ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಇನ್ನೂ ಹಲವು ತಿಂಗಳು ದೂರವಿದ್ದರೂ, ಮಹಿಳಾ ಮತದಾರರನ್ನು ಸೆಳೆಯುವ ರಾಜಕೀಯ ಪೈಪೋಟಿ ಈಗಾಗಲೇ ತೀವ್ರಗೊಂಡಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ನಗದು ನೆರವು ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ಪರಿಗಣಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹೊಸ ಘೋಷಣೆ ಮಾಡಿದ್ದಾರೆ. ಎಸ್‌ಪಿ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ ವರ್ಷಕ್ಕೆ ₹40,000 ಆರ್ಥಿಕ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಹಿಳೆಯರನ್ನು ಕೇವಲ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಿ ನೋಡದೆ, ಪ್ರತ್ಯೇಕ ಹಾಗೂ ನಿರ್ಣಾಯಕ ಮತಬ್ಯಾಂಕ್ ಆಗಿ ರಾಜಕೀಯ ಪಕ್ಷಗಳು ಪರಿಗಣಿಸುತ್ತಿರುವುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ.
ಏಪ್ರಿಲ್ 10ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಒಟ್ಟು 13.39 ಕೋಟಿ ನೋಂದಾಯಿತ ಮತದಾರರಿದ್ದು, 6.09 ಕೋಟಿ ಮಹಿಳಾ ಮತದಾರರಿದ್ದಾರೆ. ಅಂದರೆ, ರಾಜ್ಯದ ಒಟ್ಟು ಮತದಾರರಲ್ಲಿ ಮಹಿಳೆಯರ ಪಾಲು ಶೇ 45.46ರಷ್ಟಿದೆ. ಪುರುಷ ಮತದಾರರ ಪ್ರಮಾಣ ಶೇ 54.54ರಷ್ಟಿದೆ.
ರಾಜ್ಯದ 403 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಒಲವು ಸ್ವಲ್ಪ ಪ್ರಮಾಣದಲ್ಲಿ ಬದಲಾದರೂ ಅದು ಚುನಾವಣಾ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಬಲ್ಲದು. ಹೀಗಾಗಿ 2027ರ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಸೆಳೆಯುವುದು ಬಿಜೆಪಿ ಮತ್ತು ಎಸ್‌ಪಿ ಸೇರಿದಂತೆ ಪ್ರಮುಖ ಪಕ್ಷಗಳಿಗೆ ಮಹತ್ವದ ರಾಜಕೀಯ ತಂತ್ರವಾಗಲಿದೆ.
ಬಿಜೆಪಿ ಸರ್ಕಾರ ಬಡ ಕುಟುಂಬಗಳ ಮಹಿಳೆಯರಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆಯನ್ನು ಪರಿಗಣಿಸುತ್ತಿದೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಕುಟುಂಬಗಳಿಗೆ ನೇರವಾಗಿ ತಲುಪುವ ಕಲ್ಯಾಣ ಯೋಜನೆಗಳ ಮೂಲಕ ಮತದಾರರೊಂದಿಗೆ ಸಂಪರ್ಕ ಸಾಧಿಸುತ್ತಿರುವ ಬಿಜೆಪಿಗೆ, ಮಹಿಳೆಯರನ್ನು ಗುರಿಯಾಗಿಸಿಕೊಂಡ ನಗದು ನೆರವು ಯೋಜನೆ ಮತ್ತೊಂದು ಪ್ರಮುಖ ಚುನಾವಣಾ ಅಸ್ತ್ರವಾಗುವ ಸಾಧ್ಯತೆಯಿದೆ.
ಆದರೆ, ಈ ವರದಿಯನ್ನೇ ಆಧಾರವಾಗಿಸಿಕೊಂಡು ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಿಳೆಯರಿಗೆ ₹20,000 ನೀಡುವ ಪ್ರಸ್ತಾವನೆಯನ್ನು ಅವರು ‘ಜುಮ್ಲಾ’ ಎಂದು ಟೀಕಿಸಿದ್ದು, ಚುನಾವಣೆಯಲ್ಲಿ ಮತ ಕೇಳಲು ಬಿಜೆಪಿಯ ಬಳಿ ಹಣವೊಂದೇ ಉಳಿದಿದೆ ಎಂದು ಆರೋಪಿಸಿದ್ದಾರೆ.
ಇದರ ಬೆನ್ನಲ್ಲೇ ಎಸ್‌ಪಿ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ ವರ್ಷಕ್ಕೆ ₹40,000 ನೀಡುವುದಾಗಿ ಘೋಷಿಸಿರುವ ಅಖಿಲೇಶ್, ಈ ಮೊತ್ತವನ್ನು ಪ್ರತಿವರ್ಷ ಹೆಚ್ಚಿಸುವುದಾಗಿಯೂ ಹೇಳಿದ್ದಾರೆ.
