ಬಿಜೆಪಿಯು ಇಂದು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಗೆ ನೂತನ ಉಸ್ತುವಾರಿಗಳನ್ನು ಹಾಗೂ ಸಹ-ಉಸ್ತುವಾರಿಗಳನ್ನು ನೇಮಕ ಮಾಡಿದೆ. ಹಿರಿಯ ನಾಯಕಿ ಸ್ಮೃತಿ ಇರಾನಿ ಅವರಿಗೆ ಹರಿಯಾಣ ಮತ್ತು ಛತ್ತೀಸಗಢ ರಾಜ್ಯಗಳ ಜವಾಬ್ದಾರಿ ನೀಡಲಾಗಿದ್ದು, ರಾಜಕೀಯವಾಗಿ ಅತಿ ಮಹತ್ವದ ಉತ್ತರ ಪ್ರದೇಶದ ಹೊಣೆಗಾರಿಕೆಯನ್ನು ವಿನೋದ್ ತಾವ್ಡೆ ಅವರಿಗೆ ವಹಿಸಲಾಗಿದೆ.
ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಹರೀಶ್ ದ್ವಿವೇದಿ ಅವರನ್ನು ನೇಮಿಸಲಾಗಿದ್ದು, ಕಾಸ್ಮ್ ವೆಂಕಟೇಶ್ವರಲು ಅವರು ಸಹ-ಉಸ್ತುವಾರಿಯಾಗಿ ಸಾಥ್ ನೀಡಲಿದ್ದಾರೆ. ಹರೀಶ್ ದ್ವಿವೇದಿ ಅವರು ಬಿಹಾರ ರಾಜ್ಯದ ಉಸ್ತುವಾರಿಯನ್ನೂ ನಿಭಾಯಿಸಲಿದ್ದಾರೆ. ವಿಶೇಷವೆಂದರೆ, ರಾಜ್ಯದ ಇಬ್ಬರು ನಾಯಕರಿಗೆ ನೆರೆ ರಾಜ್ಯಗಳ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಹುಬ್ಬಳ್ಳಿಯವರಾದ ರಾಜ್ಯಸಭಾ ಸದಸ್ಯ ಎಂ. ನಾಗರಾಜು ಅವರನ್ನು ಕೇರಳ ರಾಜ್ಯದ ಉಸ್ತುವಾರಿಯನ್ನಾಗಿ (ಸಹ-ಉಸ್ತುವಾರಿ: ಎಂ. ವೆಂಕಟೇಶನ್) ನೇಮಿಸಲಾಗಿದೆ. ಹಾಗೆಯೇ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಕುಮಾರ್ ಪಾಟೀಲ್ ಅವರನ್ನು ತೆಲಂಗಾಣದ ಸಹ-ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ (ಉಸ್ತುವಾರಿ: ಸುನಿಲ್ ಬನ್ಸಲ್, ಮತ್ತೊಬ್ಬರು ಸಹ-ಉಸ್ತುವಾರಿ: ರೇಖಾ ಶರ್ಮಾ).
