ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಅವರ ಮಗನನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಈ ಘಟನೆಯು ಇಡೀ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಮತ್ತು ಆತಂಕವನ್ನು ಸೃಷ್ಟಿಸಿದೆ.
ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯ, ನಾಡಿಯಾ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದ 50 ವರ್ಷದ ಅನೀಸುರ್ ರಹಮಾನ್ ಮತ್ತು ಅವರ ಪುತ್ರ ಅಬು ಸುಫಿಯಾನ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ತಂದೆ-ಮಗ ಇಬ್ಬರೂ ಬೆತುದಹರಿಯಿಂದ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ನಗಡಿ ರೈಲ್ವೇ ಗೇಟ್ ಬಳಿ ಮುಖವಾಡ ಧರಿಸಿದ್ದ ದುಷ್ಕರ್ಮಿಗಳು ಅವರ ಕಾರನ್ನು ತಡೆದು ಗುಂಡಿನ ದಾಳಿ ನಡೆಸಿದ್ದಾರೆ. ಆ ಬಳಿಕ ಮಾರಕ ಆಯುಧಗಳಿಂದ ತೀವ್ರವಾಗಿ ಹಲ್ಲೆಗೈದಿದ್ದಾರೆ. ತೀವ್ರವಾಗಿ ಗಾಯಗೊಂಡ ತಂದೆ-ಮಗ ಇಬ್ಬರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತ ಅನೀಸುರ್ ರಹಮಾನ್ ಅವರು ನಕಾಶಿಪಾರ ಪ್ರದೇಶದಲ್ಲಿ ದೀರ್ಘಕಾಲದಿಂದ ಕಾಂಗ್ರೆಸ್ ಪಕ್ಷದ ವಿವಿಧ ಸಾಂಸ್ಥಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದ ಹಿರಿಯ ನಾಯಕರಾಗಿದ್ದರು.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಹಂತಕರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
ಈ ಭೀಕರ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಲೋಕಸಭಾ ಸಂಸದ ಅಧೀರ್ ರಂಜನ್ ಚೌಧರಿ, ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲೇ ಇಂತಹ ದೌರ್ಜನ್ಯ ನಡೆದದ್ದು ರಾಜ್ಯದಲ್ಲಿ ಸಾರ್ವಜನಿಕರ ಭದ್ರತೆ ಮತ್ತು ಮುಕ್ತವಾಗಿ ರಾಜಕೀಯ ಮಾಡುವ ಹಕ್ಕಿನ ಮೇಲೆಯೇ ದೊಡ್ಡ ಪ್ರಶ್ನೆ ಮೂಡಿಸಿದೆ ಎಂದು ಟೀಕಿಸಿದ್ದಾರೆ. ಘಟನೆಯ ಕುರಿತು ತಕ್ಷಣವೇ ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.