ಅಖಿಲೇಶ್ ಅವರ ಘೋಷಣೆಯ ಮಹತ್ವ ಕೇವಲ ₹40,000 ಮೊತ್ತದಲ್ಲಿಲ್ಲ. ಬಿಜೆಪಿ ತನ್ನ ಯೋಜನೆಯನ್ನು ಅಧಿಕೃತವಾಗಿ ಘೋಷಿಸುವ ಮುನ್ನವೇ ಎಸ್‌ಪಿ ತನ್ನದೇ ಆದ ಮಾನದಂಡವನ್ನು ನಿಗದಿಪಡಿಸಲು ಮುಂದಾಗಿದೆ.
ಬಿಜೆಪಿ ₹20,000 ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಯೋಜನೆ ಘೋಷಿಸಿದರೆ, ಎಸ್‌ಪಿ ಅದನ್ನು ಕಡಿಮೆ ನೆರವು ಎಂದು ಬಿಂಬಿಸಬಹುದು. ಮತ್ತೊಂದೆಡೆ ಬಿಜೆಪಿ ಹೆಚ್ಚಿನ ಮೊತ್ತ ಘೋಷಿಸಿದರೆ, ಚುನಾವಣೆ ಕಲ್ಯಾಣ ಯೋಜನೆಗಳ ಭರವಸೆಗಳ ನಡುವಿನ ಪೈಪೋಟಿಯಾಗಿ ಬದಲಾಗುವ ಸಾಧ್ಯತೆಯಿದೆ.
ಮಹಿಳೆಯರಿಗೆ ನೆರವು ನೀಡುವುದಷ್ಟೇ ಮುಖ್ಯವಲ್ಲ; ಎಷ್ಟು ಹಣ, ಯಾವ ಷರತ್ತುಗಳಲ್ಲಿ ಮತ್ತು ಎಷ್ಟು ನಿರಂತರವಾಗಿ ನೀಡಲಾಗುತ್ತದೆ ಎಂಬುದೂ ಚುನಾವಣಾ ಚರ್ಚೆಯ ಭಾಗವಾಗಬೇಕು ಎಂಬ ಸಂದೇಶವನ್ನು ಅಖಿಲೇಶ್ ನೀಡಲು ಪ್ರಯತ್ನಿಸುತ್ತಿದ್ದಾರೆ.
ಮಹಿಳೆಯರಿಗೆ ನೇರವಾಗಿ ಹಣ ನೀಡುವ ಚುನಾವಣಾ ಭರವಸೆ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳಾ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ನೇರ ನಗದು ವರ್ಗಾವಣೆ ಯೋಜನೆಗಳನ್ನು ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಬಳಸಿವೆ.
ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್, ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ ₹2,000 ನೀಡುವ ‘ಗೃಹಲಕ್ಷ್ಮಿ’ ಯೋಜನೆಯನ್ನು ಭರವಸೆ ನೀಡಿತ್ತು.
ಮಹಾರಾಷ್ಟ್ರದಲ್ಲಿ 2024ರ ವಿಧಾನಸಭಾ ಚುನಾವಣೆಯ ವೇಳೆ ಮಹಾಯುತಿ ಸರ್ಕಾರದ ‘ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿನ್ ಯೋಜನೆ’ ಪ್ರಮುಖ ಚುನಾವಣಾ ವಿಷಯವಾಗಿತ್ತು. ಈ ಯೋಜನೆಯಡಿ ಅರ್ಹ ಮಹಿಳೆಯರಿಗೆ ತಿಂಗಳಿಗೆ ₹1,500 ನೀಡಲಾಗುತ್ತದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರದ ‘ಲಕ್ಷ್ಮೀರ್ ಭಂಡಾರ್’ ಯೋಜನೆಯಡಿ ನೀಡುವ ನೆರವನ್ನು 2026ರ ವಿಧಾನಸಭಾ ಚುನಾವಣೆಗೂ ಮುನ್ನ ಫೆಬ್ರವರಿಯಿಂದ ತಿಂಗಳಿಗೆ ₹500ರಷ್ಟು ಹೆಚ್ಚಿಸಲಾಯಿತು.
