ಭಾರತದಲ್ಲಿ ಪೊಲೀಸ್ ಕಸ್ಟಡಿಯಲ್ಲಿನ ಹಿಂಸೆ ಮತ್ತು ಸಾವುಗಳ ಕುರಿತಾದ ದತ್ತಾಂಶಗಳು ನಿಖರವಾಗಿಲ್ಲ ಮತ್ತು ವ್ಯವಸ್ಥಿತವಾಗಿ ಮುಚ್ಚಿಹಾಕಲ್ಪಡುತ್ತಿವೆ ಎಂಬ ಆತಂಕವನ್ನು ವರದಿ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಹೋರಾಟಗಾರರನ್ನು ವಿಚಾರಣೆಯ ನೆಪದಲ್ಲಿ ಪೊಲೀಸ್ ಠಾಣೆಗಳಲ್ಲಿ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಡಿಸಿದರೂ, ಸಮರ್ಪಕ ಸಾಕ್ಷ್ಯಗಳ ಕೊರತೆ ಹಾಗೂ ಇಲಾಖೆಯೊಳಗಿನ ರಕ್ಷಣೆಯಿಂದಾಗಿ ತಪ್ಪಿತಸ್ಥ ಪೊಲೀಸರು ಸುಲಭವಾಗಿ ಪಾರಾಗುತ್ತಿದ್ದಾರೆ. ರಾಜಕೀಯ ಒತ್ತಡಗಳು ಈ ದೌರ್ಜನ್ಯಗಳಿಗೆ ಮತ್ತಷ್ಟು ಕುಮ್ಮಕ್ಕು ನೀಡುತ್ತಿವೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಸಮುದಾಯದ ಮೇಲೆ ನಡೆಯುತ್ತಿರುವ ವ್ಯಾಪಕ ಪೊಲೀಸ್ ದೌರ್ಜನ್ಯಗಳು ಪ್ರಜಾಪ್ರಭುತ್ವದ ಕಳವಳಕಾರಿ ಬೆಳವಣಿಗೆಯಾಗಿ ಮಾರ್ಪಟ್ಟಿವೆ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ‘ಚಲೋ ಸಂಸದ್’ ವಿದ್ಯಾರ್ಥಿ/ಯುವ ಪ್ರತಿಭಟನಾ ಮೆರವಣಿಗೆಯನ್ನು ಹತ್ತಿಕ್ಕಲು ಪೊಲೀಸರು ಅಶ್ರುವಾಯು, ಪೆಲೆಟ್ ಗನ್ ಮತ್ತು ಲಾಠಿ ಪ್ರಹಾರ ನಡೆಸಿದ ಅಮಾನವೀಯ ಘಟನೆಯು ಯುವಜನತೆಯ ಧ್ವನಿಯನ್ನು ಅಡಗಿಸುವ ವ್ಯವಸ್ಥಿತ ಪ್ರಯತ್ನದಂತಿದೆ. ಈ ಘಟನೆಗಳು ಪೊಲೀಸರು ಬಲಪ್ರಯೋಗ ಮಾಡಬೇಕಾದ ಮಿತಿಗಳು ಹಾಗೂ ಶಾಂತಿಯುತ ಪ್ರತಿಭಟನೆ ನಡೆಸುವ ನಾಗರಿಕ ಹಕ್ಕುಗಳ ರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ವಿದ್ಯಾರ್ಥಿಗಳ ಮೇಲಿನ ಈ ನಿರಂತರ ದೌರ್ಜನ್ಯಗಳು ಕೇವಲ ಆಕಸ್ಮಿಕವಲ್ಲ, ಬದಲಾಗಿ ಇಡೀ ಪೊಲೀಸ್ ವ್ಯವಸ್ಥೆಯಲ್ಲಿ ಬೇರೂರಿರುವ ದೋಷಪೂರಿತ ಮನಸ್ಥಿತಿಯ ಪ್ರತಿರೂಪ ಎಂಬುದನ್ನು ಹೊಸ ಅಧ್ಯಯನವೊಂದು ದೃಢಪಡಿಸಿದೆ. ‘ಕಾಮನ್ ಕಾಸ್’ (Common Cause) ಹಾಗೂ ‘ಲೋಕನೀತಿ-ಸಿಎಸ್‌ಡಿಎಸ್’ (Lokniti-CSDS) ಸಂಸ್ಥೆಗಳು ಜಂಟಿಯಾಗಿ ಸಿದ್ಧಪಡಿಸಿರುವ ‘ಸ್ಟೇಟಸ್ ಆಫ್ ಪೋಲಿಸಿಂಗ್ ಇನ್ ಇಂಡಿಯಾ ರಿಪೋರ್ಟ್ 2025‘ (SPIR) ವರದಿಯು, ಭಾರತೀಯ ಪೊಲೀಸ್ ವ್ಯವಸ್ಥೆಯ ಕರಾಳ ಮುಖ ಹಾಗೂ ದೌರ್ಜನ್ಯದ ಪರವಾದ ಒಲವಿನ ಮೇಲೆ ಸ್ಪಷ್ಟ ಬೆಳಕು ಚೆಲ್ಲಿದೆ.
