ವಾರಣಾಸಿಯ ಶ್ರೀ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಅಭಿವೃದ್ಧಿ ಯೋಜನೆಯ ಭಾಗವಾಗಿ, ದಲ್ಮಂಡಿ ಪ್ರದೇಶದಲ್ಲಿ ರಸ್ತೆಗಳ ವಿಸ್ತರಣೆ ಮತ್ತು ಸೌಂದರ್ಯೀಕರಣ ಕಾರ್ಯ ಕೈಗೊಳ್ಳಲಾಗಿದೆ. ಈ ಯೋಜನೆಯಡಿ 6 ಪುರಾತನ ಮಸೀದಿಗಳನ್ನು ನೆಲಸಮಗೊಳಿಸುವ ಪ್ರಸ್ತಾಪವಿದೆ. ಇದನ್ನು ವಿರೋಧಿಸಿ ಮತ್ತು ರಸ್ತೆ ವಿಸ್ತರಣೆ ಕಾರ್ಯವನ್ನು ತಡೆಯುವಂತೆ ಕೋರಿ ದಲ್ಮಂಡಿ ಪ್ರದೇಶದ 6 ಮಂದಿ ಅಂಗಡಿ ವ್ಯಾಪಾರಿಗಳು ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ.
ಧಾರ್ಮಿಕ ಸ್ಥಳಗಳ ರಕ್ಷಣೆಗೆ ಸಂಬಂಧಿಸಿದ 1991ರ ‘ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ’ಯು ಕೇವಲ ಒಂದು ಧರ್ಮದ ಪೂಜಾ ಸ್ಥಳವನ್ನು ಮತ್ತೊಂದು ಧರ್ಮದ ಪೂಜಾ ಸ್ಥಳವನ್ನಾಗಿ ಪರಿವರ್ತಿಸುವುದನ್ನು ಮಾತ್ರ ತಡೆಯುತ್ತದೆ. ಆದರೆ, ಜಾತ್ಯತೀತ ಮತ್ತು ಸಾರ್ವಜನಿಕ ಉದ್ದೇಶಗಳಿಗಾಗಿ ಅಂತಹ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಈ ಕಾಯ್ದೆಯು ಎಲ್ಲಿಯೂ ನಿಷೇಧಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಅರ್ಜಿದಾರರು, ಈ ಭೂಸ್ವಾಧೀನ ಪ್ರಕ್ರಿಯೆಯು ತಾರತಮ್ಯದಿಂದ ಕೂಡಿದೆ, ಕಾನೂನು ಬಾಹಿರವಾಗಿದೆ ಮತ್ತು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ವಾದಿಸಿದ್ದರು.
ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ಅರುಣ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು, 32 ಪುಟಗಳ ಸುದೀರ್ಘ ಆದೇಶ ಹೊರಡಿಸಿ, “1991ರ ಕಾಯ್ದೆಯು ಒಂದು ಧಾರ್ಮಿಕ ಪಂಗಡದ ಪೂಜಾ ಸ್ಥಳವನ್ನು ಮತ್ತೊಂದಕ್ಕೆ ಪರಿವರ್ತಿಸುವುದನ್ನು ಮಾತ್ರ ನಿಷೇಧಿಸುತ್ತದೆ. ಇದು ಜಾತ್ಯತೀತ ಮತ್ತು ಸಾರ್ವಜನಿಕ ಉದ್ದೇಶಗಳಿಗಾಗಿ ಯಾವುದೇ ಧಾರ್ಮಿಕ ಪೂಜಾ ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳುವ ರಾಜ್ಯದ ಅಧಿಕಾರವನ್ನು ಮೊಟಕುಗೊಳಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಭಾರೀ ಮಳೆ | ಗುಜರಾತಿನಲ್ಲಿ ಪ್ರವಾಹ, ಕಾನ್ಪುರದಲ್ಲಿ 56 ವರ್ಷಗಳ ದಾಖಲೆ ಮುರಿದ ವರ್ಷಧಾರೆ
ರಾಜ್ಯ ಸರ್ಕಾರವು ವಾದ ಮಂಡಿಸುತ್ತಾ, 2013ರ ‘ಭೂಸ್ವಾಧೀನ, ಪುನರ್ವಸತಿ ಮತ್ತು ಮರುಸ್ಥಾಪನೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಕಾಯ್ದೆ’ಯ ಅಡಿ ಸರ್ಕಾರವು ಯಾವುದೇ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಾರ್ವಭೌಮ ಅಧಿಕಾರವನ್ನು ಹೊಂದಿದೆ ಎಂದು ತಿಳಿಸಿತು. ಅಲ್ಲದೆ, ವಕ್ಫ್ ಕಾಯ್ದೆಯ ಸೆಕ್ಷನ್ 51 ಮತ್ತು 91 ಕೂಡ ಕಾನೂನಿನ ಪ್ರಕ್ರಿಯೆಗೆ ಒಳಪಟ್ಟು ಭೂಸ್ವಾಧೀನಕ್ಕೆ ಅವಕಾಶ ನೀಡುತ್ತವೆ ಎಂದು ಪ್ರತಿಪಾದಿಸಿತು.
ಈ ವಾದಗಳನ್ನು ಪರಿಗಣಿಸಿದ ನ್ಯಾಯಾಲಯ, ಅರ್ಜಿದಾರರು ಆಸ್ತಿಯ ಮಾಲೀಕರಲ್ಲ, ಬದಲಾಗಿ ಬಾಡಿಗೆದಾರರು ಮಾತ್ರ ಆಗಿರುವುದರಿಂದ, ಅವರಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಲು ಸೀಮಿತವಾದ ಹಕ್ಕಿದೆ (Limited standing) ಎಂದು ಅಭಿಪ್ರಾಯಪಟ್ಟಿತು. 2013ರ ಕಾಯ್ದೆಯಡಿ, ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಲು ಅಥವಾ ಮಾತುಕತೆ ನಡೆಸಲು ಮುಖ್ಯವಾಗಿ ಆಸ್ತಿಯ ಮಾಲೀಕರಿಗೆ (Title holder) ಮಾತ್ರ ಅಧಿಕಾರವಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.




