2013ರಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ತಮ್ಮ ಅಪರಾಧ ಸಾಬೀತಾಗಿರುವುದನ್ನು ಹಾಗೂ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿರುವ ‘ರಾಜಸ್ಥಾನ ಹೈಕೋರ್ಟ್’ ತೀರ್ಪನ್ನು ಪ್ರಶ್ನಿಸಿ, ಸ್ವಯಂಘೋಷಿತ ದೇವಮಾನವ ಆಸಾರಾಮ್ ಬಾಪು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ವಿಚಾರಣೆ ನಡೆಸಿದ್ದು, ಎರಡು ವಾರಗಳೊಳಗೆ ತನ್ನ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜಸ್ಥಾನ ಸರ್ಕಾರಕ್ಕೆ ಸೂಚನೆ ನೀಡಿದೆ.
ವಿಚಾರಣೆ ವೇಳೆ ಆಸಾರಾಮ್ ಪರ ವಕೀಲರು ಜಾಮೀನಿಗಾಗಿ ಮನವಿ ಮಾಡಿದರು. ಆದರೆ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ ಪೀಠವು, “ನಾವು ಸದ್ಯಕ್ಕೆ ಯಾವುದೇ ಜಾಮೀನು ನೀಡುತ್ತಿಲ್ಲ. ರಾಜ್ಯ ಸರ್ಕಾರದ ವಾದವನ್ನು ಆಲಿಸಿದ ನಂತರವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಒಂದು ವೇಳೆ ಅವರ ಜೀವಕ್ಕೆ ಅಪಾಯವಿದೆ ಎಂಬಂತಹ ಗಂಭೀರ ಪರಿಸ್ಥಿತಿ ಇದ್ದರೆ ಮಾತ್ರ ಜಾಮೀನು ನೀಡುವ ಬಗ್ಗೆ ಪರಿಗಣಿಸಲಾಗುವುದು” ಎಂದು ಮೌಖಿಕವಾಗಿ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ಕೃತಕ ಬುದ್ಧಿಮತ್ತೆಯೆಂಬ ಹೊಸ ಗುಲಾಮಗಿರಿ: ‘ಎಐ’ಗೆ ಬೇಕು ಸಾಂವಿಧಾನಿಕ ಬಲ
ಮೇ 27ರಂದು ತೀರ್ಪು ನೀಡಿದ್ದ ರಾಜಸ್ಥಾನ ಹೈಕೋರ್ಟ್, ಆಸಾರಾಮ್ ಮೇಲಿನ ಅತ್ಯಾಚಾರ ಆರೋಪವನ್ನು ಹಾಗೂ ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ, ಭಾರತೀಯ ದಂಡ ಸಂಹಿತೆ ಮತ್ತು POCSO ಅಡಿಯಲ್ಲಿ ಹೊರಿಸಲಾಗಿದ್ದ ಸಾಮೂಹಿಕ ಅತ್ಯಾಚಾರ ಮತ್ತು ಗಂಭೀರ ಸ್ವರೂಪದ ಲೈಂಗಿಕ ದೌರ್ಜನ್ಯದ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಿತ್ತು. ಹೈಕೋರ್ಟ್‌ನ ಈ ತೀರ್ಪನ್ನು ಪ್ರಶ್ನಿಸಿ ಆಸಾರಾಮ್ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ತನ್ನದೇ ಆಶ್ರಮದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಏಪ್ರಿಲ್ 25ರಂದು ಆಸಾರಾಮ್ ಅವರನ್ನು ದೋಷಿ ಎಂದು ಘೋಷಿಸಲಾಗಿತ್ತು. ಐಪಿಸಿ, ಪೋಕ್ಸೊ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆಯ ವಿವಿಧ ಕಠಿಣ ನಿಬಂಧನೆಗಳ ಅಡಿಯಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಪ್ರಸ್ತುತ ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.