ಕಾನೂನು ಮಾನದಂಡಗಳಲ್ಲಿ ಕಲ್ಪಿಸಿರುವುದಕ್ಕಿಂತ ಹೆಚ್ಚಿನ ಹಾಗೂ ವಿಸ್ತೃತವಾದ ಬಲಪ್ರಯೋಗದ ಅಧಿಕಾರವನ್ನು ತಾವೇ ಬಯಸುವುದಾಗಿ ದೇಶಾದ್ಯಂತ ಪೊಲೀಸ್ ಸಿಬ್ಬಂದಿಯ ನಡುವೆ ನಡೆಸಲಾದ ಈ ಸಮೀಕ್ಷೆ ಸೂಚಿಸುತ್ತದೆ. ಈ ಅಂಶಗಳು 2018 ರಿಂದೀಚೆಗೆ ‘ಕಾಮನ್ ಕಾಸ್’ ಮತ್ತು ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್‌ನ (CSDS) ‘ಲೋಕನೀತಿ’ ಕಾರ್ಯಕ್ರಮವು ಜಂಟಿಯಾಗಿ ಪ್ರಕಟಿಸುತ್ತಿರುವ ‘ಸ್ಟೇಟಸ್ ಆಫ್ ಪೋಲಿಸಿಂಗ್ ಇನ್ ಇಂಡಿಯಾ’ (SPIR) ಸರಣಿಯ ಆರನೇ ವರದಿಯಿಂದ ಹೊರಬಂದಿವೆ. ಈ ವರದಿಯ ಭಾಗವಾಗಿ, ದೇಶದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಒಟ್ಟು 6,000 ಪೊಲೀಸ್ ಸಿಬ್ಬಂದಿಯನ್ನು ಭೇಟಿಯಾಗಿ ಅವರ ಪೊಲೀಸ್ ಕಾರ್ಯವಿಧಾನಗಳು, ಸಾಂಸ್ಥಿಕ ಮನೋಭಾವನೆಗಳು ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಕುರಿತು ವಿಸ್ತೃತ ಸಮೀಕ್ಷೆಗೆ ಒಳಪಡಿಸಲಾಗಿದೆ.

ಈ ವರದಿಯ ಅತ್ಯಂತ ಆಘಾತಕಾರಿ ಅಂಶವೆಂದರೆ, ದೇಶದ ಶೇ. 70ರಷ್ಟು ಪೊಲೀಸ್ ಸಿಬ್ಬಂದಿ “ತಮಗೆ ಯಾವುದೇ ಶಿಕ್ಷೆಯ ಭಯವಿಲ್ಲದೆ ಮುಕ್ತವಾಗಿ ಬಲಪ್ರಯೋಗ ಮಾಡಲು ಅವಕಾಶ ನೀಡಬೇಕು” ಎಂದು ಪ್ರತಿಪಾದಿಸಿದ್ದಾರೆ. ಸಾರ್ವಜನಿಕರಲ್ಲಿ ಭಯ ಮೂಡಿಸಲು ಪೊಲೀಸರು “ಕಠಿಣ ವಿಧಾನಗಳನ್ನು” ಬಳಸುವುದು ಅತ್ಯಗತ್ಯ ಎಂದು ಶೇ. 55ರಷ್ಟು ಪೊಲೀಸರು ನಂಬಿದ್ದಾರೆ. ತಮ್ಮ ನ್ಯಾಯಸಮ್ಮತ ಹಕ್ಕುಗಳಿಗಾಗಿ ಬೀದಿಗಿಳಿಯುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕ್ರೂರವಾಗಿ ಮುಗಿಬೀಳಲು ಈ ಮನಸ್ಥಿತಿಯೇ ಪ್ರಮುಖ ಕಾರಣವಾಗಿದೆ ಎಂಬುದು ಈ ಅಂಕಿ-ಅಂಶಗಳಿಂದ ನಿಚ್ಚಳವಾಗಿದೆ.