ದಕ್ಷಿಣ ಭಾರತದ ಇತರ ರಾಜ್ಯಗಳಾದ ಆಂಧ್ರಪ್ರದೇಶಕ್ಕೆ ಅರವಿಂದ್ ಭದೋರಿಯಾ (ಸಹ: ವಾನತಿ ಶ್ರೀನಿವಾಸನ್) ಹಾಗೂ ತಮಿಳುನಾಡಿಗೆ ರಾಮ್ ಮಾಧವ್ (ಸಹ: ನಿರ್ಮಲ್ ಕುಮಾರ್ ಸುರಾನಾ, ಡಿ.ಕೆ. ಅರುಣಾ) ಅವರನ್ನು ನೇಮಿಸಲಾಗಿದೆ. ಪುದುಚೇರಿ ಉಸ್ತುವಾರಿಯಾಗಿ ಕೆ. ಸುರೇಂದ್ರನ್ ಕಾರ್ಯನಿರ್ವಹಿಸಲಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ಉಸ್ತುವಾರಿಯಾಗಿ ವಿನಯ್ ಸಹಸ್ರಬುದ್ಧೆ ನೇಮಕಗೊಂಡಿದ್ದು, ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಮತ್ತು ದರ್ಶನಾ ಜರ್ದೋಷ್ ಸಹ-ಉಸ್ತುವಾರಿಗಳಾಗಿದ್ದಾರೆ. ವಿನೋದ್ ತಾವ್ಡೆ ಉಸ್ತುವಾರಿಯಿರುವ ಉತ್ತರ ಪ್ರದೇಶ ರಾಜ್ಯಕ್ಕೆ ಜಗದೀಶ್ ಪಟೇಲ್, ಮೇಧಾ ಕುಲಕರ್ಣಿ, ಪ್ರದೀಪ್ ಶರ್ಮಾ ಮತ್ತು ಅನಂತ್ ಓಝಾ ಅವರನ್ನು ಸಹ-ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರಗಳೆರಡಕ್ಕೂ ಸತೀಶ್ ಪೂನಿಯಾ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದ್ದು, ಪಂಜಾಬ್‌ಗೆ ವೀರೇಂದ್ರ ಸಚ್‌ದೇವ ಮತ್ತು ಅಲ್ಕಾ ಗುರ್ಜರ್ ಹಾಗೂ ಜಮ್ಮು-ಕಾಶ್ಮೀರಕ್ಕೆ ರೀನಾ ಕಶ್ಯಪ್ ಸಹ-ಉಸ್ತುವಾರಿಗಳಾಗಿದ್ದಾರೆ. ಸ್ಮೃತಿ ಇರಾನಿ ಉಸ್ತುವಾರಿಯಿರುವ ಹರಿಯಾಣಕ್ಕೆ ಭೋಲಾ ಸಿಂಗ್ ಹಾಗೂ ಛತ್ತೀಸಗಢಕ್ಕೆ ಸಿದ್ಧಾರ್ಥ್ ಶಂಭು ಸಹ-ಉಸ್ತುವಾರಿಗಳಾಗಿದ್ದಾರೆ. ಹಿಮಾಚಲ ಪ್ರದೇಶಕ್ಕೆ ಶ್ರೀಕಾಂತ್ ಶರ್ಮಾ (ಸಹ: ದರ್ಶನಾ ಸಿಂಗ್) ಹಾಗೂ ಉತ್ತರಾಖಂಡಕ್ಕೆ ರಾಮ್ ಮಾಧವ್ (ಸಹ: ಅರವಿಂದ್ ಮೆನನ್, ಬಾನ್ಸುರಿ ಸ್ವರಾಜ್) ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಉಸ್ತುವಾರಿಯಾಗಿ ಬೈಜಯಂತ್ ಜಯ್ ಪಾಂಡಾ ನೇಮಕವಾಗಿದ್ದು, ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಸದಾನಂದ್ ಶೇಟ್ ತಾನಾವಡೆ ಮತ್ತು ಕಮಲ್‌ಜೀತ್ ಸೆಹ್ರಾವತ್ ಅವರು ಸಹ-ಉಸ್ತುವಾರಿಗಳಾಗಿ ಜವಾಬ್ದಾರಿ ಹಂಚಿಕೊಳ್ಳಲಿದ್ದಾರೆ. ಮಧ್ಯಪ್ರದೇಶಕ್ಕೆ ಬಾಬುಲ್ ಕುಮಾರ್ ದೇಬ್ (ಸಹ: ರೇಖಾ ವರ್ಮಾ), ಗುಜರಾತ್‌ಗೆ ತರುಣ್ ಚುಗ್ (ಸಹ: ಅಜಯ್ ಮಹಾವರ್, ಗೋಮತಿ ಸಾಯಿ), ರಾಜಸ್ಥಾನಕ್ಕೆ ಸಂಜಯ್ ಭಾಟಿಯಾ (ಸಹ: ಕವಿತಾ ಪಾಟೀದಾರ್, ಕುಲಜೀತ್ ಚಹಾಲ್) ಅವರನ್ನು ನೇಮಕ ಮಾಡಲಾಗಿದೆ. ಗೋವಾ ಉಸ್ತುವಾರಿಯಾಗಿ ಭಾರತಿ ಪ್ರವೀಣ್ ಪವಾರ್ ಹಾಗೂ ಸಹ-ಉಸ್ತುವಾರಿಯಾಗಿ ಅನಿಲ್ ಆಂಟನಿ ಕಾರ್ಯನಿರ್ವಹಿಸಲಿದ್ದಾರೆ.
