ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಅಲ್ಲಿನ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (AAP) ಸರ್ಕಾರಕ್ಕೆ ಧಾರ್ಮಿಕ ಆಘಾತವೊಂದು ಎದುರಾಗಿದೆ. ಸಿಖ್ ಧರ್ಮದ ಅತ್ಯುನ್ನತ ಮತ್ತು ಸರ್ವೋಚ್ಚ ಧಾರ್ಮಿಕ-ಸಾಮಾಜಿಕ ಪೀಠವಾದ ‘ಅಕಾಲ್ ತಖ್ತ್ ಸಾಹಿಬ್’ (Sri Akal Takht Sahib) ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ‘ಗುರು ವಿರೋಧಿ’ ಮತ್ತು ‘ಗುರು ದ್ರೋಹಿ’ (Guru Dokhi) ಎಂದು ಅಧಿಕೃತವಾಗಿ ಘೋಷಿಸಿದೆ. ಹಂಗಾಮಿ ಜಾತೇದಾರ್ ಗಿಯಾನಿ ಕುಲದೀಪ್ ಸಿಂಗ್ ಗರ್ಗಾಜ್ ನೇತೃತ್ವದ ಐದು ಸಿಂಗ್ ಸಾಹಿಬರ ತುರ್ತು ಸಭೆಯ ಬಳಿಕ ಈ ಐತಿಹಾಸಿಕ ತೀರ್ಪು ಪ್ರಕಟಿಸಲಾಗಿದ್ದು, ಇಡೀ ಸಿಖ್ ಸಮುದಾಯವು ಮುಖ್ಯಮಂತ್ರಿ ಮಾನ್ ಅವರೊಂದಿಗೆ ಯಾವುದೇ ಸಾಮಾಜಿಕ ಅಥವಾ ಧಾರ್ಮಿಕ ಸಂಬಂಧ ಇಟ್ಟುಕೊಳ್ಳಬಾರದು ಎಂದು ಕರೆ ನೀಡಲಾಗಿದೆ.
ಈ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಆಕ್ಷೇಪಾರ್ಹ ವಿಡಿಯೋ ಒಂದರ ತನಿಖಾ ವರದಿ. ವಿಡಿಯೋವೊಂದರಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ತೀವ್ರ ಮದ್ಯದ ಅಮಲಿನಲ್ಲಿ ಸಿಖ್ ಗುರುಗಳ ಪವಿತ್ರ ಚಿತ್ರಗಳು ಮತ್ತು ದಿವಂಗತ ಸಿಖ್ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರ ಭಾವಚಿತ್ರದ ಮೇಲೆ ಮದ್ಯವನ್ನು ಚಿಮುಕಿಸಿ ಅಪಚಾರ ಎಸಗುತ್ತಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಜನವರಿ 15 ರಂದೇ ಅಕಾಲ್ ತಖ್ತ್ ಪೀಠವು ಸಿಎಂಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು. ಆಗ ತನಿಖಾ ಮಂಡಳಿಯ ಮುಂದೆ ಹಾಜರಾಗಿದ್ದ ಮುಖ್ಯಮಂತ್ರಿ ಮಾನ್, ಈ ವಿಡಿಯೋ ಸಂಪೂರ್ಣ ನಕಲಿಯಾಗಿದ್ದು, ತನ್ನ ತೇಜೋವಧೆ ಮಾಡಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗಿದೆ ಎಂದು ವಾದಿಸಿ, ಫೋರೆನ್ಸಿಕ್ ತನಿಖೆಗೆ ಸವಾಲು ಹಾಕಿದ್ದರು.
