ರಾಮಮಂದಿರ ನಿರ್ಮಾಣಕ್ಕೆಂದು ಸಂಗ್ರಹಿಸಿದ ದೇಣಿಗೆ ಹಣ ಮತ್ತು ಭಕ್ತರು ಸಲ್ಲಿಸಿದ್ದ ಹುಂಡಿ ಹಣ ಹಗರಣ ಇದೀಗ ಉತ್ತರ ಪ್ರದೇಶದಿಂದ ಕರ್ನಾಟಕದವರೆಗೂ ಹಬ್ಬಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚೊಂಡೊರಿ ಗ್ರಾಮದ ಮಾಜಿ ಪಂಚಾಯತ್ ಅಧ್ಯಕ್ಷ ದೀಪಕ್ ಅವರು ಉತ್ತರ ಪ್ರದೇಶದ ವಿಶೇಷ ತನಿಖಾ ದಳಕ್ಕೆ (SIT) ನೀಡಿರುವ ದೂರು, ಭಾರಿ ಸಂಚಲನ ಮೂಡಿಸಿದೆ.
ದೂರುದಾರ ದೀಪಕ್ ಅವರು, ಬಿಜೆಪಿ ಶಾಸಕ ಪ್ರಭು ಚೌಹಾಣ್ ಮತ್ತು ಆರ್‌ಎಸ್‌ಎಸ್ ಮುಖಂಡ ಗೋಪಾಲ್ ರಾವ್ ಅವರ ನೇತೃತ್ವದಲ್ಲಿ ಈ ಅವ್ಯವಹಾರ ನಡೆದಿದೆ. ರಾಮಮಂದಿರಕ್ಕೆ ದೇಣಿಗೆ ನೀಡುವಂತೆ ಗುತ್ತಿಗೆದಾರರಿಗೆ ಒತ್ತಡ ಹೇರಿ, ತಲಾ 5 ಲಕ್ಷ ರೂಪಾಯಿಗಳಂತೆ ಬೃಹತ್ ಮೊತ್ತವನ್ನು ವಸೂಲಿ ಮಾಡಲಾಗಿದೆ. ಆದರೆ, ಹೀಗೆ ಸಂಗ್ರಹವಾದ ಹಣಕ್ಕೆ ಯಾವುದೇ ಅಧಿಕೃತ ರಶೀದಿಗಳನ್ನು ನೀಡಿಲ್ಲ. ಅಷ್ಟೇ ಅಲ್ಲ, ಸಂಗ್ರಹವಾದ ಕೋಟಿಗಟ್ಟಲೆ ಹಣ ರಾಮಮಂದಿರ ಟ್ರಸ್ಟ್‌ಗೆ ತಲುಪಲೇ ಇಲ್ಲ” ಎಂದು ಆರೋಪಿಸಿದ್ದಾರೆ. ಈ ಹಣವನ್ನು ಸ್ಥಳೀಯವಾಗಿ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಹೂಡಿಕೆ ಮಾಡಲಾಗಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ ಎಂದು ದೀಪಕ್ ಸ್ಪಷ್ಟಪಡಿಸಿದ್ದಾರೆ.
ಈ ಹಗರಣದಲ್ಲಿ ರಾಜಕೀಯ ಮುಖಂಡರ ಜೊತೆಗೆ ಅನೇಕ ಸ್ಥಳೀಯ ಪ್ರಭಾವಿಗಳು, ಗುತ್ತಿಗೆದಾರರು ಮತ್ತು ರಾಜಕೀಯ ಬೆಂಬಲಿಗರು ಸಕ್ರಿಯರಾಗಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಕರಣದ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, “ರಾಮಮಂದಿರ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರ. ಇಲ್ಲಿ ಇಂತಹ ಅವ್ಯವಹಾರಗಳು ನಡೆಯಬಾರದು. ಆರೋಪಗಳಲ್ಲಿ ಸತ್ಯವಿದ್ದರೆ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲೇಬೇಕು” ಎಂದಿದ್ದರು.
ದೇಣಿಗೆ ನೀಡುವವರು ಕಡ್ಡಾಯವಾಗಿ ರಶೀದಿ ಪಡೆಯಬೇಕು. ರಶೀದಿ ನೀಡದಿರುವುದು ಗಂಭೀರ ತಪ್ಪು. ಕೇವಲ ಬಾಯಿಮಾತಿನ ಹೇಳಿಕೆಗಿಂತ ದಾಖಲೆಗಳಿಗೆ ಮಹತ್ವವಿದೆ. ಸಂಬಂಧಪಟ್ಟವರು ವಿಶ್ವಾಸಾರ್ಹರಾಗಿರಬೇಕು. ಜುಲೈನಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದ್ದು, ಸತ್ಯಾಸತ್ಯತೆ ತಿಳಿದು ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.
ಪೇಜಾವರರ ಈ ನಿಲುವನ್ನು ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ಭಿನ್ನವಾಗಿ ವಿಶ್ಲೇಷಿಸಲಾಗುತ್ತಿದೆ. ಒಂದು ಕಡೆ ಶ್ರೀಗಳು ತನಿಖೆಯ ಅಗತ್ಯವನ್ನು ಒತ್ತಿ ಹೇಳುತ್ತಿದ್ದರೆ, ಮತ್ತೊಂದೆಡೆ ಅವರ ಈ ಜಾಗರೂಕತೆಯ ಹೇಳಿಕೆಗಳು, “ಈ ಅವ್ಯವಹಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ” ಎಂದು ಸಾರ್ವಜನಿಕವಾಗಿ ತಮ್ಮನ್ನು ತಾವು ಅಂತರ ಕಾಯ್ದುಕೊಳ್ಳುವ ಪ್ರಯತ್ನವೇ” ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಟ್ರಸ್ಟ್‌ನ ಜವಾಬ್ದಾರಿಯುತ ಸ್ಥಾನದಲ್ಲಿರುವ ಶ್ರೀಗಳು ಇಂತಹ ಆರೋಪಗಳಿಂದ ತಮ್ಮನ್ನು ವೈಯಕ್ತಿಕವಾಗಿ ಮುಕ್ತಗೊಳಿಸಿಕೊಳ್ಳುವ ಮೂಲಕ, ಭವಿಷ್ಯದ ಕಾನೂನು ತೊಡಕುಗಳಿಂದ ದೂರ ಉಳಿಯಲು ಈ ರೀತಿ ಸ್ಪಷ್ಟೀಕರಣ ನೀಡಿದ್ದಾರೆಯೇ ಎಂಬ ಚರ್ಚೆಗಳು ಕೇಳಿಬರುತ್ತಿವೆ.
ಈ ದೂರಿನ ಕುರಿತು ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳು ಶಾಸಕ ಪ್ರಭು ಚೌಹಾಣ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು TOI ವರದಿ ಮಾಡಿದೆ.




