ಕೈಗಾರಿಕಾ ಬೆಳವಣಿಗೆಗೆ ವೇಗ ನೀಡುವುದರ ಜತೆಗೆ ಸ್ಥಳೀಯ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದ ಉದ್ಯೋಗ ನಿಧಿ ಯೋಜನೆಯ ವ್ಯಾಪ್ತಿಗೆ ಇದೀಗ ಬಾಗಲಕೋಟೆ ಜಿಲ್ಲೆ ಸೇರ್ಪಡೆಯಾಗಿದೆ.
ಆರಂಭಿಕ ಹಂತದಲ್ಲಿ ಯೋಜನೆಯ ಪಟ್ಟಿಯಿಂದ ಬಾಗಲಕೋಟೆ ಜಿಲ್ಲೆಯನ್ನು ಹೊರಗಿಡಲಾಗಿತ್ತು. ಜಿಲ್ಲೆಯ ಕೈಗಾರಿಕಾ ಸಾಮರ್ಥ್ಯ, ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹಾಗೂ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಅಗತ್ಯವನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯನ್ನು ಯೋಜನೆಗೆ ಸೇರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೊಸ ಉದ್ಯೋಗಕ್ಕೆ ಸರ್ಕಾರದ ಪ್ರೋತ್ಸಾಹ
ಪ್ರೊ. ಎಂ. ಗೋವಿಂದ ರಾವ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ರೂಪಿಸಲಾಗಿರುವ ಈ ಯೋಜನೆಯಡಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಿಗಳಿಗೆ ಸರ್ಕಾರದಿಂದ ಆರ್ಥಿಕ ಪ್ರೋತ್ಸಾಹ ದೊರೆಯಲಿದೆ.
This video cannot be played in your browser. Open the video directly
ಯೋಜನೆಯಡಿ ಪ್ರತಿ ಹೊಸ ಉದ್ಯೋಗಿಗೆ ತಿಂಗಳಿಗೆ ₹2,500ರಂತೆ ಗರಿಷ್ಠ 24 ತಿಂಗಳ ಅವಧಿಗೆ ಪ್ರೋತ್ಸಾಹಧನ ನೀಡುವ ವ್ಯವಸ್ಥೆ ಇದೆ. ಮುಂದಿನ ಎರಡು ವರ್ಷಗಳಲ್ಲಿ ಒಟ್ಟು 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಯೋಜನೆಯ ಪ್ರಯೋಜನ ಪಡೆಯುವ ಉದ್ಯೋಗಿ ಅಧಿಸೂಚಿತ ಜಿಲ್ಲೆಯ ನಿವಾಸಿಯಾಗಿರಬೇಕು ಹಾಗೂ 18ರಿಂದ 45 ವರ್ಷದೊಳಗಿನವರಾಗಿರಬೇಕೆಂಬ ಷರತ್ತು ವಿಧಿಸಲಾಗಿದೆ.
MSME ಘಟಕಗಳಿಗೆ ಅವಕಾಶ
ಉದ್ಯಮ್ ಪೋರ್ಟಲ್‌ನಲ್ಲಿ ನೋಂದಾಯಿತವಾಗಿರುವ ಉತ್ಪಾದನಾ ಮತ್ತು ಸೇವಾ ವಲಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳು ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅರ್ಹವಾಗಿವೆ.
ಯೋಜನೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ರಚಿಸಲಾಗುತ್ತದೆ. ಪ್ರೋತ್ಸಾಹಧನ ಬಿಡುಗಡೆ ಮಾಡುವ ಮೊದಲು ಸಂಬಂಧಿಸಿದ ಕೈಗಾರಿಕಾ ಘಟಕಗಳ ಭೌತಿಕ ಪರಿಶೀಲನೆಯನ್ನೂ ನಡೆಸಲಾಗುತ್ತದೆ.
11 ಜಿಲ್ಲೆಗಳ ಪಟ್ಟಿಯಲ್ಲಿ ಬಾಗಲಕೋಟೆ
ಉದ್ಯೋಗ ನಿಧಿ ಯೋಜನೆಯ ವ್ಯಾಪ್ತಿಗೆ ಈಗ ಯಾದಗಿರಿ, ಬೀದರ್, ರಾಯಚೂರು, ಕಲಬುರಗಿ, ಕೊಪ್ಪಳ, ವಿಜಯನಗರ, ಬೆಳಗಾವಿ, ಗದಗ, ಹಾವೇರಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳು ಸೇರಿವೆ.
ಇದನ್ನೂ ಓದಿದ್ದೀರಾ? ತೇರದಾಳ | ಜನರ ಬಳಿಗೆ ಸರ್ಕಾರ: 418 ಅಹವಾಲು ಸ್ವೀಕಾರ, 12ಕ್ಕೆ ಪರಿಹಾರ
ಬಾಗಲಕೋಟೆ ಜಿಲ್ಲೆ ಯೋಜನೆಗೆ ಸೇರ್ಪಡೆಯಾಗಿರುವುದರಿಂದ ಹೊಸ ಕೈಗಾರಿಕೆಗಳ ಸ್ಥಾಪನೆ, ಖಾಸಗಿ ಹೂಡಿಕೆ ಹಾಗೂ ಸ್ಥಳೀಯ ಯುವಜನರಿಗೆ ಉದ್ಯೋಗ ಸೃಷ್ಟಿಗೆ ಉತ್ತೇಜನ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.





