ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ಬಿಸಿಯಾಗಿರುವ ಸಮಯದಲ್ಲೇ, ಬಂಗಾಳದವರೇ ಆದ ಭಾರತದ ಟೆನ್ನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರು ಬಿಜೆಪಿ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ತಮಗೆ ಪೂರ್ಣ ವಿಶ್ವಾಸವಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಇತರ ಪಕ್ಷದ ನಾಯಕರ ಸಮ್ಮುಖದಲ್ಲಿ ಲಿಯಾಂಡರ್ ಬಿಜೆಪಿಗೆ ಸೇರಿದ್ದಾರೆ. ಅವರನ್ನು ಬಿಜೆಪಿಗೆ ಸ್ವಾಗತಿಸಿದ ರಿಜಿಜು, ಲಿಯಾಂಡರ್ ಅವರ ಸುದೀರ್ಘ ಟೆನ್ನಿಸ್ ವೃತ್ತಿಜೀವನ, ಒಲಿಂಪಿಕ್ ಸಾಧನೆಗಳು ಹಾಗೂ ದೇಶಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
“ಟೆನ್ನಿಸ್‌ನಲ್ಲಿ ಅದ್ಭುತ ಇನಿಂಗ್ಸ್ ಮುಗಿಸಿದ ನಂತರ ಅವರು ಈಗ ಸಾರ್ವಜನಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ” ಎಂದು ರಿಜಿಜು ಹೇಳಿದ್ದಾರೆ.
“ಬಿಜೆಪಿ ಸೇರಿರುವುದು ಒಂದು ಮಹತ್ವದ ಕ್ಷಣ. ದೇಶದಾದ್ಯಂತ ಮಕ್ಕಳು ಮತ್ತು ಯುವಕರ ಸಬಲೀಕರಣಕ್ಕಾಗಿ ಕೆಲಸ ಮಾಡುವುದು ನನ್ನ ಗುರಿ. ಭಾರತವು ಬೃಹತ್ ಯುವ ಜನಸಂಖ್ಯೆಯನ್ನು ಹೊಂದಿದ್ದು, ಜಾಗತಿಕ ಸೂಪರ್ ಪವರ್ ಆಗಿ ಹೊರಹೊಮ್ಮಲು ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವತ್ತ ಗಮನ ಹರಿಸಬೇಕು” ಎಂದು ಲಿಯಾಂಡರ್ ಹೇಳಿದ್ದಾರೆ.
ಅಂದಹಾಗೆ, ಲಿಯಾಂಡರ್ ಅವರು 2021ರಲ್ಲಿ ಟಿಎಂಸಿಗೆ ಸೇರಿದ್ದರು. 2022ರ ಗೋವಾ ಚುನಾವಣೆಯ ಸಮಯದಲ್ಲಿ ಟಿಎಂಸಿ ಪರವಾಗಿ ಪ್ರಚಾರ ಮಾಡಿದ್ದರು. ಆದರೆ, ಅವರು ಈವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಇದೀಗ, ಅವರು ಬಿಜೆಪಿ ಪಾಲಾಗಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯ ನಂತರ, ಯಾವುದೇ ಸ್ಥಾನ ಖಾಲಿಯಾದಲ್ಲಿ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಅವರು ಬಿಜೆಪಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ತನ್ನ ಪ್ರಚಾರ ಕಾರ್ಯವನ್ನು ತೀವ್ರಗೊಳಿಸುತ್ತಿರುವ ಸಮಯದಲ್ಲಿ ಲಿಯಾಂಡರ್ ಅವರು ಬಿಜೆಪಿಗೆ ಬಂದಿದ್ದಾರೆ.



