ಉತ್ತರ ಪ್ರದೇಶ ರಾಜಕೀಯದಲ್ಲಿ ಮತ್ತೊಮ್ಮೆ ವಾಕ್ಸಮರ ತಾರಕಕ್ಕೇರಿದೆ. ಸಮಾಜವಾದಿ ಪಕ್ಷದಲ್ಲಿ (ಎಸ್‌ಪಿ) ಶೀಘ್ರದಲ್ಲೇ ಮಹಾರಾಷ್ಟ್ರ ಮಾದರಿಯ ಭಾರಿ ಒಡಕು ಉಂಟಾಗಲಿದ್ದು, ಹಲವು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಸಚಿವ ಓಂ ಪ್ರಕಾಶ್ ರಾಜ್‌ಭರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ತಿರುಗೇಟು ನೀಡಿದ್ದಾರೆ.
“ಅಕ್ರಮ ಗಣಿಗಾರಿಕೆ ಹಾಗೂ ಗೋಮತಿ ರಿವರ್‌ಫ್ರಂಟ್ ಹಗರಣಗಳ ತನಿಖೆಯ ಭೀತಿಯಿಂದ ಎಸ್‌ಪಿಯ ಬಹುತೇಕ ಶಾಸಕರು ಆತಂಕಗೊಂಡಿದ್ದಾರೆ. ಹೀಗಾಗಿ, ರಕ್ಷಣೆಗಾಗಿ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಎಸ್‌ಪಿ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವೊಂದನ್ನೂ ಬರೆದಿದ್ದಾರೆ,” ಎಂದು ಎಸ್‌ಬಿಎಸ್‌ಪಿ ಅಧ್ಯಕ್ಷರೂ ಆಗಿರುವ ರಾಜ್‌ಭರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಆಮಿಷವೊಡ್ಡಿ ವಿರೋಧ ಪಕ್ಷಗಳನ್ನು ಒಡೆಯುವುದು ಬಿಜೆಪಿಯ ಹಳೆಯ ತಂತ್ರ. ಈ ಆಮಿಷ ಹಾಗೂ ಹೊಗಳಿಕೆಯ ಕಥೆ ಇನ್ನೆಷ್ಟು ದಿನ ನಡೆಯುತ್ತದೆ? ಸಮಾಜವಾದಿ ಪಕ್ಷವು ಬಲಿಷ್ಠವಾಗಿದ್ದು, ನಮ್ಮ ಶಾಸಕರು ಪಕ್ಷನಿಷ್ಠರಾಗಿದ್ದಾರೆ. ಇಂತಹ ಸವಾಲುಗಳನ್ನು ಎದುರಿಸಲು ಪಕ್ಷ ಸಂಪೂರ್ಣ ಸಜ್ಜಾಗಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಪಂಜಾಬ್ ಸಿಎಂಗೆ ‘ಗುರುದ್ರೋಹಿ’ ಪಟ್ಟ: ಚುನಾವಣಾ ಹೊತ್ತಲ್ಲೇ ಆಪ್‌ಗೆ ನುಂಗಲಾರದ ತುತ್ತು
ರಾಜ್‌ಭರ್ ಹೇಳಿಕೆಯನ್ನು ಟೀಕಿಸಿರುವ ಎಸ್‌ಪಿ ನಾಯಕರು, “ಅಯೋಧ್ಯೆ ರಾಮಮಂದಿರ ದೇಣಿಗೆ ವಿಚಾರದಲ್ಲಿ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸಿದ ನಮ್ಮ ಶಾಸಕರು ಈಗಲೂ ಒಗ್ಗಟ್ಟಾಗಿದ್ದಾರೆ” ಎಂದು ತಿಳಿಸಿದ್ದಾರೆ.
2027ರ ವಿಧಾನಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಈಗಿನಿಂದಲೇ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಈ ಹೊತ್ತಿನಲ್ಲೇ ಆಡಳಿತಾರೂಢ ಎನ್‌ಡಿಎ ಮತ್ತು ‘ಇಂಡಿಯಾ’ ಒಕ್ಕೂಟದ ಪ್ರಮುಖ ಪಕ್ಷವಾದ ಎಸ್‌ಪಿ ನಡುವಿನ ಈ ತಾಜಾ ಆರೋಪ-ಪ್ರತ್ಯಾರೋಪಗಳು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ.