ನ್ಯಾಯಾಲಯದ ಹಸ್ತಕ್ಷೇಪ ಮತ್ತು ಕಾನೂನಿನ ನಿಯಂತ್ರಣವನ್ನು ಧಿಕ್ಕರಿಸುವ ಪ್ರವೃತ್ತಿ ಪೊಲೀಸರಲ್ಲಿ ಹೆಚ್ಚಾಗುತ್ತಿರುವುದು ಮತ್ತೊಂದು ಕಳವಳಕಾರಿ ವಿಚಾರ. ನ್ಯಾಯಾಲಯದ ಯಾವುದೇ ವಿಚಾರಣೆ ಅಥವಾ ಮೇಲ್ವಿಚಾರಣೆ ಇಲ್ಲದೆಯೇ ಶಂಕಿತರನ್ನು ಬಂಧಿಸಲು ಮತ್ತು ವಶದಲ್ಲಿರಿಸಿಕೊಳ್ಳಲು ಅವಕಾಶವಿರಬೇಕು ಎಂದು ಶೇ. 69ರಷ್ಟು ಪೊಲೀಸರು ಹೇಳಿದ್ದಾರೆ. ಅಲ್ಲದೆ, ಶೇ. 48ರಷ್ಟು ಪೊಲೀಸರು ಮುಂಜಾಗ್ರತಾ ಬಂಧನಗಳನ್ನು ಬೆಂಬಲಿಸುತ್ತಾರೆ. ವಿದ್ಯಾರ್ಥಿ ನಾಯಕರನ್ನು ಮತ್ತು ಹೋರಾಟಗಾರರನ್ನು ವಿನಾಕಾರಣ ಬಂಧಿಸಿ ಜೈಲಿಗಟ್ಟಲು ಈ ಮುಂಜಾಗ್ರತಾ ಕ್ರಮಗಳನ್ನೇ ಅಸ್ತ್ರವಾಗಿ ಬಳಸಲಾಗುತ್ತಿದೆ.
ಬಂಧನದ ನಂತರದ ಕಾನೂನು ಪ್ರಕ್ರಿಯೆಗಳ ಪಾಲನೆಯಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಬಂಧಿತನಿಗೆ ಕಾರಣ ತಿಳಿಸುವುದು, ಕುಟುಂಬಕ್ಕೆ ಮಾಹಿತಿ ನೀಡುವುದು ಮುಂತಾದ ಕಡ್ಡಾಯ ನಿಯಮಗಳನ್ನು ಯಾವಾಗಲೂ ಪಾಲಿಸಲಾಗುತ್ತದೆ ಎಂದು ‘ಕೇವಲ ಶೇ. 41ರಷ್ಟು ಪೊಲೀಸರು’ ಮಾತ್ರ ಒಪ್ಪಿಕೊಂಡಿದ್ದಾರೆ. ಬಂಧಿತ ವಿದ್ಯಾರ್ಥಿಗಳಿಗೆ ತಕ್ಷಣ ವಕೀಲರನ್ನು ಭೇಟಿಯಾಗಲು ಅವಕಾಶ ನೀಡಬೇಕು ಎಂದು ಶೇ. 32ರಷ್ಟು ಪೊಲೀಸರು ನಂಬಿದ್ದರೆ, ವಕೀಲರೊಡನೆ ಖಾಸಗಿಯಾಗಿ ಮಾತನಾಡಲು ಅವಕಾಶ ನೀಡಲೇಬೇಕು ಎಂದು ಕೇವಲ ‘ಶೇ. 14ರಷ್ಟು’ ಮಂದಿ ಮಾತ್ರ ಸಮ್ಮತಿಸಿದ್ದಾರೆ. ಇದು ಸಂವಿಧಾನಬದ್ಧ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ (BNSS) ಮತ್ತು ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ದ (NHRC) ಮಾರ್ಗಸೂಚಿಗಳು ಈ ಪೊಲೀಸ್ ವರ್ತನೆಗೆ ಸಂಪೂರ್ಣ ತದ್ವಿರುದ್ಧವಾಗಿವೆ. ಪ್ರತಿಭಟನೆಗಳನ್ನು ನಿಯಂತ್ರಿಸುವಾಗ ಪೊಲೀಸರು ಮೊದಲು ಮನವೊಲಿಕೆ, ಎಚ್ಚರಿಕೆಗಳನ್ನು ನೀಡಬೇಕು ಮತ್ತು ಅನಿವಾರ್ಯವಾದಾಗ ಮಾತ್ರ “ಕನಿಷ್ಠ ಪ್ರಮಾಣದ ಬಲಪ್ರಯೋಗ” ಮಾಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ಈ ನಿಯಮಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದ್ದು, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಕ್ರಿಮಿನಲ್‌ಗಳಂತೆ ನಡೆಸಿಕೊಳ್ಳಲಾಗುತ್ತಿದೆ.
