ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಪ್ರಚಾರ ತೀವ್ರಗೊಳ್ಳುತ್ತಿದೆ. ಈ ನಡುವೆ ದ್ವೇಷ ಭಾಷಣ, ಬೆದರಿಕೆ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪವನ್ನು ಟಿಎಂಸಿ ಮತ್ತು ಬಿಜೆಪಿ ಪರಸ್ಪರ ಹೊರೆಸಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿವೆ.
ಬಿಜೆಪಿಯ ಪಾಣಿಹಟಿ ಅಭ್ಯರ್ಥಿ, ಕಳೆದ ವರ್ಷ ಅತ್ಯಾಚಾರ ಮತ್ತು ಕೊಲೆಯಾದ ಆರ್‌ಜಿ ಕರ್ ಆಸ್ಪತ್ರೆಯ ವೈದ್ಯೆಯ ತಾಯಿ ರತ್ನಾ ದೇಬನಾಥ್ ಮತ್ತು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಹೇಳಿಕೆಗಳು ಸದ್ಯ ವಿವಾದಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಬಂಗಾಳ ಚುನಾವಣೆ | ಬಂಗಾಳದ ನೆಲದಲ್ಲಿ BJPಗೆ ನೆಲೆ ಕೊಟ್ಟಿದ್ದೇ TMC!
ಬಿಜೆಪಿ ಅಭ್ಯರ್ಥಿ ರತ್ನಾ ದೇಬನಾಥ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ, ಬೆದರಿಕೆ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಟಿಎಂಸಿ ಸಂಸದರು ದೂರು ನೀಡಿದ್ದಾರೆ.
ಇಂತಹ ಬೆದರಿಕೆ ಹೇಳಿಕೆಗಳು ಮತದಾರರಲ್ಲಿ ಭಯ ಮತ್ತು ದ್ವೇಷವನ್ನು ಸೃಷ್ಟಿಸುತ್ತದೆ. ಈ ಮೂಲಕ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ದುರ್ಬಲಗೊಳಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬಂಗಾಳ ಚುನಾವಣೆಯಲ್ಲಿ ಘರ್ಷಣೆ ಉಂಟು ಮಾಡುವುದೇ ಬಿಜೆಪಿಯ ಉದ್ದೇಶ ಎಂದು ಟಿಎಂಸಿ ಆರೋಪಿಸಿದೆ.
ಇನ್ನೊಂದೆಡೆ ಟಿಎಂಸಿ ಅಭ್ಯರ್ಥಿ ಕಲ್ಯಾಣ್ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ, ಪ್ರಚೋದನಕಾರಿ ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ ಆರೋಪ ಹೊಂದಿದ್ದಾರೆ. ಈ ಸಂಬಂಧ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ ಪ್ರತಿ-ದೂರು ಸಲ್ಲಿಸಿದೆ.
ಈ ಸಂಬಂಧ ಬಿಜೆಪಿ ವಿಡಿಯೋವನ್ನು ಸಾಕ್ಷಿಯಾಗಿ ಸಲ್ಲಿಸಿದೆ. ಟಿಎಂಸಿ ನಾಯಕರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಮಾದರಿ ನೀತಿ ಸಂಹಿತೆಯನ್ನು ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ಬಿಜೆಪಿ ಆರೋಪಿಸಿದೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದೆ. 152 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 23ರಂದು ನಡೆಯಲಿದೆ. 142 ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಮತದಾನ ಏಪ್ರಿಲ್ 29ರಂದು ನಡೆಯಲಿದೆ. ಮತ ಎಣಿಕೆ ಮೇ 4ರಂದು ನಡೆಯಲಿದೆ.




