ಪ್ರಕರಣವೊಂದರಲ್ಲಿ ಸರ್ಕಾರದೊಂದಿಗೆ ನಡೆದ ಪತ್ರವ್ಯವಹಾರದ ಕುರಿತು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ 6 CBI ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಆರಂಭಿಸುವಂತೆ ದೆಹಲಿ ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ಮಧು ಜೈನ್ ಅವರ ಪೀಠವು ಸಿಬಿಐ ವಿಶೇಷ ನ್ಯಾಯಾಧೀಶರಿಗೆ ಈ ಅಧಿಕಾರಿಗಳ ವಿರುದ್ಧ ಲಿಖಿತ ದೂರು ದಾಖಲಿಸುವಂತೆ ನಿರ್ದೇಶನ ನೀಡಿದೆ. ಸಿಬಿಐ ಅಧಿಕಾರಿಗಳಾದ ಸುಶೀಲ್ ದಿವಾನ್, ವಿನೀತ್ ವಿನಾಯಕ್, ಅಮಿತ್ ಕುಮಾರ್, ರಮಣ್ ತ್ಯಾಗಿ, ಪ್ರೇಮ್ ಕುಮಾರ್ ಗೌತಮ್ ಮತ್ತು ಮೊಹಮ್ಮದ್ ಅಜಾದ್ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 191 (ಸುಳ್ಳು ಸಾಕ್ಷ್ಯ), 193 (ಸುಳ್ಳು ಸಾಕ್ಷ್ಯ ನೀಡುವುದು ಅಥವಾ ಸೃಷ್ಟಿಸುವುದು) ಮತ್ತು 209 (ನ್ಯಾಯಾಲಯದಲ್ಲಿ ವಂಚನಾತ್ಮಕ ಅಥವಾ ಅಪ್ರಾಮಾಣಿಕ ಸುಳ್ಳು ಹಕ್ಕು ಮಂಡಿಸುವುದು) ಅಡಿಯಲ್ಲಿ ಆರೋಪಗಳಿಗೆ “ಸಮಂಜಸವಾದ ಆಧಾರವಿದೆ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನಾಲ್ಕು ವಾರಗಳೊಳಗೆ ಲಿಖಿತ ದೂರನ್ನು ಸಂಬಂಧಪಟ್ಟ ಅಧಿಕಾರ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್‌ಗೆ ರವಾನಿಸುವಂತೆ ವಿಶೇಷ ನ್ಯಾಯಾಧೀಶರಿಗೆ ನ್ಯಾಯಾಲಯ ಸೂಚಿಸಿದೆ.
ಮಾಜಿ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿ ಅಶೋಕ್ ಕುಮಾರ್ ಅಗರ್ವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ಆದೇಶ ಹೊರಡಿಸಲಾಗಿದೆ.
ಅಗರ್ವಾಲ್ ವಿರುದ್ಧ ಆದಾಯದ ತಿಳಿದ ಮೂಲಗಳಿಗೆ ಹೋಲಿಸಿದರೆ ಅಕ್ರಮವಾಗಿ ಅಧಿಕ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದಡಿ ಸಿಬಿಐ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿತ್ತು. ಆದರೆ, 2016ರ ಜನವರಿಯಲ್ಲಿ ದೆಹಲಿ ಹೈಕೋರ್ಟ್ ಅಮಾನ್ಯ ಅನುಮೋದನೆ (sanction) ಆಧರಿಸಿ ಅವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿತ್ತು. ಈ ಆದೇಶವನ್ನು ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
2016ರ ಜೂನ್‌ನಲ್ಲಿ ಕೇಂದ್ರ ಕಾನೂನು ಸಚಿವಾಲಯವು ಈ ವಿಚಾರವನ್ನು ಮೇಲ್ಮನವಿ ನ್ಯಾಯಾಲಯದಲ್ಲಿ ಮುಂದುವರಿಸಲು ಸಮಂಜಸವಾದ ಕಾರಣ ಕಂಡುಬರುತ್ತಿಲ್ಲ ಎಂದು ತಿಳಿಸಿತ್ತು. ಇದಾದ ಬಳಿಕ ಜುಲೈನಲ್ಲಿ ತನಿಖೆ ವೇಳೆ ವಶಪಡಿಸಿಕೊಂಡ ದಾಖಲೆಗಳನ್ನು ಹಿಂದಿರುಗಿಸುವಂತೆ ಅಗರ್ವಾಲ್ ಮನವಿ ಮಾಡಿದ್ದರು.