ಆದರೆ, ಸಿಎಂ ಮಾನ್ ಅವರ ಈ ವಾದ ಈಗ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಸಂಪೂರ್ಣ ಸುಳ್ಳೆಂದು ಸಾಬೀತಾಗಿದೆ. ಮುಖ್ಯಮಂತ್ರಿ ಕಚೇರಿಯಿಂದ ಯಾವುದೇ ಸಹಕಾರ ಸಿಗದಿದ್ದಾಗ, ಅಕಾಲ್ ತಖ್ತ್ ಸಚಿವಾಲಯವು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಎರಡು ಸ್ವತಂತ್ರ ಪ್ರಯೋಗಾಲಯಗಳಿಗೆ ವಿಡಿಯೋವನ್ನು ಪರಿಶೀಲನೆಗಾಗಿ ಕಳುಹಿಸಿಕೊಟ್ಟಿತ್ತು. ಸೋಮವಾರ ಬಹಿರಂಗವಾಗಿರುವ ಉಭಯ ಲ್ಯಾಬ್‌ಗಳ ವರದಿಯ ಪ್ರಕಾರ, “ಆ ವಿಡಿಯೋದಲ್ಲಿ ಯಾವುದೇ ಎಡಿಟಿಂಗ್ ಅಥವಾ ಮಾರ್ಪಾಡು ನಡೆದಿಲ್ಲ. ಅದು ನಕಲಿಯೂ ಅಲ್ಲ ಮತ್ತು AI ತಂತ್ರಜ್ಞಾನದಿಂದ ಸೃಷ್ಟಿಸಿದ್ದೂ ಅಲ್ಲ, ಬದಲಿಗೆ ನೂರಕ್ಕೆ ನೂರು ಅಸಲಿ ವಿಡಿಯೋ” ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸರ್ವೋಚ್ಚ ಧಾರ್ಮಿಕ ಪೀಠದ ಮುಂದೆ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾರೆ ಮತ್ತು ಸಿಖ್ ಸಮುದಾಯದ ಭಾವನೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಅಕಾಲ್ ತಖ್ತ್ ಕಠಿಣ ತೀರ್ಪು ಪ್ರಕಟಿಸಿದೆ.
ಮುಖ್ಯಮಂತ್ರಿಗಳ ಬಹಿಷ್ಕಾರದ ಬೆನ್ನಲ್ಲೇ ಆಪ್ ಸರ್ಕಾರಕ್ಕೆ ಅಕಾಲ್ ತಖ್ತ್ ಮತ್ತೊಂದು ಬಿಗ್ ಶಾಕ್ ನೀಡಿದೆ. ಇತ್ತೀಚೆಗೆ ಆಪ್ ಸರ್ಕಾರವು ಸಿಖ್ ಸಮುದಾಯ, ಧಾರ್ಮಿಕ ಸಂಸ್ಥೆಗಳು ಅಥವಾ ಎಸ್‌ಜಿಸಿಪಿ (SGPC) ಯೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ನಡೆಸದೆ ಹಠಮಾರಿತನದಿಂದ ಪಂಜಾಬ್ ವಿಧಾನಸಭೆಯಲ್ಲಿ ‘ಜಾಗತ್ ಜೋತ್ ಶ್ರೀ ಗುರು ಗ್ರಂಥ ಸಾಹಿಬ್ ಸತ್ಕರ್ (ತಿದ್ದುಪಡಿ) ಮಸೂದೆ, 2026’ ಅನ್ನು ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಯನ್ನೂ ಪಡೆದುಕೊಂಡಿತ್ತು. ಈ ಕಾನೂನಿನಲ್ಲಿ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ವಿರುದ್ಧ ಅವಮಾನಕಾರಿ ಕೃತ್ಯ ಎಸಗಿದರೆ ಜೀವಾವಧಿ ಶಿಕ್ಷೆ ವಿಧಿಸುವ ಪ್ರಾವಧಾನ್ಯವಿದ್ದರೂ, ಧಾರ್ಮಿಕ ವಿಷಯಗಳಲ್ಲಿ ಕಾನೂನು ರೂಪಿಸುವ ಅಧಿಕಾರ ಸರ್ಕಾರಕ್ಕಿಲ್ಲ ಮತ್ತು ಇದು ಪಂಥದೊಳಗೆ ವಿಭಜನೆ ಉಂಟುಮಾಡುತ್ತದೆ ಎಂದು ಧರ್ಮಗುರುಗಳು ಆಕ್ರೋಶ ಹೊರಹಾಕಿದ್ದಾರೆ. “ಗುರುವಿನ ಸಿಂಹಾಸನವನ್ನು ಪ್ರಶ್ನಿಸುವುದನ್ನು ಯಾರೂ ಸಹಿಸಲು ಸಾಧ್ಯವಿಲ್ಲ” ಎಂದು ಗುಡುಗಿರುವ ಜಾತೇದಾರ್ ಗರ್ಗಾಜ್, ಈ ಕಾನೂನಿಗೆ ಸಹಿ ಹಾಕಿರುವ ಪಂಜಾಬ್ ಸರ್ಕಾರದ ಇಡೀ ಸಚಿವ ಸಂಪುಟ ಮತ್ತು ಎಲ್ಲಾ ಆಡಳಿತಾರೂಢ ಸಿಖ್ ಶಾಸಕರು ಜೂನ್ 29 ರಂದು ಖುದ್ದಾಗಿ ಪೀಠದ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಬೇಕು ಎಂದು ಸಮನ್ಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: RSS ಸಂವಿಧಾನ ಏನು ಹೇಳುತ್ತದೆ? ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಏನು ಹೇಳುತ್ತಾರೆ?
