ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.
12ನೇ ಶತಮಾನಕ್ಕಿಂತ ಪೂರ್ವ ಸಾಮಾಜಿಕ ಅಸಮಾನತೆ, ವರ್ಣವ್ಯವಸ್ಥೆ, ಧಾರ್ಮಿಕ ಕಂದಾಚಾರ, ಶೋಷಣೆ ಹಾಗೂ ರಾಜಶಕ್ತಿ ದಬ್ಬಾಳಿಕೆಯಿಂದ ಸಮಾಜ ನಲುಗುತ್ತಿದ್ದ ಕಾಲ. ಕಾಯಕಜೀವಿಗಳ ಬದುಕು ಅಸಹಾಯಕತೆಯ ಅಂಚಿನಲ್ಲಿತ್ತು. ಇಂತಹ ವಿಷಮ ಕಾಲಘಟ್ಟದಲ್ಲಿ ಬಸವಣ್ಣ ಕೇವಲ ಧಾರ್ಮಿಕ ಚಿಂತಕರಾಗಿ ಕಾಣಿಸಿಕೊಳ್ಳಲಿಲ್ಲ. ಅವರು ಸಾಮಾಜಿಕ ಸಂಘಟಕ, ಆರ್ಥಿಕ ಚಿಂತಕ, ವೈಚಾರಿಕ ಹೋರಾಟಗಾರ ಹಾಗೂ ಮಾನವತಾವಾದಿಗಳಾಗಿ ರೂಪುಗೊಂಡರು.
ಬಸವಣ್ಣ ಇಂದಿನ ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು. ಕಲ್ಯಾಣದಲ್ಲಿ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಸಾಮಾಜಿಕ ಅಸಮಾನತೆ ವಿರೋಧಿಸಿದ ಅವರು ʼಅನುಭವ ಮಂಟಪʼ ಪರಿಕಲ್ಪನೆ ಮುಖಾಂತರ ಸಮಾನತೆ, ಕಾಯಕ, ಭಕ್ತಿ, ದಯೆ, ಸ್ತೀ ಸಮಾನತೆ ತತ್ವ ಸಿದ್ಧಾಂತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ ಅವರು ಅದನ್ನು ಕಾರ್ಯಗತಗೊಳಿಸಲು ಶ್ರಮಿಸಿದರು. ʼಕೂಡಲಸಂಗಮದೇವʼ ಅಂಕಿತದಲ್ಲಿ ರಚಿಸಿದ ವಚನಗಳಲ್ಲಿ ಸಾಮಾಜಿಕ ಸಮಾನತೆ ಆಶಯಗಳನ್ನು ಒಳಗೊಂಡಿವೆ. ಬಸವಣ್ಣನವರನ್ನು ಕ್ರಾಂತಿಯೋಗಿ ಬಸವಣ್ಣ, ಜಗಜ್ಯೋತಿ ಬಸವೇಶ್ವರ, ಭಕ್ತಿ ಭಂಡಾರಿ, ವಿಶ್ವಗುರು ಬಸವಣ್ಣ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು, ಈಗ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರ್ಕಾರವೇ ಘೋಷಿಸಿದೆ.
ಬಸವಣ್ಣನವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಇಂದಿಗೂ ಅರ್ಥಪೂರ್ಣವಾಗಿವೆ. ಬಸವಣ್ಣನವರನ್ನು ಕೇವಲ ಪೂಜಿಸುವ ಬದಲು ಅವರ ವಿಚಾರಧಾರೆಗಳನ್ನು ಬದುಕಿನಲ್ಲಿ ಅನುಷ್ಠಾನಕ್ಕೆ ತಂದರೆ ಸಮಾನತೆ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣ ಸಾಧ್ಯ. ಆದರೆ, ಬಸವಣ್ಣನವರ ಹೆಸರನ್ನು ಮಾತ್ರ ಬಳಸಿಕೊಂಡು ಅವರ ಮೂಲ ತಾತ್ವಿಕ ಚಿಂತನೆಗಳನ್ನು ಕಡೆಗಣಿಸುವ ಪ್ರವೃತ್ತಿ ಆಶಯಕ್ಕೆ ವಿರುದ್ಧವಾಗಿದೆ.
ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ, ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ, ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ, ಎನ್ನನೇತಕ್ಕರಿುರಿ, ಕೂಡಲಸಂಗಯ್ಯಾ
ಬಸವಣ್ಣನವರನ್ನು ಕೇವಲ ಆಧ್ಯಾತ್ಮಿಕ ಗುರು ಎಂದು ಗುರುತಿಸುವುದು ಅವರ ವ್ಯಕ್ತಿತ್ವವನ್ನು ಸೀಮಿತಗೊಳಿಸಿದಂತಾಗುತ್ತದೆ. ಬಸವಣ್ಣ ಸಮೂಹ ಸಂಘಟಕ, ಸಾಮಾಜಿಕ ಚಿಂತಕ, ಆರ್ಥಿಕ ತಜ್ಞ ಹಾಗೂ ವೈಚಾರಿಕ ಹೋರಾಟಗಾರ ಕೂಡ ಹೌದು. ಅವರ ಚಿಂತನೆಯಲ್ಲಿ ಮನುಷ್ಯನ ವ್ಯಕ್ತಿತ್ವ ನಿರ್ಮಾಣದ ಆಶಯವೂ ಇದೆ. ಜಾತಿ, ವರ್ಣ, ವರ್ಗ, ಲಿಂಗದ ಆಧಾರದ ಮೇಲೆ ಮನುಷ್ಯನನ್ನು ವಿಭಜಿಸುವ ವ್ಯವಸ್ಥೆಯ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದರು. ತಳಸಮುದಾಯಕ್ಕೆ ಸೇರಿದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಅವರನ್ನು ʼಅಪ್ಪ-ಬೊಪ್ಪʼ ಎಂದ ಬಸವಣ್ಣ ಜಾತಿಯತೆಯ ಗೋಡೆ ಒಡೆದು ಸರ್ವಸಮಾನತೆ ತತ್ವ ಸಾರಿ ಹೇಳಿದರು ಎಂಬುದಕ್ಕೆ ಈ ಮೇಲಿನ ವಚನವೇ ಸಾಕ್ಷಿಯಾಗಿದೆ.
ಸಾಮಾಜಿಕ ಗೌರವ ಕೆಲವರಿಗೆ ಮಾತ್ರ ಸೀಮಿತವಾಗಿದ್ದ ವೇಳೆ, ಬಸವಣ್ಣ ಕಾರ್ಮಿಕರ ಪರವಾಗಿ ನಿಂತರು, ಶ್ರಮಿಕ ವರ್ಗದವರ ಕಾಯಕಕ್ಕೆ ಘನತೆ ಇದೆ ಎಂಬ ಹೊಸ ಬದುಕಿನ ದೃಷ್ಟಿಕೋನವನ್ನು ಮುಂದಿಟ್ಟರು. ಅದಕ್ಕಾಗಿ ಬಸವಣ್ಣನವರ ಕಾಯಕ ಚಳವಳಿಯನ್ನು ಕೇವಲ ಧಾರ್ಮಿಕ ಚಳವಳಿ ಎಂದು ಕರೆಯುವುದಕ್ಕಿಂತ, ಸಾಮಾಜಿಕ ಪರಿವರ್ತನೆಯ ಮಹತ್ವದ ಚಳವಳಿಯಾಗಿ ನೋಡುವ ಅಗತ್ಯವಿದೆ.
