80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ‘ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ–2026: 80 ತ್ಯಾಜ್ಯಮುಕ್ತ ತಾಣಗಳು’ ಕಾರ್ಯಕ್ರಮದ ಭಾಗವಾಗಿ ಬುಧವಾರ ಬೆಳಿಗ್ಗೆ ನಗರದ ಚಿಕ್ಕ ವೀರಣ್ಣ ರಸ್ತೆ (ಸಿ.ವಿ. ರಸ್ತೆ) ಪ್ರದೇಶದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ದೀರ್ಘಕಾಲದಿಂದ ಅನಧಿಕೃತವಾಗಿ ಸಂಗ್ರಹಿಸಲಾಗಿದ್ದ ಮಿಶ್ರ ತ್ಯಾಜ್ಯ, ಹಳೆಯ ವಸ್ತುಗಳು, ಲೋಹದ ಅವಶೇಷಗಳು, ಪ್ಲಾಸ್ಟಿಕ್, ಕಟ್ಟಡ ಅವಶೇಷಗಳು ಸೇರಿದಂತೆ ವಿವಿಧ ರೀತಿಯ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಈ ವೇಳೆ ಒಟ್ಟು ಸುಮಾರು 83 ಟನ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.
ಸ್ವಚ್ಛತಾ ಕಾರ್ಯಕ್ಕಾಗಿ 5 ಬ್ಯಾಕ್‌ಹೋ ಲೋಡರ್‌ಗಳು, 10 ಟಿಪ್ಪರ್ ವಾಹನಗಳು ಬಳಸಿಕೊಳ್ಳಲಾಯಿತು. ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆ ಬದಿಯಲ್ಲಿದ್ದ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಿ, ಸುಗಮ ಸಂಚಾರ ಮತ್ತು ಸ್ವಚ್ಛ ಪರಿಸರ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಪ್ರದೇಶದಲ್ಲಿರುವ ಅಂಗಡಿ ಮಾಲೀಕರು, ಗುಜರಿ ವ್ಯಾಪಾರಿಗಳು, ಲೋಹದ ಕೆಲಸದ ಮಳಿಗೆಗಳು ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳಿಗೆ ತ್ಯಾಜ್ಯವನ್ನು ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸುರಿಯದಂತೆ ಅಧಿಕಾರಿಗಳು ಸೂಚನೆ ನೀಡಿದರು. ವ್ಯಾಪಾರ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ರತ್ಯೇಕಿಸಿ, ಮಹಾನಗರ ಪಾಲಿಕೆ ಸೂಚಿಸಿರುವ ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿಯುವುದು ಅಥವಾ ಅತಿಕ್ರಮಣ ನಡೆಸುವುದು ಕಂಡುಬಂದಲ್ಲಿ ನಿಯಮಾನುಸಾರ ದಂಡ ವಿಧಿಸುವುದರೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಮಾನವೀಯತೆಗೂ SIRಗೂ ಸಂಬಂಧವೇನು? ಪ್ರಜಾಪ್ರಭುತ್ವದ ಹಕ್ಕು, ದಾಖಲೆಗಳ ಗೊಂದಲ-ಉತ್ತರ ಸಿಗದ ಪ್ರಶ್ನೆಗಳು
ಸ್ವಚ್ಛಗೊಳಿಸಲಾದ ಪ್ರದೇಶದಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ ನಿರಂತರ ನಿಗಾ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಸ್ಥರು ಪ್ರದೇಶದ ಸ್ವಚ್ಛತೆ ಕಾಪಾಡಲು ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಲಾಯಿತು.
ವಿಶೇಷ ಸುದ್ದಿ ಓದಿದ್ದೀರಾ?ಚಾಮರಾಜನಗರ ಜಿಲ್ಲೆಯ ‘SIR’ ಪ್ರಕ್ರಿಯೆ ಅಂಕಿಅಂಶಗಳ ಸಾಧನೆಯೋ, ಪ್ರಜಾಪ್ರಭುತ್ವದ ಪರೀಕ್ಷೆಯೋ?
ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತೆ ಸವಿತಾ ಎಂ.ಕೆ., ಹೆಚ್ಚುವರಿ ಆಯುಕ್ತೆ ವೀಣಾ, ಪಾಲಿಕೆ ಅಧೀಕ್ಷಕ ಅಭಿಯಂತರ ಸಿಂಧು, ಮುಖ್ಯ ಲೆಕ್ಕಾಧಿಕಾರಿ ಶ್ವೇತಾ, ಕಾರ್ಯಪಾಲಕ ಅಭಿಯಂತರರಾದ ಮೃತ್ಯುಂಜಯ (ಪರಿಸರ), ಶ್ರೀನಿವಾಸ್ (ಸಿವಿಲ್), ಮೋಹನ್ (ಯುಜಿಡಿ) ಹಾಗೂ ದೀಪಕ್ (ವಿದ್ಯುತ್), ವಲಯ ಸಹಾಯಕ ಆಯುಕ್ತೆ ರತ್ನಾಂಬಿಕಾ ಸೇರಿದಂತೆ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿ, ಆರೋಗ್ಯ ನಿರೀಕ್ಷಕರು, ಮೇಲ್ವಿಚಾರಕರು, ಪೌರಕಾರ್ಮಿಕರು, ಸ್ಥಳೀಯ ನಿವಾಸಿಗಳು ಹಾಗೂ ಸಿ.ವಿ. ರಸ್ತೆ ನಿವಾಸಿಗಳ ಸಂಘದ ಪದಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.




