗಳು ಲಭ್ಯವಾಗಿವೆಯೋ ಅದರ ಬಹು ಪಾಲು ಶ್ರೇಯಸ್ಸು ರಾಧೆ ಅವರಿಗೆ ಸಲ್ಲುತ್ತದೆ. ಜಿಲ್ಲೆಯ ಮಲೆನಾಡಿನ ರಕ್ಷಿದಿ ಎನ್ನುವ ಪುಟ್ಟ ಗ್ರಾಮ, ನಾಡಿನಾದ್ಯಂತ ಹೆಸರು ಮಾಡಿದೆ ಎಂದರೆ ರಂಗ ಚಟುವಟಿಕೆಗಳ ಮೂಲಕ. ಬೆಳ್ಳೇಕೆರೆ ಹಳ್ಳಿ ಥಿಯೇಟರ್‌ನಲ್ಲಿ ನಡೆವ ನಾಟಕ ಪ್ರದರ್ಶನಗಳು ರಂಗ ತರಬೇತಿಗಳು, ನಾಟಕ ತಾಲೀಮುಗಳಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡುವುದರಿಂದ ಹಿಡಿದು ಬರುವ ಅತಿಥಿಗಳಿಗೆ, ತರಬೇತುದಾರರಿಗೆ, ನಟರಿಗೆ, ನಾಟಕಕಾರರಿಗೆ ಊಟೋಪಚಾರ ವಾಸ್ತವ್ಯ ಎಲ್ಲವೂ ರಾಧೆಯವರ ಜವಾಬ್ದಾರಿ. ಸ್ವತಃ ಕಾಫಿ ಬೆಳೆಗಾರರು ಆಗಿರುವ ರಾಧೆಯವರು ತಾವೂ ಕೆಲಸ ಮಾಡುತ್ತಾ ಕೆಲಸಗಾರರನ್ನು ಸಂಘಟಿಸುತ್ತಾ ಅವರ ಜೀವನದ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ಕೆಲಸವೆಲ್ಲ ಮುಗಿದ ಮೇಲೆ ಸಂಜೆ ವೇಳೆ ಎಲ್ಲ ಮಹಿಳೆಯರನ್ನು ಒಂದು ಕಡೆ ಸೇರಿಸಿ ಅವರಿಗೆ ಅಕ್ಷರ ಮತ್ತು ಅಭಿನಯ ಹೇಳಿಕೊಡುತ್ತಾ ತಾವೂ ರಂಗದ ಮೇಲೆ ಅಭಿನಯಿಸುತ್ತಿದ್ದಾರೆ. ಇವರ ಗರಡಿಯಲ್ಲಿ ಬೆಳೆದ ರತ್ನ ಸಕಲೇಶಪುರ, ನಟಿಯಾಗಿ, ರಂಗ ನಿರ್ದೇಶಕಿಯಾಗಿ, ಹಾಡುಗಾರ್ತಿಯಾಗಿ ಹೆಸರು ಮಾಡಿದ್ದಾರೆ. ಬ್ಲಾಕ್ಬಸ್ಟರ್ ‘ಕಾಟೇರ’ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಕೂಡ ಲಭಿಸಿದೆ. ಮತ್ತೊಬ್ಬ ಹೆಸರಾಂತ ರಂಗ ನಿರ್ದೇಶಕಿ, ನಟಿ ಬಿಂದು ರಕ್ಷಿದಿ ಕೂಡ ಇಲ್ಲಿಯ ಕೂಸು.
ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್
ಸೌಮ್ಯ ಕುನಿಗನಹಳ್ಳಿ ಇವರದ್ದು ಆಸಕ್ತಿದಾಯಕ ಕಥೆ. ಬಾಲ್ಯದಲ್ಲಿ ಸೌಮ್ಯ ಎಲ್ಲ ಮಕ್ಕಳಂತೆ ಆಟ ಪಾಠಗಳಲ್ಲಿ ಭಾಗವಹಿಸದೆ ಕಾಫಿ ತೋಟಕ್ಕೆ ಕೂಲಿಗೆ ಹೋಗುತ್ತಿದ್ದರು. ಮನೆಯಲ್ಲಿ ಬಡತನ. ಕೂಲಿ ಮಾಡುತ್ತಿರುವಾಗ ದೊಡ್ಡವರಷ್ಟೇ ಕೆಲಸ ಮಾಡಿದರೂ ಚಿಕ್ಕ ಹುಡುಗಿ ಎಂದು ಸರಿಯಾಗಿ ಕೂಲಿ ಕೊಡುತ್ತಿರಲಿಲ್ಲ. ಆಗಲೇ ಅವರ ಮನಸ್ಸಿನಲ್ಲಿ ತಾರತಮ್ಯದ ವಿರುದ್ಧ ದನಿ ಎತ್ತುವ, ನ್ಯಾಯಕ್ಕಾಗಿ ಹೋರಾಡುವ ಕಿಚ್ಚು ಹೊತ್ತಿಕೊಂಡಿತು. ಇದೀಗ ಅವರು ‘ಮಹಿಳಾ ಕಾರ್ಮಿಕ ಸಂಘಟನೆಯ ಸಂಚಾಲಕಿ’ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 5000ಕ್ಕೂ ಹೆಚ್ಚು ಕಾಫಿ ತೋಟದ ಕಾರ್ಮಿಕರಿದ್ದಾರೆ. ಮಹಿಳೆಯರಿಗೆ ಸರಿಯಾದ ಸಂಬಳ ಕೊಡಿಸುವಲ್ಲಿ, ಅವರಿಗೆ ವೈದ್ಯಕೀಯ ಸೌಲಭ್ಯ ಕೊಡಿಸುವಲ್ಲಿ, ಕೆಲಸ ಮಾಡುವಾಗ ಅಪಘಾತ ಸಂಬಂಧಿಸಿದರೆ ತುರ್ತು ಚಿಕಿತ್ಸೆಗಾಗಿ, ಹೆರಿಗೆ ರಜೆ, ಸರ್ಕಾರಿ ರಜೆ, ಹೀಗೆ ಅನೇಕ ಸೌಲಭ್ಯ ಕೊಡಿಸುವಲ್ಲಿ ನೆರವಾಗಿದ್ದಾರೆ. ಕೊಡಿಸಿಯೂ ಇದ್ದಾರೆ. ಯಾವುದೇ ಭತ್ಯೆ ನಿರೀಕ್ಷೆಯಿಲ್ಲದೆ 16 ವರ್ಷಗಳಿಂದ ಸೌಮ್ಯ ಸಮಾಜಮುಖಿಯಾಗಿ ಕಾರ್ಮಿಕ ಮಹಿಳೆಯರ ಪರ ಕೆಲಸದಲ್ಲಿ ತೊಡಗಿದ್ದಾರೆ. ಜೀವನ ನಿರ್ವಹಣೆಗೆ ನರ್ಸರಿ ಮಾಡಿಕೊಂಡಿದ್ದಾರೆ. ನರ್ಸರಿಯಲ್ಲಿ ಎರಡೂವರೆ ಲಕ್ಷ ಕಾಫಿ ಸಸಿಗಳಿವೆ. ಜೊತೆಗೆ ಮೆಣಸು, ಏಲಕ್ಕಿ ಇತರೆ ಸಸಿಗಳು ಇವೆ. ಕಾರ್ಮಿಕ ಮಹಿಳೆಯರ ಬದುಕನ್ನು ಹಸನಾಗಿಸುವಲ್ಲಿ ಹಸಿರಾಗಿಸುವಲ್ಲಿ ಸೌಮ್ಯ ಪಾತ್ರ ಹಿರಿದು.