ಸಮಾಜದ ವಿವಿಧ ಸ್ತರಗಳ ಕಾಯಕಜೀವಿಗಳು ಶೋಷಣೆಗೆ ಒಳಗಾಗಿದ್ದ ಕಾಲದಲ್ಲಿ ಅವರನ್ನು ಒಗ್ಗೂಡಿಸುವ ಶಕ್ತಿಯಾಗಿ ಬಸವಣ್ಣನವರು ಕಾಯಕತತ್ವ ಮುಂದಿಟ್ಟರು. ‘ಕಾಯಕವೇ ಕೈಲಾಸ’ ಎಂಬ ಸಿದ್ಧಾಂತ ಕೇವಲ ದುಡಿಮೆಯ ಮಹತ್ವ ಹೇಳುವುದಲ್ಲ. ಶ್ರಮಿಕರ ಗೌರವ, ಸ್ವಾಭಿಮಾನ ಮತ್ತು ಸಾಮಾಜಿಕ ಸಮಾನತೆ ನೀಡುವ ತತ್ವವೂ ಹೌದು. ಯಾವ ಕೆಲಸವೂ ಕೀಳಲ್ಲ, ಕಾಯಕ ಮಾಡುವ ವ್ಯಕ್ತಿಯೂ ಕೀಳಲ್ಲ ಎಂಬ ಚಿಂತನೆ ಅಂದಿನ ಸಾಮಾಜಿಕ ವ್ಯವಸ್ಥೆಗೆ ಸವಾಲಾಗಿತ್ತು. ವೃತ್ತಿಯ ಆಧಾರದ ಮೇಲೆ ಮನುಷ್ಯನ ಮೌಲ್ಯ ನಿರ್ಧರಿಸುವ ವ್ಯವಸ್ಥೆಯ ಬದಲಿಗೆ ಕಾಯಕದ ಘನತೆ ಪ್ರತಿಪಾದಿಸಿದ್ದು ಬಸವಣ್ಣನವರ ಮಹತ್ವದ ಕೊಡುಗೆಯಾಗಿದೆ.
ಬಸವಣ್ಣನವರ ವೈಚಾರಿಕತೆ ಬೇರುಗಳನ್ನು ಅವರ ಬಾಲ್ಯದಲ್ಲಿಯೇ ಕಾಣಬಹುದು. ಅನಿಷ್ಠ ಪದ್ಧತಿ ಆಚರಣೆಗಳಲ್ಲಿನ ವೈರುಧ್ಯಗಳನ್ನು ಪ್ರಶ್ನಿಸಿದ ಅವರು ಕೂಡಲ ಸಂಗಮದ ಕಡೆಗೆ ತೆರಳಿದರು ಎಂಬ ಪರಂಪರೆಯ ಕಥನಗಳು ಅವರ ಪ್ರಶ್ನಿಸುವ ಮನೋಭಾವವನ್ನು ಬಿಂಬಿಸುತ್ತವೆ. ನಂತರ ಕಲ್ಯಾಣದಲ್ಲಿ ಅವರು ರೂಪಿಸಿದ ವಚನ ಚಳವಳಿಯು ವಿವಿಧ ಜಾತಿ, ವರ್ಗ ಮತ್ತು ವೃತ್ತಿಗಳ ಜನರನ್ನು ಒಂದೇ ವೇದಿಕೆಯಡಿ ತಂದಿತು. ಇದು ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಸವಾಲಿನ ಕೆಲಸವೂ ಆಗಿತ್ತು.
ನೀರ ಕಂಡಲ್ಲಿ ಮುಳುಗುವರಯ್ಯಾ, ಮರನ ಕಂಡಲ್ಲಿ ಸುತ್ತುವರಯ್ಯಾ. ಬತ್ತುವ ಜಲವ, ಒಣಗುವ ಮರನ ಮಚ್ಚಿದವರು ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.
