ಕನ್ನಡವು ವಿಶಾಲವಾದ ಭಾಷೆಯಾಗಿದೆ. ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಿದೆ. ಕನ್ನಡ ಶಾಲೆಗಳನ್ನು ಉಳಿಸಿ ಮಕ್ಕಳಲ್ಲಿ ಕನ್ನಡ ಭಾಷೆಯ ಮಹತ್ವದ ಅರಿವನ್ನು ಮೂಡಿಸಬೇಕಿದೆ ಎಂದು ಖ್ಯಾತ ಹೃದ್ರೋಗ ತಜ್ಞೆ ಮತ್ತು ಸಾಹಿತಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಯುವ ಬೆಂಗಳೂರು ಟ್ರಸ್ಟ್ ಆಯೋಜಿಸಿದ್ದ ಮಕ್ಕಳ ಕನ್ನಡ ಕವಿಗೋಷ್ಠಿ, ಕನ್ನಡ ಸಾಹಿತ್ಯ ಮತ್ತು ಕಾವ್ಯ ಪ್ರತಿಭೆಯ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೊಬೈಲ್ ಹಿಡಿದಿರುವ ಮಕ್ಕಳನ್ನು ಸಾಹಿತ್ಯದೆಡೆಗೆ ತಿರುಗಿಸುವ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಸಂಸ್ಥೆಯ ಸ್ಥಾಪಕರಾದ ಕಿರಣ್ ಜಿ. ಸಾಗರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿ ಶ್ವೇತ ಎಸ್. ರಾವ್, ಸುನೀಲ್, ರಾಹುಲ್ ಭಾಗವಹಿಸಿದ್ದರು.
ಯುವ ಬೆಂಗಳೂರು ಟ್ರಸ್ಟ್ ಹಲವಾರು ವರ್ಷಗಳಿಂದ ಮಕ್ಕಳಲ್ಲಿ ಕನ್ನಡ ಭಾಷೆಯ ಜಾಗೃತಿ ಮೂಡಿಸುವ ಸಲುವಾಗಿ ಕನ್ನಡ ಪರ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಈ ಬಾರಿ ಶಾಲಾ ಮಕ್ಕಳಿಗಾಗಿ ಕವನ ಬರೆಯುವ ಸ್ಪರ್ಧೆ ಏರ್ಪಡಿಸಿದ್ದರು. ಸಾವಿರಾರು ಮಕ್ಕಳು ಇದರಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ನೂರು ಉತ್ತಮ ಕವನಗಳನ್ನು ಆಯ್ಕೆ ಮಾಡಿ ಸಮಾರಂಭದಲ್ಲಿ ವಾಚಿಸಲಾಯಿತು.
ಕವನ ವಾಚನಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರತಿ ವರ್ಷ ಯುವ ಬೆಂಗಳೂರು ಟ್ರಸ್ಟ್‌ವತಿಯಿಂದ ಕೊಡಲಾಗುವ ʻಕನ್ನಡ ರತ್ನʼ ಪ್ರಶಸ್ತಿಯನ್ನು ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರಿಗೆ ನೀಡಿ ಸನ್ಮಾನಿಸಲಾಯಿತು.


