ಯುವಜನತೆ ಹಾಗೂ ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕ ಸಾಧಿಸುವ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣನಲ್ಲಿ ವಿನೂತನ ಸಂವಾದಕ್ಕೆ ಮುಂದಾಗಿದ್ದಾರೆ. “ನಾನು ನಿಮ್ಮ ಮಾತುಗಳನ್ನು ಕೇಳಲು ಇಲ್ಲಿದ್ದೇನೆ” ಎಂದು ಹೇಳುವ ಮೂಲಕ ಇಂದಿನ ಯುವ ಪೀಳಿಗೆಗೆ (Gen-Z) ಮುಕ್ತವಾಗಿ ಪ್ರಶ್ನೆಗಳನ್ನು ಕೇಳುವಂತೆ ಅವರು ಆಹ್ವಾನ ನೀಡಿದ್ದಾರೆ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ‘ಸ್ಟೋರಿ’ಯಲ್ಲಿ (Instagram Story) ಈ ಕುರಿತು ಸಂದೇಶವೊಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, “ವಿದ್ಯಾರ್ಥಿಗಳು ಮತ್ತು ಜೆನ್-ಜಿ (Gen-Z) ಯುವಜನತೆಯೇ, ನಾನು ನಿಮ್ಮ ಮಾತುಗಳನ್ನು ಆಲಿಸಲು ಇಲ್ಲಿದ್ದೇನೆ. ಇನ್‌ಸ್ಟಾಗ್ರಾಮ್‌ನಲ್ಲಿ ನೀವು ನನ್ನನ್ನು ಏನೇ ಪ್ರಶ್ನೆಗಳಿದ್ದರೂ ಕೇಳಬಹುದು. ನೀವು ಕೇಳುವ ಸಾಧ್ಯವಾದಷ್ಟು ಹೆಚ್ಚಿನ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಸಾರ್ವಜನಿಕರು ಪ್ರಶ್ನೆಗಳನ್ನು ಕೇಳಲು ಅನುಕೂಲವಾಗುವಂತೆ ಲಿಂಕ್ ಅನ್ನು ಸಹ ಅವರು ಒದಗಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವ ಮತದಾರರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ದನಿಯಾಗಲು ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಯುವಜನರನ್ನು ಕಾಡುತ್ತಿರುವ ನಿರುದ್ಯೋಗ, ಶಿಕ್ಷಣ ವ್ಯವಸ್ಥೆಯಲ್ಲಿನ ಸವಾಲುಗಳು ಹಾಗೂ ಭವಿಷ್ಯದ ಆತಂಕಗಳ ಬಗ್ಗೆ ನೇರವಾಗಿ ಅವರ ಕಡೆಯಿಂದಲೇ ಅರಿತುಕೊಳ್ಳಲು ‘ಆಸ್ಕ್ ಮಿ ಎನಿಥಿಂಗ್’ (Ask Me Anything – ಏನೇ ಬೇಕಾದರೂ ಕೇಳಿ) ಮಾದರಿಯ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ವಿದ್ಯಾರ್ಥಿ ಸಮುದಾಯದೊಂದಿಗೆ ಸಂವಹನ ನಡೆಸುವ ಈ ಪ್ರಯತ್ನವು ಯುವಜನರಲ್ಲಿ ಕುತೂಹಲ ಮೂಡಿಸಿದ್ದು, ಇನ್‌ಸ್ಟಾಗ್ರಾಮ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ತಮ್ಮ ಪ್ರಶ್ನೆಗಳನ್ನು ಕಳುಹಿಸುವ ನಿರೀಕ್ಷೆಯಿದೆ.