ಬಸವಣ್ಣನವರ ಸಾಮಾಜಿಕ ಚಿಂತನೆಯ ಮತ್ತೊಂದು ಪ್ರಮುಖ ಆಯಾಮ ಅನುಭವ ಮಂಟಪ. ವಿವಿಧ ಕಾಯಕಗಳಲ್ಲಿ ತೊಡಗಿದ್ದ ಶರಣರು ತಮ್ಮ ಬದುಕಿನ ಅನುಭವ, ಚಿಂತನೆ ಮತ್ತು ಪ್ರಶ್ನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವೇದಿಕೆಯಾಗಿ ಅನುಭವ ಮಂಟಪ ರೂಪುಗೊಂಡಿತು. ಜಾತಿ, ಲಿಂಗ, ವೃತ್ತಿ ಅಥವಾ ಸಾಮಾಜಿಕ ಸ್ಥಾನಮಾನಕ್ಕಿಂತ ಅನುಭವ ಮತ್ತು ಅರಿವಿಗೆ ಮಹತ್ವ ನೀಡಿದ ಈ ಪರಿಕಲ್ಪನೆ ವಿಶಿಷ್ಟವಾದುದು. ಶರಣರ ಬದುಕಿನ ಅನುಭವಗಳು ವಚನಗಳಾಗಿ ಹೊರಹೊಮ್ಮಿದವು. ಆ ವಚನಗಳು ಕೇವಲ ಧಾರ್ಮಿಕ ಭಕ್ತಿಯ ಅಭಿವ್ಯಕ್ತಿಗಳಾಗಿರದೆ, ಬದುಕಿನ ಮೌಲ್ಯ, ಸಾಮಾಜಿಕ ನ್ಯಾಯ, ಕಾಯಕ, ದಾಸೋಹ, ಸಮಾನತೆ ಹಾಗೂ ಮಾನವೀಯತೆ ಕುರಿತು ಮಾತನಾಡಿದ್ದು ದೂರದೃಷ್ಟಿ ಚಿಂತನೆ. ಡಾಂಭಿಕ ಭಕ್ತಿ ಕಟುವಾಗಿ ಟೀಕಿಸಿದ ಬಸವಣ್ಣ ಏಕದೇವೋಪಾಸನೆ ತತ್ವ ಪ್ರತಿಪಾದಿಸಿದರು.
ಸರ್ವರನ್ನೂ ತನ್ನವರೇ ಎಂದು ಕರೆಯುವ ಬಸವಣ್ಣನವರ ಕನಸಿನ ಸಮಾಜದಲ್ಲಿ ‘ಇವ ನಮ್ಮವನು, ಅವ ಪರನು’ ಎಂಬ ಭೇದಕ್ಕೆ ಜಾಗವಿರಲಿಲ್ಲ. ʼಇವನಾರವʼ ಎನ್ನದೆ ʼಇವನಮ್ಮವʼ ಎಂಬ ಸಮಾನತೆ ಆಶಯವು ಮನುಷ್ಯನನ್ನು ಜಾತಿ-ಕುಲದ ಗಡಿಗಳಾಚೆಗೆ ನೋಡುವ ಮಾನವೀಯ ದೃಷ್ಟಿಯನ್ನು ಪ್ರತಿಪಾದಿಸುತ್ತದೆ. ಇದು ಕೇವಲ ಮಾತಿನ ಸಮಾನತೆಯಲ್ಲ. ದೈನಂದಿನ ಬದುಕಿನಲ್ಲಿಯೂ ಸಮಾನತೆ ಅನುಷ್ಠಾನಗೊಳಿಸುವ ಪ್ರಯತ್ನವಾಗಿತ್ತು. ಮಹಿಳೆಯರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರು ಶರಣ ಚಳವಳಿಯಲ್ಲಿ ಭಾಗವಹಿಸಿದ್ದು ಈ ಪರಿವರ್ತನೆಯ ವ್ಯಾಪ್ತಿಯನ್ನು ತೋರಿಸುತ್ತದೆ.
ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಲಶವಯ್ಯಾ. ಕೂಡಲಸಂಗಮದೇವಾ, ಕೇಳಯ್ಯಾ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಮಾನವೀಯತೆ ಇದೆ. ʼದಯವೇ ಧರ್ಮದ ಮೂಲʼ ಎಂಬ ಆಶಯವು ಧರ್ಮದ ಹೃದಯವಾಗಿದೆ. ಧರ್ಮ ಮನುಷ್ಯನನ್ನು ಮನುಷ್ಯನಿಂದ ದೂರ ಮಾಡುವುದಾದರೆ ಅಂತಹ ಧರ್ಮದ ಅರ್ಥವೇನು ಎಂಬ ಪ್ರಶ್ನೆಯನ್ನು ಅವರ ಚಿಂತನೆ ನಮ್ಮ ಮುಂದಿಡುತ್ತದೆ. ಬಸವಣ್ಣನವರು ದೇವರ ಅಸ್ತಿತ್ವವನ್ನು ನಿರಾಕರಿಸಲಿಲ್ಲ. ಆದರೆ ದೇವರನ್ನು ಕೇವಲ ಸ್ಥಾವರದೊಳಗೆ ಹುಡುಕುವುದನ್ನು ಪ್ರಶ್ನಿಸಿದರು. ʼಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲʼ ಎಂಬ ಚಿಂತನೆಯ ಮೂಲಕ ಚಲನಶೀಲ ಬದುಕಿಗೆ ಮಹತ್ವ ನೀಡಿದರು.
ದಯವಿಲ್ಲದ ಧರ್ಮವದೇವುದಯ್ಯಾ ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.ದಯವೇ ಧರ್ಮದ ಮೂಲವಯ್ಯಾ, ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
ʼಎನ್ನ ದೇಹವೇ ದೇವಾಲಯʼಎಂಬ ಅವರ ನಿಲುವು ದೇವರನ್ನು ಹೊರಗಿನ ಕಟ್ಟಡದಿಂದ ಒಳಗಿನ ಅರಿವಿನ ಕಡೆಗೆ ತರುವ ಪ್ರಯತ್ನವಾಗಿದೆ. ರಾಜ್ಯಶಕ್ತಿಗೆ ಸವಾಲಾಗಿದ್ದ ಕಾಯಕ ಚಳವಳಿ ಸಮಾನತೆ, ವೈಜ್ಞಾನಿಕ ಮತ್ತು ವೈಚಾರಿಕತೆಯ ನೆಲೆಯಲ್ಲಿ ಸಾಗಿದ ಚಳವಳಿ ಮುಂದೆ ರಾಜಶಕ್ತಿಯೊಂದಿಗೆ ಸಂಘರ್ಷಕ್ಕೆ ಕಾರಣವಾಯಿತು. ಲಾವಣ್ಣ-ಹರಳಯ್ಯನವರ ಮಗನ ವಿವಾಹ ಸೇರಿದಂತೆ ಶರಣರ ಸಾಮಾಜಿಕ ಪ್ರಯೋಗಗಳು ಅಂದಿನ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಅಂತಿಮವಾಗಿ ಶರಣರು ಕಲ್ಯಾಣ ನೆಲ ಬಿಟ್ಟು ದಿಕ್ಕುಪಾಲಾದರು.
ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನಗಳ ನಡುವೆಯೂ ಶರಣರ ನಿಲುವು ಧೃತಿಗೆಡಲಿಲ್ಲ. ಅವರ ವಚನಗಳಲ್ಲಿ ಕಾಣುವ ಆತ್ಮವಿಶ್ವಾಸ ಮತ್ತು ಎದೆಗಾರಿಕೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಬಂಡಾಯ ಧ್ವನಿ ಇದ್ದೇ ಇರುತ್ತದೆ, ಅದಕ್ಕೆ ವಿರೋಧಿಸಿದರೆ ʼಅಂಜುವವರು ನಾವಲ್ಲʼ ಎಂದು ಎದೆಗಾರಿಕೆ ಶರಣರು ತೋರಿಸಿದರು. 12ನೇ ಶತಮಾನದ ಶರಣ ಚಳವಳಿಯನ್ನು ಕೇವಲ ಧಾರ್ಮಿಕ ಬೆಳವಣಿಗೆಯಾಗಿ ನೋಡುವ ಬದಲು, ಸಾಮಾಜಿಕ ಮತ್ತು ವೈಚಾರಿಕ ಚಳವಳಿಯ ದೃಷ್ಟಿಯಿಂದಲೂ ಅಧ್ಯಯನ ಮಾಡುವುದು ಅಗತ್ಯವಾಗಿದೆ.
