ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಹೆಚ್ಚುತ್ತಿರುವ ಊಹಾಪೋಹಗಳ ನಡುವೆ ಬಿಜೆಪಿ ಕೇಂದ್ರ ನಾಯಕತ್ವವು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪಕ್ಷದ ಕೇಂದ್ರ ವೀಕ್ಷಕರನ್ನಾಗಿ ನೇಮಿಸಿದೆ.
ಏಪ್ರಿಲ್ 15ರಂದು ಪಟನಾದಲ್ಲಿ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆಯಿದೆ. ಇದಕ್ಕೂ ಕೇವಲ ಮೂರು ದಿನಗಳ ಮೊದಲು ಭಾನುವಾರ ಬಿಜೆಪಿ ಶಿವರಾಜ್ ಸಿಂಗ್ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ನೇಮಿಸುವ ನಿರ್ಧಾರ ಕೈಗೊಂಡಿದೆ.
ಇದನ್ನು ಓದಿದ್ದೀರಾ? ನಿಶಾಂತ್ ಕುಮಾರ್ ಬಿಹಾರದ ‘ಮುಂದಿನ ಮುಖ್ಯಮಂತ್ರಿ’ – ಪೋಸ್ಟರ್ಗಳನ್ನು ಹಾಕಿದ ಬೆಂಬಲಿಗರು
ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಏಪ್ರಿಲ್ 10ರಂದು ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಿಂದಾಗಿ ಬಿಹಾರದಲ್ಲಿ ಹೊಸ ಸರ್ಕಾರ ರಚನೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಬಿಜೆಪಿಯಿಂದ ಹೊಸ ಮುಖ್ಯಮಂತ್ರಿ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಅವರನ್ನು ಸಿಎಂ ಮಾಡಬೇಕು ಎಂಬ ಆಗ್ರಹವೂ ಇದೆ. ಆದರೆ ನಿಶಾಂತ್ ಕುಮಾರ್ಗೆ ಡಿಸಿಎಂ ಸ್ಥಾನ ನೀಡುವ ಸಾಧ್ಯತೆಯಿದೆ.
ಬಿಹಾರ ಸಿಎಂ ಯಾರು ಎಂದಾಗ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಶ್ರೇಯಸಿ ಸಿಂಗ್ ಮತ್ತು ಸಂಜೀವ್ ಚೌರಾಸಿಯಾ ಸೇರಿದಂತೆ ಹಲವಾರು ಹೆಸರುಗಳು ಕೇಳಿಬರುತ್ತಿದೆ. ಆಡಳಿತಾತ್ಮಕ ಅನುಭವ, ವಿಶೇಷವಾಗಿ ಗೃಹ ಇಲಾಖೆಯನ್ನು ನಿರ್ವಹಿಸುವಲ್ಲಿನ ಅನುಭವ ಹೊಂದಿರುವ ಕಾರಣದಿಂದಾಗಿ ಸಾಮ್ರಾಟ್ ಚೌಧರಿ ಈ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಸೈದ್ಧಾಂತಿಕ ನಿಲುವಿನೊಂದಿಗೆ ಹೊಂದಿಕೆಯಾಗುವುದಲ್ಲದೆ, ಅತ್ಯಂತ ಹಿಂದುಳಿದ ವರ್ಗಗಳನ್ನು (ಇಬಿಸಿ) ಪ್ರತಿನಿಧಿಸುವ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಚಿಂತನೆಯಲ್ಲಿದೆ. ಕುರ್ಮಿ ಸಮುದಾಯಕ್ಕೆ ಸೇರಿದ ಚೌಧರಿ ಈ ಮಾನದಂಡಕ್ಕೆ ಸರಿಹೊಂದುವುದರಿಂದ ಅವರಿಗೆ ಈ ಸ್ಥಾನ ಲಭಿಸುವ ಸಾಧ್ಯತೆ ಅಧಿಕವಾಗಿದೆ.