2016ರ ಆಗಸ್ಟ್‌ನಲ್ಲಿ ಸಿಬಿಐ, ತನಿಖೆಯಲ್ಲಿ ಅವಲಂಬಿಸದ ದಾಖಲೆಗಳನ್ನು ಹಿಂದಿರುಗಿಸಲು ಯಾವುದೇ ಆಕ್ಷೇಪವಿಲ್ಲ ಎಂದು ತಿಳಿಸಿತ್ತು. ಆದರೆ ಉಳಿದ ದಾಖಲೆಗಳನ್ನು ನೀಡಲು ವಿರೋಧ ವ್ಯಕ್ತಪಡಿಸಿತ್ತು. ಮುಂದಿನ ಕಾನೂನು ಕ್ರಮಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ಸಚಿವಾಲಯದೊಂದಿಗೆ ಪತ್ರವ್ಯವಹಾರ ನಡೆಯುತ್ತಿದೆ. ಹೀಗಾಗಿ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ದಾಖಲೆಗಳು ಅಗತ್ಯವಾಗಬಹುದು ಎಂದು ಸಿಬಿಐ ವಾದಿಸಿತ್ತು.
ಸಿಬಿಐನ ಈ ಹೇಳಿಕೆ ವಾಸ್ತವಕ್ಕೆ ದೂರವಾಗಿದೆ ಎಂದು ಆರೋಪಿಸಿದ ಅಗರ್ವಾಲ್, ಆ ಉತ್ತರ ಸಲ್ಲಿಸಲು ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತೆ 2016ರ ಆಗಸ್ಟ್‌ನಲ್ಲೇ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಪೋಕ್ಸೊ ಪ್ರಕರಣದಲ್ಲಿ ರಾಜಿಗೆ ಅವಕಾಶವಿಲ್ಲ: ದೆಹಲಿ ಹೈಕೋರ್ಟ್
ಅದೇ ತಿಂಗಳಲ್ಲಿ ವಿಚಾರಣಾ ನ್ಯಾಯಾಲಯ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಆದರೆ, 2025ರ ಅಕ್ಟೋಬರ್ 25ರಂದು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಆರಂಭಿಸುವಂತೆ ಮಾಡಿದ್ದ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅಗರ್ವಾಲ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್‌ನಲ್ಲಿ ಸಿಬಿಐ, ವಿಚಾರಣಾ ನ್ಯಾಯಾಲಯವು ಕ್ರಿಮಿನಲ್ ಕ್ರಮ ಆರಂಭಿಸಲು ನಿರಾಕರಿಸಿರುವುದು ಸರಿಯಾಗಿದೆ ಎಂದು ವಾದಿಸಿತ್ತು. ಆದರೆ, ಪ್ರಕರಣದ ದಾಖಲೆಗಳು ಮತ್ತು ಆರೋಪಗಳನ್ನು ಪರಿಶೀಲಿಸಿದ ಬಳಿಕ ಹೈಕೋರ್ಟ್ ಆರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಲು ಸಮಂಜಸವಾದ ಆಧಾರವಿದೆ ಎಂದು ಅಭಿಪ್ರಾಯಪಟ್ಟಿದೆ ಹಾಗೂ ತನಿಖೆಗೆ ಆದೇಶಿಸಿದೆ.