ನಾಳೆ ಬಪ್ಪುದು ನಮಗಿಂದೆ ಬರಲಿ, ಇಂದು ಬಪ್ಪುದು ನಮಗೀಗಲೆ ಬರಲಿ, ಇದಕಾರಂಜುವರು, ಇದಕಾರಳುಕುವರು `ಜಾತಸ್ಯ ಮರಣಂ ಧ್ರುವಂ’ ಎಂದುದಾಗಿ ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆಹರಿಬ್ರಹ್ಮಾದಿಗಳಿಗಳವಲ್ಲ
ವಚನ ಸಾಹಿತ್ಯ ಕನ್ನಡ ಭಾಷೆಗೆ ನೀಡಿದ ಬಹುದೊಡ್ಡ ಕೊಡುಗೆ. ಸಾಮಾನ್ಯ ಜನರ ಬದುಕು, ಕಾಯಕ, ನೋವು, ಅನುಭವ, ಪ್ರಶ್ನೆ ಹಾಗೂ ಸಾಮಾಜಿಕ ವಾಸ್ತವಗಳನ್ನು ಸುಳಿದ ಬಾಳೆಯ ಹಣ್ಣಿನಂತೆ ಅತ್ಯಂತ ಸರಳ ಭಾಷೆಯಲ್ಲಿ ವ್ಯಕ್ತಪಡಿಸಿದ ವಚನಕಾರರು ಸಾಹಿತ್ಯವನ್ನು ಜನಸಾಮಾನ್ಯರ ಬಳಿಗೆ ತಂದರು. ಅದು ವಿಶ್ವಸಾಹಿತ್ಯ ಮನ್ನಣೆಗೆ ಪಾತ್ರವಾಗಿದ್ದು ಇತಿಹಾಸ.
ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳವಳಿಯು ಕನ್ನಡ ಸಾಹಿತ್ಯದ ಬೆಳವಣಿಗೆಗೂ ಹೊಸ ದಿಕ್ಕು ನೀಡಿತು. ಅನುಭವದಿಂದ ಹುಟ್ಟಿದ ಮಾತು ವಚನವಾಗಿ, ವಚನವು ಸಾಮಾಜಿಕ ಅರಿವಿನ ಮಾಧ್ಯಮವಾಗಿ ರೂಪುಗೊಂಡಿತು. ಇದರಿಂದಲೇ ವಚನ ಪರಂಪರೆ ಕನ್ನಡದ ವೈಚಾರಿಕ ಮತ್ತು ಸಾಮಾಜಿಕ ಸಾಹಿತ್ಯದ ಪ್ರಮುಖ ಅಧ್ಯಾಯವಾಗಿ ಉಳಿದಿದೆ. ಎಂ.ಎಂ.ಕಲಬುರ್ಗಿ ಅವರು ಹೇಳುವಂತೆ ʼಲಿಂಗಾಯತ ಧರ್ಮʼ ಕನ್ನಡದಲ್ಲಿ ಹುಟ್ಟಿದ ಮೊದಲ ಧರ್ಮ, ಅಷ್ಟೇ ಅಲ್ಲದೆ ಜಗತ್ತಿಗೆ ಕನ್ನಡದ ಕೊಡುಗೆ ಎಂದರೆ ವೈಚಾರಿಕ ಸಾಹಿತ್ಯ ಒಳಗೊಂಡ ಲಿಂಗಾಯತ ಧರ್ಮʼ ಎಂಬುದು ನಿಜಕ್ಕೂ ಸತ್ಯವೇ ಆಗಿದೆ.