ಇದನ್ನು ಓದಿದ್ದೀರಾ?: ಕಲ್ಲರಳಿ ಹೂವಾದ ಕ್ರೀಡಾಪಟು- ಕೆ.ವಿಜಯಕುಮಾರಿ
2000ನೆಯ ಇಸವಿ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ತೀವ್ರ ಕುಸಿತಕ್ಕೊಳಗಾದಾಗ, ಮನೆಯ ಒಳಗಿದ್ದ ಮಹಿಳಾ ಬೆಳೆಗಾರರು, ಕಾಫಿ ಉದ್ದಿಮೆಯ ಮಟ್ಟ ಹೆಚ್ಚಿಸಲು ನಿರ್ಧರಿಸಿ, ಸಕಲೇಶಪುರ ತಾಲ್ಲೂಕಿನ ಸಮಾನಮನಸ್ಕ ಮಹಿಳೆಯರು ಒಂದೆಡೆ ಸೇರಿ ಹುಟ್ಟು ಹಾಕಿದ ಸಂಸ್ಥೆಯೇ ‘ವುಮೆನ್ ಕಾಫಿ ಪ್ರಮೋಷನ್ ಕೌನ್ಸಿಲ್(ರಿ)’ ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕಾಫಿ ಉದ್ದಿಮೆಗೆ ತಮ್ಮ ಕೊಡುಗೆಯನ್ನು ನೀಡಬೇಕೆಂಬ ವಿಚಾರವಾಗಿ ಹಲವಾರು ಪ್ರಮುಖ ಬೆಳೆಗಾರರು ತಜ್ಞರೊಂದಿಗೆ ಸಮಲೋಚಿಸಿ ಇಟ್ಟ ದಿಟ್ಟ ಹೆಜ್ಜೆ ಹಿಂದೆ ಸರಿಯಲಿಲ್ಲ. ದೊಡ್ಡ ಮೇಳಗಳಲ್ಲಿ ಮಳಿಗೆ ತೆರೆದು, ಸ್ವಚ್ಛ ಕಾಫಿಪುಡಿ, ಕಾಫಿ ಆಧಾರಿತ ಇತರೆ ಸಾಮಗ್ರಿಗಳ ಮಾರಾಟ ಮಾಡುವುದಲ್ಲದೆ, ಕಾಫಿ ಫಿಲ್ಟರ್ ಬಳಸಿ ಪಾರಂಪರಿಕ ರೀತಿಯಲ್ಲಿ ಕಾಫಿ ಮಾಡುವ ವಿಧಾನವನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯದಿಂದ ಶುರುವಾದ ಇವರ ಪಯಣಕ್ಕೆ ಕೇಂದ್ರ ಕಾಫಿ ಮಂಡಳಿಯ ಸಹಕಾರ ಕೂಡ ದೊರೆಯಿತು. ಸರ್ಕಾರದೊಂದಿಗೆ ಕಾಫಿ ಬೀಜವನ್ನು ಹುರಿದು ಪುಡಿ ಮಾಡುವ ಘಟಕವನ್ನು ಪ್ರಾರಂಭಿಸಿ ‘7ಟು7’ ಎಂಬ ಹೆಸರಿನ ಕಾಫಿಪುಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ದೇಶದ ನಾನಾ ಭಾಗಗಳಲ್ಲಿ, ಪ್ರತಿಷ್ಠಿತ ಮೇಳಗಳಲ್ಲಿ ಕಾಫಿ ತಯಾರಿಕೆ ಪ್ರಾತ್ಯಕ್ಷಿಕೆ ನಡೆಸಿ, ಮಾರಾಟ ಮಾಡಿ ಕಾಫಿ ಉದ್ದಿಮೆಗೆ ಸಹಕಾರ ನೀಡಿದೆ ಮತ್ತು ನೀಡುತ್ತಿದೆ. ಮಹಿಳೆಯರ ಉದ್ದಿಮೆಯಾಗಿ ಹೆಸರು ಪಡೆದಿದೆ. 50 ಸದಸ್ಯರಿಂದ ಆರಂಭವಾದ ‘ವುಮೆನ್ ಕಾಫಿ ಪ್ರಮೋಷನ್ ಕೌನ್ಸಿಲ್(ರಿ)’ ಇದೀಗ 200ಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದೆ. ಈ ಸಂಸ್ಥೆ ತನ್ನದೇ ಕಚೇರಿ ಹೊಂದಿದ್ದು ಈಗ 25 ವರ್ಷ ಪೂರೈಸಿದೆ.
-ಸ.ವೆಂ. ಪೂರ್ಣಿಮಾ