ಈ ಧಾರ್ಮಿಕ ತೀರ್ಪು ಹೊರಬೀಳುತ್ತಿದ್ದಂತೆಯೇ ಪಂಜಾಬ್ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎದ್ದಿದ್ದು, ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಗಳ ತಕ್ಷಣದ ರಾಜೀನಾಮೆಗೆ ಒತ್ತಾಯಿಸಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರೀಂದರ್ ಸಿಂಗ್ ರಾಜಾ ವಾರಿಂಗ್ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದು, “ವಿಧಿವಿಜ್ಞಾನ ತನಿಖೆಯ ನಂತರ ಭಗವಂತ್ ಮಾನ್ ಅವರು ಧಾರ್ಮಿಕವಾಗಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಇಂತಹ ಗಂಭೀರ ತೀರ್ಮಾನದ ಬಳಿಕ ಮಾನ್ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ಅಕಾಲ್ ತಖ್ತ್‌ನ ಅತ್ಯುನ್ನತ ಅಧಿಕಾರ ಮತ್ತು ಸಿಖ್ ಸಮುದಾಯದ ಭಾವನೆಗಳನ್ನು ಗೌರವಿಸಿ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಆದರೆ, ಈ ಇಡೀ ವಿವಾದವನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಮ್ ಆದ್ಮಿ ಪಾರ್ಟಿ, “ಲ್ಯಾಬ್ ವರದಿ ಕೇವಲ ವಿಡಿಯೋ ಅಸಲಿ ಎಂದು ಹೇಳಿದೆಯೇ ಹೊರತು ಅದರಲ್ಲಿರುವ ವ್ಯಕ್ತಿ ನಾನೇ ಎಂದು ಎಲ್ಲೂ ಸಾಬೀತುಪಡಿಸಿಲ್ಲ. ಆ ವಿಡಿಯೋದಲ್ಲಿರುವ ವ್ಯಕ್ತಿಯ ಎತ್ತರ ಮತ್ತು ದೇಹದ ವಿನ್ಯಾಸ ನನಗೂ ಮ್ಯಾಚ್ ಆಗುವುದಿಲ್ಲ. ಇದು ವಿರೋಧ ಪಕ್ಷವಾದ ಶಿರೋಮಣಿ ಅಕಾಲಿದಳ ಮತ್ತು ಬಾದಲ್ ಕುಟುಂಬವು ರಾಜಕೀಯ ಲಾಭಕ್ಕಾಗಿ ಅಕಾಲ್ ತಖ್ತ್ ಪೀಠವನ್ನು ದುರ್ಬಳಕೆ ಮಾಡಿಕೊಂಡು ನಡೆಸುತ್ತಿರುವ ಸುಳ್ಳು ಪ್ರಚಾರ” ಎಂದು ತಿರುಗೇಟು ನೀಡಿದೆ. ಆದಾಗ್ಯೂ, ಇಂಟರ್ನೆಟ್ ಸ್ವಾತಂತ್ರ್ಯ ಪರ ಹೋರಾಡುವ ದೇಶದ ಹಲವು ಸ್ವತಂತ್ರ ಸಂಸ್ಥೆಗಳು ಮತ್ತು ಪಂಜಾಬ್‌ನ ಸಾಮಾನ್ಯ ಬಳಕೆದಾರರು ಸರ್ಕಾರದ ಹಠಮಾರಿತನ ಮತ್ತು ಧಾರ್ಮಿಕ ಪೀಠದ ನಡುವಿನ ಈ ಸಂಘರ್ಷ ಮುಂಬರುವ ಚುನಾವಣೆಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸುತ್ತಿದ್ದಾರೆ.