ಆರು ಮುನಿದು ನಮ್ಮನೇನ ಮಾಡುವರು ಊರು ಮುನಿದು ನಮ್ಮನೆಂತು ಮಾಡುವರು ನಮ್ಮ ಕುನ್ನಿಗೆ ಕೂಸ ಕೊಡಬೇಡ. ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ. ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ, ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ
ಅಂದು ಸಮಾಜವನ್ನು ಕಾಡುತ್ತಿದ್ದ ಅನೇಕ ಅನಿಷ್ಠ ಆಚರಣೆ, ಮೌಢ್ಯ, ಜಾತಿಯತೆಯ ಸ್ವರೂಪ ಬದಲಾಗಿರಬಹುದು. ಆದರೆ ಅಸಮಾನತೆ, ಶೋಷಣೆ, ಜಾತಿ-ವರ್ಗದ ಭೇದ, ಆರ್ಥಿಕತೆ ತಾರತಮ್ಮ ಹಾಗೂ ಧಾರ್ಮಿಕ ಸಂಘರ್ಷಗಳು ಇಂದಿಗೂ ಸಂಪೂರ್ಣವಾಗಿ ಮರೆಯಾಗಿಲ್ಲ. ಬಸವಣ್ಣ ಹಾಗೂ ಸಮಕಾಲೀನ ವಚನಕಾರರನ್ನು ಪ್ರತಿಮೆಗಳಲ್ಲೋ, ಜಯಂತಿ ಆಚರಣೆಗಳಲ್ಲೋ ಸೀಮಿತಗೊಳಿಸುವ ಬದಲು ಅವರ ಚಿಂತನೆಗಳನ್ನು ಬದುಕಿನ ಭಾಗವನ್ನಾಗಿಸಿ ಪರಿಣಾಮಕಾರಿ ಜಾರಿಗೊಳಿಸಲು ಕಂಕಣಬದ್ಧರಾಗಿ ಶ್ರಮಿಸುವುದು ಕಾಲದ ಅನಿವಾರ್ಯ.
ಬಸವಣ್ಣನವರನ್ನು ದೈವತ್ವದ ಚೌಕಟ್ಟಿನಲ್ಲಿ ಮಾತ್ರ ಬಂಧಿಸಿದಾಗ ಅವರ ಪ್ರಶ್ನಿಸುವ ಮನಸ್ಸು, ವೈಚಾರಿಕತೆ ಮತ್ತು ಸಾಮಾಜಿಕ ಕ್ರಾಂತಿಯ ಆಯಾಮಗಳು ಮರೆಯಾಗುವ ಅಪಾಯವಿದೆ. ಅವರು ಯಾವುದೇ ಒಂದು ಸಮುದಾಯದ ಸ್ವತ್ತಲ್ಲ. ಮನುಷ್ಯನ ಘನತೆ, ಸಮಾನತೆ ಮತ್ತು ಮಾನವೀಯತೆಯನ್ನು ಪ್ರತಿಪಾದಿಸಿದ ವಿಶ್ವಮಾನವ ಚಿಂತಕರಾಗಿ ಅವರನ್ನು ಓದಬೇಕಾಗಿದೆ. ಕಲಿಯಬೇಕಿದೆ, ಕಲಿಸಬೇಕಾಗಿದೆ.
ನ್ಯಾಯನಿಷ್ಠುರಿ:ದಾಕ್ಷಿಣ್ಯಪರ ನಾನಲ್ಲ, ಲೋಕವಿರೋದಿ:ಶರಣನಾರಿಗಂಜುವನಲ್ಲ, ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.