ಭಾರತದಲ್ಲಿ ಪೊಲೀಸ್ ಕಸ್ಟಡಿಯಲ್ಲಿನ ಹಿಂಸೆ ಮತ್ತು ಸಾವುಗಳ ಕುರಿತಾದ ದತ್ತಾಂಶಗಳು ನಿಖರವಾಗಿಲ್ಲ ಮತ್ತು ವ್ಯವಸ್ಥಿತವಾಗಿ ಮುಚ್ಚಿಹಾಕಲ್ಪಡುತ್ತಿವೆ ಎಂಬ ಆತಂಕವನ್ನು ವರದಿ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಹೋರಾಟಗಾರರನ್ನು ವಿಚಾರಣೆಯ ನೆಪದಲ್ಲಿ ಪೊಲೀಸ್ ಠಾಣೆಗಳಲ್ಲಿ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಡಿಸಿದರೂ, ಸಮರ್ಪಕ ಸಾಕ್ಷ್ಯಗಳ ಕೊರತೆ ಹಾಗೂ ಇಲಾಖೆಯೊಳಗಿನ ರಕ್ಷಣೆಯಿಂದಾಗಿ ತಪ್ಪಿತಸ್ಥ ಪೊಲೀಸರು ಸುಲಭವಾಗಿ ಪಾರಾಗುತ್ತಿದ್ದಾರೆ. ರಾಜಕೀಯ ಒತ್ತಡಗಳು ಈ ದೌರ್ಜನ್ಯಗಳಿಗೆ ಮತ್ತಷ್ಟು ಕುಮ್ಮಕ್ಕು ನೀಡುತ್ತಿವೆ.
ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಗಳು ಮತ್ತು ‘ಸ್ಟೇಟಸ್ ಆಫ್ ಪೋಲಿಸಿಂಗ್-2025’ ವರದಿಯ ಅಂಶಗಳು ಭಾರತೀಯ ಪೊಲೀಸ್ ವ್ಯವಸ್ಥೆಯ ತುರ್ತು ಸುಧಾರಣೆಯ ಅನಿವಾರ್ಯತೆಯನ್ನು ಸಾರಿ ಹೇಳುತ್ತಿವೆ. ಬಲಪ್ರಯೋಗವೇ ಶ್ರೇಷ್ಠ ಎಂದು ಭಾವಿಸುವ ಸಾಂಸ್ಥಿಕ ಮನಸ್ಥಿತಿಯನ್ನು ಬದಲಾಯಿಸಿ, ಪೊಲೀಸರಿಗೆ ಮಾನವ ಹಕ್ಕುಗಳ ಕುರಿತು ಕಟ್ಟುನಿಟ್ಟಿನ ತರಬೇತಿ ನೀಡುವುದು ಇಂದಿನ ತುರ್ತಾಗಿದೆ. ದೌರ್ಜನ್ಯ ಎಸಗುವ ಪೊಲೀಸರಿಗೆ ಇರುವ ಕಾನೂನು ರಕ್ಷಣೆಗಳನ್ನು ರದ್ದುಪಡಿಸಿ, ಕಠಿಣ ಶಿಕ್ಷೆ ವಿಧಿಸುವ ಹೊಣೆಗಾರಿಕೆಯ ವ್ಯವಸ್ಥೆ ಜಾರಿಗೆ ಬರದಿದ್ದರೆ, ಪ್ರಜಾಪ್ರಭುತ್ವದ ಆಶಾಕಿರಣವಾದ ವಿದ್ಯಾರ್ಥಿ ಸಮುದಾಯದ ಮೇಲಿನ ದೌರ್ಜನ್ಯಗಳು ಭವಿಷ್ಯದಲ್ಲಿ ಇನ್ನಷ್ಟು ಮಿತಿಮೀರಲಿವೆ.