ಆದರೆ, ಇಂತಹ ಯೋಜನೆಗಳ ಅನುಷ್ಠಾನವೂ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ. ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ಆರಂಭವಾದ ಬಳಿಕ ಪಡಿತರ ಚೀಟಿ, ಆಧಾರ್ ಜೋಡಣೆ ಮತ್ತು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳಿಂದ ಫಲಾನುಭವಿಗಳು ತೊಂದರೆ ಎದುರಿಸಿದ್ದರು. ಕೆಲವು ಜಿಲ್ಲೆಗಳಲ್ಲಿ ಹಣ ಪಾವತಿಯಲ್ಲಿ ವಿಳಂಬವೂ ವರದಿಯಾಗಿತ್ತು.
ಮಹಾರಾಷ್ಟ್ರದ ಲಾಡ್ಕಿ ಬಹಿನ್ ಯೋಜನೆಯಲ್ಲೂ ಕಡ್ಡಾಯ ಇ-ಕೆವೈಸಿ ಹಾಗೂ ಆಧಾರ್–ಬ್ಯಾಂಕ್ ಖಾತೆ ಪರಿಶೀಲನೆಯಿಂದ ಕೆಲವು ಅರ್ಹ ಫಲಾನುಭವಿಗಳಿಗೆ ಹಣ ಪಡೆಯುವಲ್ಲಿ ವಿಳಂಬವಾಗಿದೆ. ಮಾಹಿತಿ ಹೊಂದಾಣಿಕೆಯಾಗದಿರುವುದು, ತಪ್ಪು ವಿವರಗಳ ಸಲ್ಲಿಕೆ ಹಾಗೂ ತಾಂತ್ರಿಕ ಸಮಸ್ಯೆಗಳು ಇದಕ್ಕೆ ಕಾರಣವೆಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಸುರಂಗ ಕುಸಿತ: 7 ಕಾರ್ಮಿಕರ ಸಾವು, 14 ಮಂದಿಗೆ ಗಾಯ
2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 559 ಮಹಿಳೆಯರು ಸ್ಪರ್ಧಿಸಿದ್ದರು. ಕಾಂಗ್ರೆಸ್ 155, ಬಿಜೆಪಿ 45, ಬಿಎಸ್‌ಪಿ 38 ಹಾಗೂ ಎಸ್‌ಪಿ ಸುಮಾರು 42 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಗೆಲುವು ಸಾಧಿಸಿದವರು ಕೇವಲ 47 ಮಂದಿ. ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ ಎಂಬ ಘೋಷಣೆಯೊಂದಿಗೆ ಮಹಿಳಾ ಪ್ರಾತಿನಿಧ್ಯಕ್ಕೆ ಪಕ್ಷ ಒತ್ತು ನೀಡಿತ್ತು. ಆದರೆ ಅದು ಚುನಾವಣಾ ಫಲಿತಾಂಶದಲ್ಲಿ ನಿರೀಕ್ಷಿತ ಲಾಭ ತಂದುಕೊಡಲಿಲ್ಲ. ಕಡಿಮೆ ಸಂಖ್ಯೆಯ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿಯೇ ಗೆದ್ದ ಮಹಿಳಾ ಅಭ್ಯರ್ಥಿಗಳ ಪೈಕಿ ಪ್ರಮುಖ ಪಾಲು ಪಡೆದಿತ್ತು. ಈ ಅನುಭವ ಎಸ್‌ಪಿಗೂ ಮಹತ್ವದ್ದಾಗಿದೆ. ಹೀಗಾಗಿ ಈ ಬಾರಿ ಮಹಿಳಾ ಪ್ರಾತಿನಿಧ್ಯದ ಪ್ರಶ್ನೆಯ ಜತೆಗೆ ನೇರ ಆರ್ಥಿಕ ಲಾಭದ ರಾಜಕೀಯದತ್ತ ಪಕ್ಷ ಗಮನ ಹರಿಸುತ್ತಿರುವುದು ಅಖಿಲೇಶ್ ಅವರ ಘೋಷಣೆಯಿಂದ ಸ್ಪಷ್ಟವಾಗುತ್ತಿದೆ.
ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುವ ಹಣವು, ಸಾಮಾನ್ಯ ಕುಟುಂಬ ಕಲ್ಯಾಣ ಯೋಜನೆಗಳಿಗಿಂತ ಸರ್ಕಾರ ಮತ್ತು ಫಲಾನುಭವಿಯ ನಡುವೆ ಹೆಚ್ಚು ನೇರವಾದ ರಾಜಕೀಯ ಸಂಬಂಧವನ್ನು ನಿರ್ಮಿಸಬಹುದು ಎಂಬ ಲೆಕ್ಕಾಚಾರ ಪಕ್ಷಗಳಲ್ಲಿದೆ. 2027ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಈ ಲೆಕ್ಕಾಚಾರ ಎಷ್ಟರ ಮಟ್ಟಿಗೆ ಮತವಾಗಿ ಪರಿವರ್ತನೆಯಾಗಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.




