ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಕಾಣಿಕೆ ಹಣದ ದುರುಪಯೋಗ ಹಾಗೂ ಕಳವು ಪ್ರಕರಣದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ತೀವ್ರ ನೋವು ಮತ್ತು ಆಕ್ರೋಶ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಆಗ್ರಹಿಸಿದ್ದಾರೆ.
ಈ ದುರದೃಷ್ಟಕರ ಘಟನೆಯನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಸಮಾಜ ಮತ್ತು ಧರ್ಮವನ್ನು ಹಳಿಯಲು ಯತ್ನಿಸುತ್ತಿರುವ ‘ಹಿಂದೂ ವಿರೋಧಿ ಹಾಗೂ ದೇಶ ವಿರೋಧಿ ಶಕ್ತಿಗಳ’ ಪಿತೂರಿಗಳ ಬಗ್ಗೆ ಸಮಾಜ ಎಚ್ಚರದಿಂದಿರಬೇಕು. ಈ ಕಠಿಣ ಸಮಯದಲ್ಲಿ ಹಿಂದೂ ಸಮಾಜವು ಅಗತ್ಯ ಸಂಯಮ ಮತ್ತು ತಾಳ್ಮೆಯನ್ನು ಕಾಯ್ದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ‘ಎಕ್ಸ್’ ಜಾಲತಾಣದಲ್ಲಿ ಬಿಡುಗಡೆ ಮಾಡಲಾದ ವಿಡಿಯೊ ಸಂದೇಶದಲ್ಲಿ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
“ಹಲವು ತಲೆಮಾರುಗಳ ಸುದೀರ್ಘ ಹೋರಾಟ, ಕೋಟ್ಯಂತರ ರಾಮಭಕ್ತರ ತ್ಯಾಗ ಮತ್ತು ಬಲಿದಾನದ ಫಲವಾಗಿ ನಿರ್ಮಾಣವಾಗಿರುವ ಶ್ರೀರಾಮ ಜನ್ಮಭೂಮಿಯ ಭವ್ಯ ಮಂದಿರವು ಇಡೀ ಹಿಂದೂ ಸಮಾಜದ ಶ್ರದ್ಧೆ, ನಂಬಿಕೆ ಮತ್ತು ಭಕ್ತಿಯ ಕೇಂದ್ರವಾಗಿದೆ. ಆದರೆ, ಶ್ರೀ ಬಾಲರಾಮ (ರಾಮ್ ಲಲ್ಲಾ) ಮಂದಿರದ ಹುಂಡಿಗಳಲ್ಲಿನ ಕಾಣಿಕೆ ಕಳವು ಪ್ರಕರಣವು ಇಡೀ ಸಮಾಜ ಮತ್ತು ರಾಮಭಕ್ತರ ಭಾವನೆಗಳಿಗೆ ತೀವ್ರ ಘಾಸಿ ಉಂಟುಮಾಡಿದೆ. ಈ ಘಟನೆಯಿಂದ ನಮಗೆಲ್ಲರಿಗೂ ತೀವ್ರ ನೋವು ಮತ್ತು ಆಕ್ರೋಶ ಉಂಟಾಗಿದೆ” ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಕೋರಿಕೆಯ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸಿ, ಅದರ ಶಿಫಾರಸುಗಳ ಆಧಾರದ ಮೇಲೆ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿರುವುದನ್ನು ಆರೆಸ್ಸೆಸ್ ಸ್ವಾಗತಿಸಿದೆ. ಸಮಗ್ರ ತನಿಖೆಯ ನಂತರ ದೋಷಿಗಳೆಂದು ಸಾಬೀತಾಗುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಅಹಿತಕರ ಘಟನೆಯನ್ನು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಮಂದಿರದ ಆಡಳಿತ ಮತ್ತು ನಿರ್ವಹಣೆಯಲ್ಲಿರುವ ಲೋಪಗಳನ್ನು ಸರಿಪಡಿಸಲು ತ್ವರಿತ ಹಾಗೂ ಪರಿಣಾಮಕಾರಿ ಹೆಜ್ಜೆಗಳನ್ನು ಇಡಬೇಕು. ದೋಷರಹಿತ, ಪಾರದರ್ಶಕ ಆರ್ಥಿಕ ನಿರ್ವಹಣೆ ಮತ್ತು ಶುದ್ಧ ಕಾರ್ಯಾಚರಣೆಯ ಮೂಲಕ ಕೋಟ್ಯಂತರ ಭಕ್ತರ ನಂಬಿಕೆಯನ್ನು ಟ್ರಸ್ಟ್ ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ. ಸದ್ಯ ಉಂಟಾಗಿರುವ ಗೊಂದಲಗಳಿಗೆ ಶೀಘ್ರವೇ ತೆರೆ ಎಳೆಯುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ರಾಮಮಂದಿರದಲ್ಲಿ ಕಾಣಿಕೆ ಹಣದ ದುರುಪಯೋಗವಾಗಿರುವ ವಿಚಾರವು ಜೂನ್ 7 ರಂದು ಬೆಳಕಿಗೆ ಬಂದಿತ್ತು. ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ಎಸ್‌ಐಟಿಯ ಪ್ರಾಥಮಿಕ ವರದಿಯ ಆಧಾರದ ಮೇಲೆ ಜೂನ್ 25 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಆರು ಜನರಿಂದ ಸುಮಾರು ₹80 ಲಕ್ಷ ನಗದು ಮತ್ತು ಕೆಲ ವಿದೇಶಿ ಕರೆನ್ಸಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.