ಬಸವಣ್ಣನವರ ಚಿಂತನೆಯ ಅಂತಿಮ ಗುರಿ ಕೇವಲ ವ್ಯಕ್ತಿಯ ಆಧ್ಯಾತ್ಮಿಕ ಮುಕ್ತಿಯಲ್ಲ. ಸಮುದಾಯದ ಬದುಕಿನ ಪರಿವರ್ತನೆಯೂ ಆಗಿತ್ತು. ಕಾಯಕಕ್ಕೆ ಗೌರವ, ದಾಸೋಹಕ್ಕೆ ಮೌಲ್ಯ, ಸಮಾನತೆಗೆ ಸ್ಥಾನ, ಪ್ರಶ್ನಿಸುವ ಮನಸ್ಸಿಗೆ ಸ್ವಾತಂತ್ರ್ಯ ಮತ್ತು ಮನುಷ್ಯನಿಗೆ ಮನುಷ್ಯನ ಗೌರವ. ಇವುಗಳ ಸಮನ್ವಯವೇ ಬಸವಣ್ಣನವರ ಚಿಂತನೆಯ ಜೀವಾಳ. ಆದ್ದರಿಂದ ಬಸವಣ್ಣನವರನ್ನು ನೆನಪಿಸಿಕೊಳ್ಳುವುದು ಎಂದರೆ ಅವರ ಹೆಸರನ್ನು ಜಪಿಸುವುದಷ್ಟೇ ಅಲ್ಲ. ಅವರ ಪ್ರಶ್ನೆಗಳನ್ನು ನಮ್ಮ ಕಾಲದ ಮುಂದೆ ಇಡುವುದು. ಅವರ ವಚನಗಳನ್ನು ಓದುವುದು ಮಾತ್ರವಲ್ಲ; ಅವುಗಳ ಆಶಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು.
ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ, ಕೂಡಲಸಂಗಮದೇವನೆಂತೊಲಿವನಯ್ಯಾ
ಮನುಷ್ಯನ ವ್ಯಕ್ತಿತ್ವ ನಡೆ-ನುಡಿಯಲ್ಲಿ ರೂಪುಗೊಳ್ಳುತ್ತದೆ. ಕಳವು, ಕೊಲೆ, ಹುಸಿ, ಅಸಹ್ಯದಂತಹ ಸಮಾಜಘಾತುಕ ಯೋಚನೆಗಳಿಂದ ಹೊರಬಂದು ಮಾತು ಮುತ್ತಿನ ಹಾರದಂತಿರಬೇಕು, ಮಾಣಿಕ್ಯದ ದೀಪ್ತಿ, ಸ್ಪಟಿಕದ ಸಲಾಕೆಯಂತೆ ಒಬ್ಬರ ಮನ ನೋಯಿಸದಂತೆ ಇರಬೇಕು ಎಂಬ ಚಿಂತನೆಯನ್ನು ಬಸವಣ್ಣ ನುಡಿಯುತ್ತಾರೆ.
ಇದನ್ನೂ ಓದಿ : ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!
ಕಾಯಕಕ್ಕೆ ಗೌರವ ಸಿಗುವ, ದಯೆ ಧರ್ಮವಾಗುವ, ಸಮಾನತೆ ಬದುಕಿನ ಮೌಲ್ಯವಾಗುವ ಹಾಗೂ ಮನುಷ್ಯ ಮನುಷ್ಯನನ್ನು ತನ್ನವನಾಗಿ ಕಾಣುವ ಸಮಾಜವೇ ಬಸವಣ್ಣನವರ ಕನಸಿನ ಕಲ್ಯಾಣದ ದಿಕ್ಕು. ಅಂತಹ ಸಮಾಜ ನಿರ್ಮಾಣವಾಗಬೇಕಾದರೆ ಬಸವಣ್ಣನವರನ್ನು ಪೂಜಿಸುವುದಕ್ಕಿಂತ ಅವರನ್ನು ವಿಚಾರಧಾರೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅವರನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಅವರ ವಿಚಾರಧಾರೆಗಳನ್ನು ಅನುಷ್ಠಾನಕ್ಕೆ ತಂದರೆ ಬಸವಾದಿ ಶರಣರು ಎಲ್ಲ ಕಾಲಕ್ಕೂ ಜೀವಂತವಾಗಿರುತ್ತಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



