ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಯಾಪುರ (ಪಿಪಲ್ಕೋಟಿ) ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗಕ್ಕೆ ಏಕಾಏಕಿ ಭಾರಿ ಪ್ರಮಾಣದ ನೀರು ಮತ್ತು ಅವಶೇಷಗಳು ನುಗ್ಗಿದ ಪರಿಣಾಮ 7 ಕಾರ್ಮಿಕರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಇನ್ನೋರ್ವ ಕಾರ್ಮಿಕ ಸುರಂಗದೊಳಗೆ ಸಿಲುಕಿಕೊಂಡಿದ್ದು, ಆತನನ್ನು ಸುರಕ್ಷಿತವಾಗಿ ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಗುರುವಾರ ಸಂಜೆ ಸುಮಾರು 6.30ರಿಂದ 6.45ರ ವೇಳೆಗೆ ಈ ಘಟನೆ ನಡೆದಿದೆ. ಟಿಎಚ್‌ಡಿಸಿ (THDC) ಜಲವಿದ್ಯುತ್ ಯೋಜನೆಗಾಗಿ ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ (HCC) ನಿರ್ಮಿಸುತ್ತಿದ್ದ ಸುರಂಗಕ್ಕೆ ಹಠಾತ್ತನೆ ನೀರು ಮತ್ತು ಮಣ್ಣು-ಅವಶೇಷಗಳು ನುಗ್ಗಿವೆ. ಆ ವೇಳೆ ಕರ್ತವ್ಯದಲ್ಲಿದ್ದ ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದರು.
ಘಟನೆ ಸಂಭವಿಸಿದ ತಕ್ಷಣವೇ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಸೇನೆ, ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ITBP), ಪೊಲೀಸರು ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಸುರಂಗದೊಳಗೆ ನುಗ್ಗಿರುವ ನೀರನ್ನು ಹೊರಹಾಕುವುದು ಹಾಗೂ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯವನ್ನು ಭಾರಿ ಯಂತ್ರೋಪಕರಣಗಳ ನೆರವಿನಿಂದ ಕೈಗೊಳ್ಳಲಾಗಿದೆ.
ನೀರಿನಿಂದಾಗಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ತಲುಪಲು SDRF ಸಿಬ್ಬಂದಿ ತಾತ್ಕಾಲಿಕವಾಗಿ ಸಿದ್ಧಪಡಿಸಿದ ಡ್ರಮ್ ದೋಣಿಗಳನ್ನೂ ಬಳಸುತ್ತಿದ್ದಾರೆ. ಜಿಲ್ಲಾ ಘಟನಾ ಪ್ರತಿಕ್ರಿಯಾ ಪಡೆ (DIRF), ಸ್ಥಳೀಯ ಪೊಲೀಸರು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡ 14 ಕಾರ್ಮಿಕರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ. ಉಳಿದವರಿಗೆ ಗೋಪೇಶ್ವರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತೀವ್ರ ಪ್ರತಿಕೂಲ ಹವಾಮಾನದ ನಡುವೆಯೂ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಪಿಪಲ್ಕೋಟಿಗೆ ತೆರಳಿ ರಕ್ಷಣಾ ಕಾರ್ಯಾಚರಣೆಯ ಪರಿಶೀಲಿಸಿದರು. ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಇಳಿಸುವುದೂ ಕಷ್ಟಕರವಾಗಿತ್ತು ಎಂದು ವರದಿಯಾಗಿದೆ.
ಸ್ಥಳಕ್ಕೆ ತೆರಳಿದ ಧಾಮಿ, ಜಿಲ್ಲಾಡಳಿತ, ಪೊಲೀಸ್, SDRF, NDRF ಸೇರಿದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸುರಂಗದೊಳಗೆ ಸಿಲುಕಿರುವ ಕಾರ್ಮಿಕನನ್ನು ಸುರಕ್ಷಿತವಾಗಿ ಹೊರತೆಗೆಯುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: SIR | ಬದುಕಿರುವವರನ್ನೇ ಮತಪಟ್ಟಿಯಲ್ಲಿ ಕೊಂದ ಚುನಾವಣಾ ಆಯೋಗ
“ಸುರಂಗದೊಳಗೆ ಸಿಲುಕಿರುವ ಪ್ರತಿಯೊಬ್ಬ ಕಾರ್ಮಿಕನನ್ನೂ ಸುರಕ್ಷಿತವಾಗಿ ಹೊರತೆಗೆಯುವುದು ಸರ್ಕಾರದ ಮೊದಲ ಆದ್ಯತೆ. ಎಲ್ಲ ಸಂಸ್ಥೆಗಳೂ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ,” ಎಂದು ಧಾಮಿ ತಿಳಿಸಿದ್ದಾರೆ.
ಚಮೋಲಿ ಜಿಲ್ಲಾಧಿಕಾರಿ ಗೌರವ್ ಕುಮಾರ್, ಘಟನೆ ನಡೆದಾಗ ಸುರಂಗದೊಳಗೆ ಒಟ್ಟು 22 ಕಾರ್ಮಿಕರಿದ್ದರು. ಅವರಲ್ಲಿ 21 ಮಂದಿಯನ್ನು ಪತ್ತೆಹಚ್ಚಲಾಗಿದ್ದು, ಓರ್ವ ಕಾರ್ಮಿಕನಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸುರಂಗಕ್ಕೆ ಭಾರಿ ಪ್ರಮಾಣದಲ್ಲಿ ನೀರು ಮತ್ತು ಅವಶೇಷಗಳು ಏಕಾಏಕಿ ನುಗ್ಗಲು ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆಯೇ ಪ್ರಮುಖ ಆದ್ಯತೆಯಾಗಿದ್ದು, ಸಿಲುಕಿರುವ ಕಾರ್ಮಿಕನನ್ನು ಸುರಕ್ಷಿತವಾಗಿ ಹೊರತೆಗೆಯಲು ತಂಡಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.




