ವಿದ್ಯುತ್ ಬಿಲ್ ಬಾಕಿ ಕಾರಣ ಸಂಪರ್ಕ ಕಡಿತಗೊಳಿಸಿದ್ದನ್ನು ಪ್ರಶ್ನಿಸಿ ಹೆಸ್ಕಾಂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಘಟನೆ ಬೆಳಗಾವಿ ನಗರದ ಕುವೆಂಪುನಗರದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ ಎನ್ನಲಾಗಿದೆ.
ಹೆಸ್ಕಾಂ ಎಇಇ ದೀಪಕ್ ಡಿ. ಹಾಗೂ ಸೆಕ್ಷನ್ ಆಫೀಸರ್ ರಾಜು ಚವ್ಹಾಣ್ ಹಲ್ಲೆಗೊಳಗಾದ ಅಧಿಕಾರಿಗಳು ಎಂದು ತಿಳಿದುಬಂದಿದೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಲಕ್ಷ್ಮೀ ಸ್ಟೋನ್ ಕ್ರಷರ್‌ಗೆ ಸುಮಾರು ಮೂರು ತಿಂಗಳಿಂದ ₹77,360 ವಿದ್ಯುತ್ ಬಿಲ್ ಬಾಕಿ ಉಳಿದಿತ್ತು ಎನ್ನಲಾಗಿದೆ. ಬಾಕಿ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ಗುರುವಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.
ಇದರಿಂದ ಆಕ್ರೋಶಗೊಂಡು ಶುಕ್ರವಾರ ಬೆಳಗ್ಗೆ ಎಇಇ ದೀಪಕ್ ಹಾಗೂ ಸೆಕ್ಷನ್ ಆಫೀಸರ್ ರಾಜು ಚವ್ಹಾಣ್ ಅವರನ್ನು ಕುವೆಂಪುನಗರದಲ್ಲಿರುವ ಚನ್ನರಾಜ್ ಹಟ್ಟಿಹೊಳಿ ಅವರ ನಿವಾಸಕ್ಕೆ ಕರೆಸಿಕೊಳ್ಳಲಾಗಿತ್ತು ಎನ್ನಲಾಗಿದೆ.
ಈ ವೇಳೆ ವಿದ್ಯುತ್ ಸಂಪರ್ಕ ಏಕೆ ಕಡಿತಗೊಳಿಸಲಾಗಿದೆ ಎಂದು ಪ್ರಶ್ನಿಸಿ ಅವಾಚ್ಯವಾಗಿ ನಿಂದಿಸಿ, ಎದೆ ಮೇಲಿನ ಶರ್ಟ್ ಹಿಡಿದು ಹಲ್ಲೆ ನಡೆಸಲಾಗಿದೆ ಎಂದು ಎಇಇ ದೀಪಕ್ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದಾರೆಯೇ ಹಾಗೂ ಪೊಲೀಸರು ಕೈಗೊಂಡಿರುವ ಕ್ರಮವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.