ಪಶ್ಚಿಮ ಬಂಗಾಳದ ಉಸ್ತುವಾರಿಯಾಗಿ ಸುನಿಲ್ ಬನ್ಸಲ್ ನೇಮಕಗೊಂಡಿದ್ದು, ಲಾಲ್ ಸಿಂಗ್ ಆರ್ಯ, ರಾಜೇಂದ್ರ ಸಿಂಗ್ ಹಾಗೂ ಪಿಂಕಿ ಕುಶ್ವಾಹಾ ಅವರಿಗೆ ಸಹ-ಉಸ್ತುವಾರಿಗಳ ಹೊಣೆ ನೀಡಲಾಗಿದೆ. ಒಡಿಶಾಗೆ ಡಿ. ಪುರಂದೇಶ್ವರಿ (ಸಹ: ಸ್ವದೇಶ್ ಸಿಂಗ್), ಜಾರ್ಖಂಡ್‌ಗೆ ಗಜೇಂದ್ರ ಪಟೇಲ್ (ಸಹ: ಸೌರಭ್ ಸಿಂಗ್, ನಿವೇದಿತಾ ಸಿಂಗ್) ನೇಮಕವಾಗಿದ್ದಾರೆ. ಬಿಹಾರದ ಉಸ್ತುವಾರಿ ಹರೀಶ್ ದ್ವಿವೇದಿ ಅವರೊಂದಿಗೆ ಸಹ-ಉಸ್ತುವಾರಿಗಳಾಗಿ ಸಂಗೀತಾ ಯಾದವ್ ಹಾಗೂ ರೋಹನ್ ಗುಪ್ತಾ ಕಾರ್ಯನಿರ್ವಹಿಸಲಿದ್ದಾರೆ.
ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂ ಉಸ್ತುವಾರಿಯಾಗಿ ಮಂಗಲ್ ಪಾಂಡೆ (ಸಹ: ಫಾಂಗ್ನಾನ್ ಕೊನ್ಯಾಕ್, ಮನೋಜ್ ತಿಗ್ಗಾ), ಅರುಣಾಚಲ ಪ್ರದೇಶಕ್ಕೆ ದೇವೇಶ್ ಕುಮಾರ್ (ಬಿಹಾರ), ಮಣಿಪುರಕ್ಕೆ ರಾಜದೀಪ್ ರಾಯ್, ಮೇಘಾಲಯಕ್ಕೆ ಕಣಾದ್ ಪುರಕಾಯಸ್ಥ (ಸಹ: ನುಮಲ್ ಮೊಮಿನ್), ಮಿಜೋರಾಂಗೆ ಭಾಗವತ್ ಕರಾಡ್, ನಾಗಾಲ್ಯಾಂಡ್‌ಗೆ ಅನಿಲ್ ಆಂಟನಿ, ಸಿಕ್ಕಿಂಗೆ ರಾಜು ಬಿಸ್ತಾ ಹಾಗೂ ತ್ರಿಪುರಾಗೆ ಮೃಗಾಂಕ ದೇವ್ ಬರ್ಮನ್ ಅವರನ್ನು ನೇಮಿಸಲಾಗಿದೆ.
ಇನ್ನುಳಿದಂತೆ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್‌ಗೆ ದೆಹಲಿಯ ಜೈ ಪ್ರಕಾಶ್, ಚಂಡೀಗಢಕ್ಕೆ ಮಹೇಂದ್ರ ಪಾಂಡೆ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದೀವ್‌ಗೆ ವರ್ಷಾಬೆನ್ ನರೇಂದ್ರ ಭಾಯ್ ದೋಷಿ, ಲಡಾಖ್‌ಗೆ ದೆಹಲಿಯ ರಾಜ್‌ಕುಮಾರ್ ಭಾಟಿಯಾ ಹಾಗೂ ಲಕ್ಷದ್ವೀಪದ ಉಸ್ತುವಾರಿಯಾಗಿ ಜಾರ್ಜ್ ಕುರಿಯನ್ ಅವರನ್ನು ನೇಮಕ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ.




