ಸೂರತ್‌ನ ನಾರಿಸ್‌ನಗರ ಪ್ರದೇಶದಲ್ಲಿ ನಡೆಸಲಾದ ಅಕ್ರಮ ಧ್ವಂಸ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರದ ನಿಲುವನ್ನು ಕೇಳಿದೆ. ಹಾಗೆಯೇ ಮನೆ ಕಳೆದುಕೊಂಡ 100ಕ್ಕೂ ಅಧಿಕ ಕುಟುಂಬಗಳಿಗೆ ಆ ಸ್ಥಳದಲ್ಲೇ ಅಥವಾ ಬೇರೆಡೆ ಮನೆ ನಿರ್ಮಿಸಿಕೊಡುವುದು ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (SMC) ನ ಕರ್ತವ್ಯ ಎಂದು ಹೈಕೋರ್ಟ್ ಆದೇಶಿಸಿದೆ.
ಮೇ 30ರಂದು ಸೂರತ್‌ನ ನಾಸಿರ್ ನಗರ ಕೊಳೆಗೇರಿ ಪ್ರದೇಶದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಸುಮಾರು 100ರಿಂದ 150 ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ಧ್ವಂಸಗೊಳಿಸಲಾಗಿತ್ತು. ಈ ವಿವಾದಾತ್ಮಕ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೂರತ್ ಮಹಾನಗರ ಪಾಲಿಕೆಯು ಈಗಾಗಲೇ ಐವರು ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: ಸೂರತ್ | 100ಕ್ಕೂ ಹೆಚ್ಚು ಗುಡಿಸಲುಗಳು ಧ್ವಂಸ: ಪಾಲಿಕೆ – ಪೊಲೀಸರ ನಡುವೆ ಕೆಸರೆರಚಾಟ!
ಮನೆ ಕಳೆದುಕೊಂಡವರ ಪೈಕಿ ಸುಮಾರು 26 ಮಂದಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಿಖಿಲ್ ಕರಿಯೆಲ್ ಅವರ ಪೀಠವು ಕೆಡವಿದ ಮನೆಗಳನ್ನು ಮತ್ತೆ ಕಟ್ಟಿಕೊಡುವಂತೆ ಆದೇಶವನ್ನು ಹೊರಡಿಸಿದೆ.
“ಮನೆಗಳನ್ನು ಕಾನೂನುಬಾಹಿರವಾಗಿ ಕೆಡವಲಾಗಿದೆ ಎಂಬುದು ಸ್ಪಷ್ಟವಾಗಿದೆ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ಮನೆಗಳನ್ನು ಮರುನಿರ್ಮಾಣ ಮಾಡಿಕೊಡುವುದು ಈಗ ಪಾಲಿಕೆಯ ಕರ್ತವ್ಯ. ಸಂತ್ರಸ್ತರಿಗೆ ವಸತಿ ಒದಗಿಸುವ ಕುರಿತು ಸಿದ್ಧಪಡಿಸಿದ ಯೋಜನೆಯನ್ನು ಒಳಗೊಂಡ ಅಫಿಡವಿಟ್ ಅನ್ನು ಜುಲೈ 9ರ ಒಳಗಾಗಿ ಕೊರ್ಟ್‌ಗೆ ಸಲ್ಲಿಸಬೇಕು” ಎಂದು ಸೂರತ್ ಮುನ್ಸಿಪಲ್ ಕಮಿಷನರ್‌ಗೆ ಹೈಕೋರ್ಟ್ ಸೂಚಿಸಿದೆ.
ಇನ್ನು ರಸ್ತೆ ಗುರುತಿಸುವಿಕೆ (Demarcation) ಹೆಸರಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಧ್ವಂಸ ಕಾರ್ಯ ನಡೆಯುತ್ತಿದ್ದರೂ ಮೂಕಪ್ರೇಕ್ಷಕರಾಗಿದ್ದ ಪೊಲೀಸರ ಮತ್ತು ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನು ಹೈಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ ಮತ್ತು ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಸೂಚಿಸಿದೆ.
ಇದನ್ನೂ ಓದಿ: ಸೂರತ್ | ಕುಡಿಯುವ ನೀರಿಗೆ ವಿಷ; 118 ಕಾರ್ಮಿಕರ ಹತ್ಯೆಗೆ ಯತ್ನ ಆರೋಪ
ಈ ಸ್ಥಳದಲ್ಲಿ ವಾಸಿಸುತ್ತಿದ್ದವರು ಯಾರು?
ಈ ಸ್ಥಳದಲ್ಲಿ ಅಸಂಘಟಿತ ವಲಯದ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ಕೆಳ ಮಧ್ಯಮ ವರ್ಗದ ಮುಸ್ಲಿಂ ಸಮುದಾಯದ ಕುಟುಂಬಗಳು ವಾಸಿಸುತ್ತಿದ್ದರು. ಇಲ್ಲಿ ವಾಸಿಸುತ್ತಿದ್ದ ಅನೇಕ ಕುಟುಂಬಗಳು ಸುಮಾರು 35 ರಿಂದ 50 ವರ್ಷಗಳಿಂದ (ನಾಲ್ಕರಿಂದ ಐದು ದಶಕಗಳು) ಅದೇ ಸ್ಥಳದಲ್ಲಿ ನೆಲೆಸಿದ್ದವು. ನಿವಾಸಿಗಳು ಹೆಚ್ಚಾಗಿ ದಿನಗೂಲಿ ದುಡಿಮೆ ನಂಬಿದ ಬಡವರು ಮತ್ತು ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದರು.
ಈ ಹಠಾತ್ ಧ್ವಂಸ ಕಾರ್ಯಾಚರಣೆಯಿಂದಾಗಿ ರಾತ್ರೋರಾತ್ರಿ ನೂರಕ್ಕೂ ಅಧಿಕ ಬಡ ಕುಟುಂಬ ಬೀದಿಪಾಲಾಗಿದೆ. ಈ ಧ್ವಂಸ ಪ್ರಕರಣವು ಸಾಮಾಜಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರಂಭದಲ್ಲಿ ಯಾವುದೇ ಸರ್ಕಾರಿ ಸಂಸ್ಥೆಯೂ ಈ ಧ್ವಂಸ ಕಾರ್ಯಾಚರಣೆಯ ಹೊಣೆಯನ್ನು ಹೊತ್ತುಕೊಳ್ಳದ ಕಾರಣ ಇದನ್ನು ಮಾಧ್ಯಮಗಳು ‘ಘೋಸ್ಟ್ ಡೆಮೊಲಿಷನ್’ (Ghost Demolition) ಎಂದು ಕರೆದಿದೆ.




